ದೂರವಾಣಿ : 080-69999676
ಇಮೇಲ್ : Info@Vijayataranga.com


 

888  ಅಪಾಯಕಾರಿ ಕಲ್ಲು ಕ್ವಾರಿಯಲ್ಲಿ 'ಪ್ರಬುದ್ಧ' ಚಿತ್ರೀಕರಣ!
ಡಿಸೆಂಬರ್-27
ಗುಂಡ್ಲುಪೇಟೆ : ಪ್ರಬುದ್ಧ ಚಿತ್ರಕ್ಕಾಗಿ ಸಾಹಸಮಯ ದೃಶ್ಯವೊಂದನ್ನು ಥ್ರಿಲ್ಲರ್ ಮಂಜು ಮತ್ತು ತಂಡ ತಾಲೂಕಿನ ಹಿರಿಕಾಟಿಯ ಕಲ್ಲು ಕ್ವಾರಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದು, ಅಸುರಕ್ಷಿತವಾಗಿರುವ ಈ ಪ್ರದೇಶದಲ್ಲಿ ಚಿತ್ರೀಕರಣ ಮಾಡುತ್ತಿರುವುದು ಅನಾಹುತಕ್ಕೆ ಆಹ್ವಾನ ನೀಡಿದಂತೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ಭಾರೀ ಆಳದ ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಇದನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ. ಸ್ವಲ್ಪ ಎಡವಿದರೂ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಚಿತ್ರೀಕರಣವನ್ನು ಯಾವುದೇ ಭದ್ರತೆಯಿಲ್ಲದೆ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಹಿರಿಕಾಟಿಯ ಸರ್ವೆನಂ 108ರಲ್ಲಿ ಬಿಳಿಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದ್ದು ಇಲ್ಲಿನ ಸುಮಾರು 300 ರಿಂದ 400 ಅಡಿ ಆಳದ ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಚಿತ್ರೀಕರಣ ನಡೆಸಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ಹಾಗೂ ಇಲಾಖೆಯ ಅನುಮತಿ ಪಡೆದಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಚಿತ್ರೀಕರಣ ನಡೆಯುತ್ತಿರುವ ವಿಷಯ ತಿಳಿದ ಅಕ್ಕಪಕ್ಕದ ಗ್ರಾಮದ ನೂರಾರು ಸಾರ್ವಜನಿಕರು ಆಗಮಿಸುತ್ತಿದ್ದು ಕುತೂಹಲದಿಂದ ಮೇಲ್ಭಾಗದಿಂದ ಇಣುಕಿ ನೋಡುತ್ತಿದ್ದು ಭಾರೀ ಆಳವಿರುವ ಕಾರಣ ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿದೆ.
ಈ ಪ್ರದೇಶದಲ್ಲಿ ಚಿತ್ರೀಕರಣ ನೋಡುತ್ತಿರುವ ಸಾರ್ವಜನಿಕರಿಗಾಗಲಿ ಅಥವಾ ಚಿತ್ರೀಕರಣ ನಡೆಸುತ್ತಿರುವ ಸಿಬ್ಬಂದಿಗಳಿಗಾಗಲೀ ಯಾವುದೆ ಭದ್ರತೆಯಾಗಲೀ, ಸುರಕ್ಷತೆಯಾಗಲೀ ಇಲ್ಲ ಆದ್ದರಿಂದ ಈ ಬಗ್ಗೆ ಸಂಬಂಧಿಸಿದವರು ಗಮನಹರಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

 

 

