ದೂರವಾಣಿ : 080-69999676
ಇಮೇಲ್ : Info@Vijayataranga.com


 

    45 

ಮಸೀದಿ ಧ್ವಂಸಕ್ಕೆ 25 ವರ್ಷ : ಜನರ ಮಿಶ್ರ ಪ್ರತಿಕ್ರಿಯೆ

 ಡಿಸೆಂಬರ್-6
ಮಡಿಕೇರಿ : ಬಾಬರಿ ಮಸೀದಿ ಧ್ವಂಸಕ್ಕೆ 25 ವರ್ಷ ಸಂದ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಸಂಭ್ರಮ ಮತ್ತು ಕರಾಳ ದಿನ ಆಚರಣೆ ನಡೆಯುತ್ತಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.ಮಡಿಕೇರಿಯಲ್ಲಿ ಹಿಂದೂ ಪರ ಸಂಘಟನೆಗಳು ಶೌರ್ಯ ದಿನದ ಹೆಸರಿನಲ್ಲಿ ಸಂಭ್ರಮ ಆಚರಿಸಿದರೆ, ರಾಮಮಂದಿರದ ಸಮೀಪದ ಮಸೀದಿಯಲ್ಲಿ ಮುಸ್ಲಿಂರು ಕರಾಳ ದಿನ ಆಚರಣೆ ನಡೆಸುತ್ತಿದ್ದು, ಎರಡು ಕೋಮಿನವರಿಗೆ ಮೆರವಣಿಗೆ ನಡೆಸದಂತೆ ಪೊಲೀಸರು ಸೂಚಿಸಿದ್ದಾರೆ. ಎರಡೂ ಕೋಮಿನ ಮೆರವಣಿಗೆ ಒಂದೇ ವೃತ್ತದಲ್ಲಿ ಸೇರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮೆರವಣಿಗೆಗೆ ಪೊಲೀಸರು ಅವಕಾಶ ಕಲ್ಪಿಸುತ್ತಿಲ್ಲ.

 

 

33  ಟಿಪ್ಪು ಜಯಂತಿಗೆ ವಿರೋಧ: ಪ್ರತಿಭಟನಾಕಾರರ ಬಂಧನ
 ನವೆಂಬರ್-10
ಮಡಿಕೇರಿ: ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆಗೆ ಮಡಿಕೇರಿಯಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ಟಿಪ್ಪು ಜಯಂತಿಯ ಆಚರಣೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರನ್ನು ಬಂಧಿಸಿದ್ದಾರೆ.
ಶಾಸಕ ಅಪ್ಪಚ್ಚುರಂಜನ್ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಪೊಲೀಸರು ತಡೆಯಲು ಪ್ರತಿಭಟನಾ ನಿರತರನ್ನು ಬಂಧಿಸಿದ್ದಾರೆ. ಪ್ರತಿಭಟನಾ ನಿರತರು ಟಿಪ್ಪು ವಿರುದ್ಧ ಘೋಷಣೆ ಕೂಗಿದ್ದಾರೆ. ರಾಜ್ಯಾದ್ಯಂತ ತೀವ್ರ ವಿರೋಧದ ನಡುವೆಯೂ ಟಿಪ್ಪು ಜಯಂತಿಯನ್ನು ಸೆಕ್ಷನ್ ನಿಷೇದಾಜ್ಞೆಯನ್ನು ಜಾರಿಗೆ ತಂದು ಆಚರಿಸಲಾಗುತ್ತಿದೆ.

 

 

 

 

     