          ಗಗಗ

ಗ್ರಾಮಸ್ಥರನ್ನು ಕಾಡುತ್ತಿರುವ ಡೆಂಗೆ ಜ್ವರದ ಭೀತಿ
ಡಿಸೆಂಬರ್.12
ಗುಂಡ್ಲುಪೇಟೆ: ತಾಲೂಕಿನ ಬಾಲಕರಿಬ್ಬರಿಗೆ ಶಂಕಾಸ್ಪದ ಡೆಂಗೆ ಜ್ವರ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಭೀತಿಗೊಂಡಿದ್ದಾರೆ.
ಗ್ರಾಮದ ಮುದ್ದುಮಲ್ಲಪ್ಪರ ಪುತ್ರ ಸಂಜಯ್(11) ಅಗತ್ಯ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿದ್ದು, ಕುಮಾರ್ ಎಂಬುವವರ ಪುತ್ರ ಅಜಯ್(14) ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮುದ್ದಮಲ್ಲಪ್ಪ ಇತರೆ ಕೆಲ ಮಂದಿಗೂ ಐದಾರು ದಿನಕ್ಕೂ ಹೆಚ್ಚು ಕಾಲ ಜ್ವರದಿಂದ ಬಳಲಿದ್ದು, ಅಗತ್ಯ ಚಿಕಿತ್ಸೆ ಪಡೆದಿದ್ದಾರೆ. ಜ್ವರದ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗ್ರಾಮದ ಜನರು ಭೀತಿಗೊಂಡಿದ್ದಾರೆ.
ಗ್ರಾಮ ಸಮತಟ್ಟಾಗಿದ್ದು, ಮನೆಗಳಿಂದ ಬಳಸಿದ ಕೊಳಚೆ ನೀರು ಸರಾಗವಾಗಿ ಹರಿದು ಹೋಗುವುದಿಲ್ಲ. ಚರಂಡಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕೊಳಚೆ ನೀರು ಮಡುವುಗಟ್ಟಿ ನಿಲ್ಲುವ ಕಾರಣ ಸೊಳ್ಳೆಗಳ ಪ್ರಮಾಣ ಹೆಚ್ಚಾಗಿದೆ. ಈ ಬಗ್ಗೆ ಶಿಂಡನಪುರ ಗ್ರಾ.ಪಂ ಹಲವು ಭಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಡೆಂಗೆ ಜ್ವರದಿಂದ ಅವಘಡಗಳು ಸಂಭವಿಸಿದರೆ ಗ್ರಾ.ಪಂ ಹೊಣೆಗಾರಿಕೆ ಹೊರಬೇಕಾಗುತ್ತದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಗ್ರಾಮದ ಇಬ್ಬರು ಬಾಲಕರು ಜ್ವರ ಕಾಣಿಸಿಕೊಂಡಿದ್ದು, ಒಬ್ಬಾತ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾನೆ. ಮತ್ತೊಬ್ಬ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಿಕಿತ್ಸಾ ವರದಿಯಲ್ಲಿ ಶಂಕಾಸ್ಪದ ಡೆಂಗೆ ಎಂದು ತಿಳಿಸಲಾಗಿದೆ. ಆದರೂ ಗ್ರಾಮದಲ್ಲಿ ಇಲಾಖೆಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಿರಿಯ ಮಹಿಳಾ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ನಾಳೆಯೂ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಜಾಗೃತಿ ಮುಂದುವರೆಯಲಿದೆ.ಗ್ರಾ.ಪಂ ನವರಿಗೆ ನೈರ್ಮಲ್ಯಕ್ಕೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲಾಗಿದೆ.

 

78   ಗಾಂಜಾ ಬೆಳೆಯುತ್ತಿದ್ದ ವ್ಯಕ್ತಿ ಅರೆಸ್ಟ್
 ಡಿಸೆಂಬರ್-9
ಚಾಮರಾಜನಗರ : ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ ವ್ಯಕ್ತಿಯೊಬ್ಬ ಕೊಳ್ಳೆಗಾಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಗುರುಸ್ವಾಮಿ (35) ಬಂಧಿತ ವ್ಯಕ್ತಿ. ತಾಲೂಕಿನ ಟಿ.ಜಿ. ದೊಡ್ಡಿಯಲ್ಲಿ ತನ್ನದೇ ಜಮೀನಿ ಗುರುಮೂರ್ತಿ ಗಾಂಜಾ ಬೆಳೆಯುತ್ತಿದ್ದರ ಮಾಹಿತಿ ತಿಳಿದ ಪೊಲೀಸರು ದಾಳಿ ಮಾಡಿ 106 ಕೆಜಿ ಗಾಂಜಾ ಗಿಡವನ್ನು ವಶಪಡಿಸಿಕೊಂಡಿದ್ದಾರೆ. ಕೊಳ್ಳೆಗಾಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

 

45


ಬಸ್ ಬೈಕ್ ಗೆ ಡಿಕ್ಕಿ: ಮೂವರ ದುರ್ಮರಣ

 ನವೆಂಬರ್-16
ಕೊಳ್ಳೇಗಾಲ: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಹಾಗೂ ಪತ್ನಿಯನ್ನು ಬೈಕ್ನಲ್ಲಿ ಆಸ್ಪತ್ರೆಗೆ ಕರೆದೊಯ್ದು ಮನೆಗೆ ವಾಪಸ್ಸಾಗುತ್ತಿದ್ದಾಗ ಹಿಂದಿನಿಂದ ಬೈಕ್ ಗೆ  ಅತಿವೇಗವಾಗಿಬಂದ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಯಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯರಿಯೂರು ಗ್ರಾಮದ ರಾಜಮ್ಮ, ಇವರ ಮಗ ಸತೀಶ, ಸೊಸೆ ಬಿಂದು ಮೃತಪಟ್ಟ ದುರ್ದೈವಿಗಳು. ಆರು ತಿಂಗಳ ಹಿಂದಷ್ಟೆ ಸತೀಶ -ಬಿಂದು ಅವರ ವಿವಾಹವಾಗಿದ್ದು, ಕಳೆದೆರಡು ದಿನಗಳಿಂದ ತಾಯಿ ರಾಜಮ್ಮ ಹಾಗೂ ಪತ್ನಿ ಬಿಂದು ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಸತೀಶ ತನ್ನ ಬೈಕ್ನಲ್ಲಿ ತಾಯಿ ಹಾಗೂ ಪತ್ನಿಯನ್ನು ಯಳಂದೂರು ಆಸ್ಪತ್ರೆಗೆ ಕರೆತಂದು ರಾತ್ರಿ 8.30ರಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗ ಚಾಮರಾಜನಗರ ಕಡೆಯಿಂದ ಕೊಳ್ಳೇಗಾಲಕ್ಕೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಯರಿಯೂರು ಕ್ರಾಸ್ ಬಳಿ ಹಿಂದಿನಿಂದ ಅತಿ ವೇಗವಾಗಿ ಇವರ ಬೈಕ್ ಗೆ   ಡಿಕ್ಕಿ ಹೊಡೆದು ಮೂವರನ್ನು ಸ್ವಲ್ಪ ದೂರ ಎಳೆದೊಯ್ದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಘಟನೆ ಸುದ್ದಿ ತಿಳಿದ ಯರಿಯೂರು ಗ್ರಾಮಸ್ಥರು, ಮೃತರ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಯಳಂದೂರು ಠಾಣೆ ಸಿಪಿಐ ರಾಜೇಶ್, ಪಿಎಸ್ಐ ಮಂಜು ಸ್ಥಳಕ್ಕಾಗಮಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.

 

 