ಟಿಪ್ಪು ಜಯಂತಿ ಕೊಡಗಿನಲ್ಲಿ ಭಾರಿ ಬಿಗಿ ಭದ್ರತೆ

ನವೆಂಬರ್-9
ಮಡಿಕೇರಿ: ಟಿಪ್ಪು ಜಯಂತಿ ಆಚರಣೆಗೆ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡಿದೆ. ಯಾರು ಸಹ ಆತಂಕಪಡುವ ಅಗತ್ಯವಿಲ್ಲ. ಇತರೆ ಜಯಂತಿಗಳಂತೆ ಈ ಜಯಂತಿಯೂ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ನ.10 ರಂದು ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಹಾಗೆಯೇ ವಿರಾಜಪೇಟೆಯ ತಾಲ್ಲೂಕು ಕಚೇರಿಯಲ್ಲಿ ಮತ್ತು ಸೋಮವಾರಪೇಟೆಯ ಜೂನಿಯರ್ ಕಾಲೇಜಿನ ಚೆನ್ನಬಸಪ್ಪ ಸಭಾಂಗಣದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ನಡೆಯಲಿದೆ ಎಂದು ತಿಳಿಸಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಮಾತನಾಡಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಂದೋಬಸ್ತ್ ಕಾರ್ಯಕೈಗೊಳ್ಳಲಾಗಿದ್ದು, ಕೇರಳ ರಾಜ್ಯದ ಕಣ್ಣೂರು, ವಯನಾಡ್, ಕಾಸರಗೋಡು ಹಾಗೂ ಹಾಸನ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗೆ ಹೊಂದಿಕೊಂಡಂತಹ 10 ಚೆಕ್ಪೋಸ್ಟ್ ಗಳು ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಚೆಕ್ಪೋಸ್ಟ್ ಗಳಲ್ಲಿ ಒಟ್ಟು 40 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದರು.ಹೊರಜಿಲ್ಲೆ ಹಾಗೂ ಹೊರರಾಜ್ಯದಿಂದ ಬರುವಂತಹ ಎಲ್ಲಾ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ ಹಾಗೂ 60 ಆಂತರಿಕ ವಿಶೇಷ ಚೆಕ್ಪೋಸ್ಟ್ ಗಳು ಪೊಲೀಸ್ ಠಾಣಾ ಮಟ್ಟದಲ್ಲಿ ಕಾರ್ಯನಿರ್ವಹಿಸಲಿವೆ. ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆಗಳಲ್ಲಿ ಒಟ್ಟು 249 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಎಲ್ಲ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿರಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಯಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನೇಮಿಸಲಾಗಿದ್ದು, 01 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 08 ಡಿವೈಎಸ್ಪಿ, 23 ಪೊಲೀಸ್ ಇನ್ಸ್ಪೆಕ್ಟರ್, 68 ಸಬ್ ಇನ್ಸ್ಪೆಕ್ಟರ್, 113 ಎಎಸ್ಐ, 1500 ಹೆಚ್ಸಿ, ಪಿಸಿ, ಮಹೆಚ್ಸಿ, ಮಪಿಸಿ, 27ಡಿಎಆರ್ ತುಕಡಿಗಳು, 15 ಕೆಎಸ್ಆರ್ಪಿ ತುಕಡಿಗಳು ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆಯ ಒಂದು ಕಂಪೆನಿಯನ್ನು ನಿಯೋಜಿಸಿರುವುದಾಗಿ ಹೇಳಿದರು.100 ವಾಹನಗಳನ್ನು ದಿನದ 24 ಗಂಟೆ ಗಸ್ತಿಗೆ ನೇಮಿಸಲಾಗಿರುತ್ತದೆ. ಇದಲ್ಲದೆ, ಅರಣ್ಯ ಇಲಾಖೆಯ ವತಿಯಿಂದ 14 ರ್ಯಾಪಿಡ್ ರೆಸ್ಪಾನ್ಸ್ ತಂಡವನ್ನು ಹಾಗೂ 75 ಸಿಬ್ಬಂದಿಗಳನ್ನು ಪೊಲೀಸರೊಂದಿಗೆ ಸಹಕರಿಸಲು ನಿಯೋಜಿಸಲಾಗಿರುತ್ತದೆ. ಕಂದಾಯ ಇಲಾಖೆಯ ವತಿಯಿಂದ 16 ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯವರನ್ನು ಎಲ್ಲಾ ಹೋಬಳಿ ಕೇಂದ್ರಗಳಿಗೆ ನಿಯೋಜಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

 

  