11     ಜನರಿಗೆ ನಕ್ಸಲರಿಂದ ಆತಂಕ
 ನವೆಂಬರ್-11
ಚಾಮರಾಜನಗರ: ಗುಂಡ್ಲುಪೇಟೆಯ ಅರಣ್ಯದಂಚಿನ ಗಡಿಭಾಗದಿಂದ ನಕ್ಸಲರು ರಾಜ್ಯದೊಳಕ್ಕೆ ನುಸುಳ ಬಹುದೆಂಬ ಸಂಶಯ ಹಿಂದಿನಿಂದಲೂ ಇದ್ದು, ಈ ಬಗ್ಗೆ ನಕ್ಸಲ್ ನಿಗ್ರಹಪಡೆ ಹದ್ದಿನ ಕಣ್ಣಿಟ್ಟು ಕಾಯುತ್ತಿದೆ. ಆದರೂ ಈ ನಡುವೆ ನಿನ್ನೆ ಮಧ್ಯಾಹ್ನದ ವೇಳೆಯಲ್ಲಿ ಕಾಡಂಚಿನ ಗ್ರಾಮದಲ್ಲಿ ಮೂವರು ಮುಸುಕುಧಾರಿಗಳು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದ್ದು, ಇವರು ನಕ್ಸಲರೇನಾ? ಎಂಬ ಸಂಶಯ ಕಾಡತೊಡಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಗ್ರಾಮದ ಒಂಟಿಮನೆಯೊಂದಕ್ಕೆ ಮೂವರು ಮುಸುಕುಧಾರಿಗಳು ಆಗಮಿಸಿ ಕೀಲಿಕೈಕೊಡುವಂತೆ ಕಾರ್ಮಿಕ ಮಹಿಳೆಯನ್ನು ಕೇಳಿದ್ದಾರೆ ಎನ್ನಲಾಗಿದ್ದು ಆಕೆ ಇದರಿಂದ ಭಯಗೊಂಡು ಗ್ರಾಮಸ್ಥರಿಗೆ ಮಾಹಿತಿ ನೀಡಿದ ಮೇರೆಗೆ ಸುದ್ದಿಯಾಗಿದ್ದು, ಸ್ಥಳಕ್ಕೆ ಡಿಎಸ್ಪಿ ಎಸ್.ಈ.ಗಂಗಾಧರಸ್ವಾಮಿ, ಪಿಎಸ್ಐ ಬಿ.ಎಸ್.ಶಿವರುದ್ರ ಹಾಗೂ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕಾರ್ರಾಗಿಹುಂಡಿ ಗ್ರಾಮದ ನಿವಾಸಿ ಮಂಗಲ, ಗ್ರಾಮಪಂಚಾಯಿತಿ ಸದಸ್ಯರಾದ ಮಾದೇಶ್ ಎಂಬುವರು ಶಾಂತಿ ಎಂಬ ಗಿರಿಜನ ಕಾರ್ಮಿಕಳನ್ನು ಜಮೀನಿನ ಕೆಲಸಕ್ಕೆ ಬಿಟ್ಟು ಮನೆಗೆ ಬೀಗ ಹಾಕಿ ತಮ್ಮ ಕುಟುಂಬ ಸಮೇತ ಸಮೀಪದ ಎಲ್ಚೆಟ್ಟಿ ಗ್ರಾಮದಲ್ಲಿ ನಡೆಯುತ್ತಿದ್ದ ಸಂಬಂಧಿಕರ ಗೃಹಪ್ರವೇಶಕ್ಕೆ ತೆರಳಿದ್ದರು ಎನ್ನಲಾಗಿದೆ.
ಮಧ್ಯಾಹ್ನ 2.30ರಲ್ಲಿ ಕಣ್ಣುಗಳು ಮಾತ್ರ ಕಾಣುವಂತೆ ಕಪ್ಪುಬಟ್ಟೆಯಿಂದ ಮುಖಮುಚ್ಚಿಕೊಂಡು ಶೂ ಧರಿಸಿದ್ದ ಮೂವರು ಮುಸುಕುಧಾರಿಗಳು ಇಲ್ಲಿಗೆ ಆಗಮಿಸಿ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಮಾತನಾಡುತ್ತಾ ಶಾಂತಿಯನ್ನು ಮನೆಯ ಕೀಲಿಕೈ ಕೊಡುವಂತೆ ಒತ್ತಾಯಿಸಿದ್ದಾರೆ. ಮಾಲೀಕರು ತನಗೆ ಮನೆಯ ಕೀಲಿಕೈಕೊಟ್ಟಿಲ್ಲ ಸ್ವಲ್ಪಹೊತ್ತಿನಲ್ಲಿಯೇ ಬರುತ್ತಾರೆ ಎಂದು ಹೇಳಿದಾಗ ತಾವು ಬಂದಿದ್ದ ವಿಷಯವನ್ನು ಯಾರಿಗೂ ತಿಳಿಸಬಾರದು, ಹೇಳಿದರೆ ನಿನಗೆ ತೊಂದರೆಯಾಗುತ್ತದೆ ಎಂದು ಚಾಕು ತೋರಿಸಿ ಬೆದರಿಕೆ ಹಾಕಿ ಕಾಡಿನತ್ತ ತೆರಳಿದರು ಎಂದು ಕಾರ್ಮಿಕ ಮಹಿಳೆ ತಿಳಿಸಿದ್ದಾಳೆ.
ಮನೆ ಮಾಲೀಕ ಮರಳಿದ ಬಳಿಕ ಈ ವಿಚಾರವನ್ನು ಶಾಂತಿ ತಿಳಿಸಿದ್ದು, ಅವರು ಗ್ರಾಮಸ್ಥರಿಗೆ ಮಾಹಿತಿ ನೀಡುವ ಮೂಲಕ ಮಾದೇಶ್ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಶಾಂತಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ ವಿಷಯ ಸಂಗ್ರಹಿಸಿದ್ದಾರೆ.
ಮುಸುಕುಧಾರಿಗಳು ನಕ್ಸಲ್ ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ವ್ಯಾಪ್ತಿಯಲ್ಲಿ ನಕ್ಸಲರು ಅಡಗಿದ್ದಾರೆ ಎಂಬ ಸಂಶಯ ಹಿಂದಿನಿಂದಲೂ ಇದೆ. ಕೆಲವರ ಪೋಸ್ಟರ್ ಗಳನ್ನು ಹಾಕಿ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿತ್ತು. ಇದೀಗ ಮುಸುಕುಧಾರಿಗಳು ಬಂದಿದ್ದರು ಎಂಬ ವಿಚಾರ ಈ ವ್ಯಾಪ್ತಿಯ ಜನರ ಆತಂಕಕ್ಕೆ ಕಾರಣವಾಗಿದೆ.

 

 

      

 

 

  

            ಕೋಟಿ ವೆಚ್ಚದ ಕಳಪೆ ಕಟ್ಟಡ!

ನವೆಂಬರ್:3 

ಚಾಮರಾಜನಗರ: ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಸಲುವಾಗಿ ನಿರ್ಮಿಸಿದ ಸುಸರ್ಜಿತ ಕಟ್ಟಡದ ಆಸ್ಪತ್ರೆಗೆ ಕಳಪೆ ಗುಣಮಟ್ಟದ ಮರದ ಬಾಗಿಲು, ಕಿಟಿಕಿಗಳನ್ನು ಬಳಸಿದ್ದರಿಂದ ಅವುಗಳೆಲ್ಲ ಗೆದ್ದಲು ಹಿಡಿಯುತ್ತಿರುವುದು ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ಕಂಡು ಬಂದಿದೆ.ಕಳೆದ ಮೂರು ವರ್ಷಗಳ ಹಿಂದೆ ಅಂದರೆ 2014ರಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಕೊಡಸೋಗೆ ಗ್ರಾಮದ ಹೊರಭಾಗದಲ್ಲಿ ಜನರ ಅಗತ್ಯತೆಯನ್ನು ಮನಗಂಡು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಿಸಲಾಗಿತ್ತು. ಆದರೆ ಕಟ್ಟಡ ಮೇಲ್ ನೋಟಕ್ಕೆ ಸುಸರ್ಜಿತ ವಾಗಿರುವಂತೆ ಕಂಡು ಬಂದಿತ್ತಾದರೂ ಅದಕ್ಕೆ ಮರಮುಟ್ಟುಗಳು ಕಳಪೆ ಮಟ್ಟದ ಮರ ಎಂಬುದು ಇದೀಗ ಗೊತ್ತಾಗ ತೊಡಗಿದೆ.ಹಾಗೆನೋಡಿದರೆ ಈ ಆಸ್ಪತ್ರೆ ಕಟ್ಟಡದಲ್ಲಿ ಸುಸರ್ಜಿತ ಪ್ರಯೋಗಾಲಯ, ಹೊರ ಹಾಗೂ ಒಳರೋಗಿಗಳ ಅನುಕೂಲಕ್ಕೆ ತಕ್ಕಂತೆ ಪ್ರತ್ಯೇಕ ವಾರ್ಡುಗಳು ಸೇರಿದಂತೆ ಎಲ್ಲವೂ ಇದೆಯಾದರೂ ಕಳಪೆ ಗುಣಮಟ್ಟದ ಮರಗಳನ್ನು ಬಳಕೆ ಮಾಡಿ ಬಾಗಿಲು, ಕಿಟಿಕಿಗಳನ್ನು ನಿರ್ಮಿಸಿರುವುದರಿಂದ ವೈದ್ಯರು ರೋಗಿಗಳನ್ನು ತಪಾಸಣೆ ಮಾಡುವ ಕೊಠಡಿ, ಪುರುಷ ಹಾಗೂ ಮಹಿಳೆಯರ ಶೌಚಾಲಯಗಳು, ಪ್ರಯೋಗಾಲಯ ಮೊದಲಾದ ಕೊಠಡಿಗಳ ಬಾಗಿಲುಗಳು ಹಾಗೂ ಚೌಕಟ್ಟುಗಳು ಈಗಾಗಲೇ ಗೆದ್ದಲು ತಿಂದು ಹಾಕಿವೆ. ಶನಿವಾರ ಭಾನುವಾರ ರಜೆಯ ದಿನಗಳಂದು ಬಾಗಿಲು ತೆರೆಯದ ದಿನಗಳಲ್ಲಿ ಗೆದ್ದಲು ಮರಗಳನ್ನು ಆವರಿಸಿ ಬಿಡುತ್ತವೆ. ಆಸ್ಪತ್ರೆ ತೆರೆದ ದಿನ ಗೆದ್ದಲನ್ನು ಗುಡಿಸಿ ಹೊರಹಾಕುವುದೇ ದೊಡ್ಡ ಕೆಲಸವಾಗುತ್ತಿದೆ.ದೀರ್ಘಕಾಲ ಬಾಳಿಕೆ ಬರಬೇಕಾದ ಕಟ್ಟಡವನ್ನು ನಿರ್ಮಿಸುವಾಗ ಕಳಪೆ ಗುಣಮಟ್ಟದ ಮರವನ್ನು ಬಳಸಿ ಕಟ್ಟಡ ನಿರ್ಮಿಸಿದ್ದರಿಂದ ಇದೀಗ ಆಸ್ಪತ್ರೆ ಕಟ್ಟಡದ ಬಗ್ಗೆಯೇ ಅನುಮಾನ ಪಡಬೇಕಾಗಿದೆ, ಅಷ್ಟೇ ಅಲ್ಲದೆ ಭಯದಿಂದ ಕಾರ್ಯನಿರ್ವಹಿಸಬೇಕಾದ ಸ್ಥಿತಿಗೆ ಕಟ್ಟಡ ನಿರ್ಮಿಸಿದ ಗುತ್ತಿಗೆದಾರರು ತಂದಿಟ್ಟಿರುವುದು ಇಲ್ಲಿನ ಸಿಬ್ಬಂದಿ ಮತ್ತು ಸ್ಥಳೀಯರ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಿಸಿದವರು ಕಟ್ಟಡ ನಿರ್ಮಾಣ ಮಾಡಿದ ಗುತ್ತಿಗೆದಾರನ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