   ಒಡತಿಯನ್ನು ರಕ್ಷಿಸಿದ ನಾಯಿ

ಅಕ್ಟೋಬರ್-31

ಮಡಿಕೇರಿ: ಆನೆ ದಾಳಿಗೆ ತುತ್ತಾಗಿದ್ದ ಮಹಿಳೆಯನ್ನು ನಾಯಿ ರಕ್ಷಿಸಿದ ಘಟನೆ ಮಡಿಕೇರಿ ಸಮೀಪದ ಕಡಕತಾಳು ಗ್ರಾಮದ ಬಳಿ ನಡೆದಿದೆ.
10 ವರ್ಷಗಳಿಂದ ಗ್ರಾಮದಲ್ಲಿ ನೆಲೆಸಿರುವ ತಮಿಳುನಾಡು ಮೂಲದ ನಲ್ಲಮ್ಮ ಅಪಾಯದಿಂದ ಪಾರಾದ ಮಹಿಳೆ. ನಿನ್ನೆ ಅವರು ತೋಟಕ್ಕೆ ಹೋಗುವಾಗ ಕಾಡಾನೆ ಹಿಂಬದಿಯಿಂದ ದಾಳಿ ಮಾಡಿದೆ.
ಸೊಂಡಿಲಿನಿಂದ ತಿವಿದು ಕೆಳಗೆ ಬೀಳಿಸಿ, ಕಾಲು ಇಡಲು ಮುಂದಾಗಿದೆ. ಈ ವೇಳೆ ಅಲ್ಲಿಗೆ ಬಂದ ನಲ್ಲಮ್ಮ ಸಾಕಿದ್ದ ನಾಯಿ ಜೋರಾಗಿ ಬೊಗಳಿದೆ.
ಆನೆಯ ಗಮನ ನಾಯಿಯ ಕಡೆಗೆ ಹೋಗಿದ್ದು, ಬೊಗಳಿದ ನಾಯಿಯನ್ನು ಅಟ್ಟಿಸಿಕೊಂಡು ಹೋಗಿದೆ. ಅಷ್ಟರಲ್ಲಿ ನಲ್ಲಮ್ಮ ಅಲ್ಲಿಂದ ಎದ್ದು ಬಂದಿದ್ದಾರೆ. ಅವರಿಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.
                                                                                                                      

 

 

 

 

 

 

33  ನಾನು ಸಿಎಂ ಆಕಾಂಕ್ಷಿಯಲ್ಲ: ಶೋಭಾ ಕರಂದ್ಲಾಜೆ
 ಅಕ್ಟೋಬರ್-25
ಮಡಿಕೇರಿ : ನಾನು ಸಿಎಂ ಆಕಾಂಕ್ಷಿಯಲ್ಲ. ಬಿಜೆಪಿಯಲ್ಲೂ ಸಾಕಷ್ಟು ಮಂದಿ ಸಿಎಂ ರೇಸ್ ನಲ್ಲಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ನಮ್ಮ ಹಾಗೂ ಕಾಂಗ್ರೆಸ್ ಸರ್ಕಾರಗಳ ಹಗರಣಗಳ ಬ್ರೈನ್ ಮ್ಯಾಪಿಂಗ್ ನಡೆಸಲಿ, ನಾವು ಸಿದ್ದವಿದ್ದೇವೆ. ಹಗರಣಗಳು ಎಲ್ಲಿ, ಯಾವಗ ಎಷ್ಟು ಪ್ರಮಾಣದಲ್ಲಿ ಆಗಿದೆ ಎಂದು ದೇಶದ ಜನತೆಗೆ ತಿಳಿಯಲಿ ಎಂದರು.
ಇನ್ನು ವಿದ್ಯುತ್ ಖರೀದಿ ಹಗರಣ ತನಿಖೆ ಸಮಿತಿ ವರದಿ ಮಂಡನೆಯಾಗುವ ವೇದಿಕೆಯಲ್ಲೇ ಸಿಬಿಐಗೆ ಒಪ್ಪಿಸಲಿ, ನಾನು ಯಾವುದೇ ತನಿಖೆಗೆ ಸಿದ್ದ ಎಂದು ಶೋಭಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

 

     

  ಜನರಿಗೆ ತಪ್ಪು ಮಾಹಿತಿ:ಸಂಸದ ರಮೇಶ್‌ ಟೀಕೆ

ಅಕ್ಟೋಬರ್.21

ಮಡಿಕೇರಿ: ಕೇಂದ್ರ ಸರಕಾರ ಜಾರಿಗೆ ತಂದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ತನ್ನ ಸರಕಾರದ ಕಾರ್ಯಕ್ರಮವೆಂದು ಹೇಳುತ್ತಿರುವುದಾಗಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಸಭೆಗಳಲ್ಲಿ ಸಂಸದರು ಹೇಳುತ್ತಿರುವುದು ಶೋಭೆ ತರುವುದಿಲ್ಲ ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಟಿ.ಪಿ.ರಮೇಶ್‌ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರಕಾರ ಜನಪರವಾದ ನೂರಾರು ಕಾರ್ಯಕ್ರಮಗಳನ್ನು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅನುಷ್ಠಾನಗೊಳಿಸಿದ್ದು, ಅದ್ಯಾವುದೂ ಕೇಂದ್ರ ಸರಕಾರದ ಯೋಜನೆಗಳಲ್ಲ. ರಾಜ್ಯದಲ್ಲಿ ಯಾವುದೇ ಪಕ್ಷದ ಸರಕಾರವಿದ್ದರೂ ಕೇಂದ್ರ ಸರಕಾರದ ಕಾರ‍್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕಾಗಿರುವುದು ಸರಕಾರದ ಕರ್ತವ್ಯ. ರಾಜ್ಯ ಸರಕಾರದ ವಿನೂತನ ಕಾರ‍್ಯಕ್ರಮಗಳನ್ನು ಕೇಂದ್ರದ ಕಾರ‍್ಯಕ್ರಮಗಳೊಂದಿಗೆ ತಾಳೆ ಹಾಕಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಸರಕಾರ ಜಾರಿಗೆ ತಂದಿರುವ ಅನೇಕ ಕಲ್ಯಾಣ ಕಾರ್ಯಕ್ರಮಗಳು ದೇಶವ್ಯಾಪಿ ಮೆಚ್ಚುಗೆಗೆ ಪಾತ್ರವಾಗಿವೆ ಎನ್ನುವುದನ್ನು ಸಂಸದರು ತಿಳಿಯಬೇಕಿದೆ ಎಂದು ರಮೇಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.                                                                                                                             

 

ಕಾವೇರಿ ತೀರ್ಥೋದ್ಭವಕ್ಕೆ: ಪೊಲೀಸ್ ಬಿಗಿ ಬಂದೋಬಸ್ತ್

 

ಅಕ್ಟೋಬರ್:17
ಮಡಿಕೇರಿ: ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ಆರಂಭಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಾತ್ರೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. 
ಎಲ್ಲೆಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ತಲಕಾವೇರಿಗೆ ಭಾಗಮಂಡಲದಿಂದ ಮೂವತ್ತು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಭಕ್ತಾದಿಗಳು ತೀರ್ಥೋದ್ಭವದ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳಲು ಕಾಯುತ್ತಿದ್ದಾರೆ.
ಮಧ್ಯಾಹ್ನ ತೀರ್ಥೋದ್ಭವವಾಗುವುದರಿಂದ ಈ ಬಾರಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಂದ ಹೆಚ್ಚು ಭಕ್ತರು ಭಾಗವಹಿಸುತ್ತಿದ್ದಾರೆ. ದೂರದ ಪ್ರದೇಶಗಳಿಂದ ಈಗಾಗಲೇ ಹಲವರು ಕೊಡಗಿಗೆ ಆಗಮಿಸಿದ್ದಾರೆ. ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಎರಡೂ ಕಡೆ ಪಾರ್ಕಿಂಗ್ ಮಾಡಲಾಗಿದೆ. ಪಾಸ್ ಇದ್ದ ವಾಹನಗಳನ್ನು ಮಾತ್ರ ಭಾಗಮಂಡಲದಿಂದ ತಲಕಾವೇರಿಗೆ ಬಿಡಲಾಗುವುದು.
ದೀಪಾವಳಿ ರಜೆಯೂ ಇರುವುದರಿಂದ ಕೊಡಗಿನಲ್ಲಿ ಸಾಕಷ್ಟು ಪ್ರವಾಸಿಗರಿದ್ದು, ತೀರ್ಥೋದ್ಭವ ವಿಸ್ಮಯನ್ನು ನೋಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಂಗಳವಾರ ಅಪರಾಹ್ನ 2.30ಕ್ಕೆ ತಲಕಾವೇರಿಯಲ್ಲಿ ಸಂಕ್ರಮಣ ಕವಿಗೋಷ್ಠಿ ನಡೆಯಲಿದೆ.

Ads
;