 

 

      

   ಮಕ್ಕಳ ಶಿಕ್ಷಣ:2ಕೋಟಿ ಮೀಸಲು

ಅಕ್ಟೋಬರ್.31

ಗುಂಡ್ಲುಪೇಟೆ: ವಿಶ್ವಕರ್ಮ ಸಮುದಾಯದ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು 2 ಕೋಟಿ ಹಣ ಮೀಸಲಿಡಲಾಗಿದೆ ಎಂದು ವಿಶ್ವಕರ್ಮ ಅಭಿವದ್ಧಿ ನಿಗಮದ ಅಧ್ಯಕ್ಷ ನಂದಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ವಿಶ್ವಕರ್ಮ ಅಭಿವದ್ಧಿ ನಿಗಮದ ಸ್ಥಾಪನೆಗೆ ಬಿಜೆಪಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿಎಸ್ವೈ, ಸದಾನಂದಗೌಡ, ಜಗದೀಶ್ಶೆಟ್ಟರ್ ಅವರಲ್ಲಿ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಲಿಲ್ಲ. ಹಿಂದುಳಿದ ವರ್ಗಗಳ ಪರ ಕಾಳಜಿ ಇರುವ ಜತೆಗೆ ಸಮುದಾಯವೊಂದರ ಪ್ರತಿನಿಧಿಯಾದ ಸಿಎಂ ಸಿದ್ದರಾಮಯ್ಯ ನಿಗಮ ಸ್ಥಾಪಿಸುವ ಜತೆಗೆ ಇದುವರೆಗೆ 40 ಕೋಟಿ ಅನುದಾನ ಸಮುದಾಯದ ಜನರ ಕಲ್ಯಾಣಕ್ಕೆ ನೀಡುದ್ದು ಖರ್ಚು ಮಾಡಲಾಗಿದೆ,’’ಎಂದರು.

‘‘ಪಂಚ ಕಸುಬುಗಳಲ್ಲಿ ತೊಡಗಿರುವ ಸಮುದಾಯದ ಜನರಿಗೆ ಅನುಕೂಲ ಮಾಡಲು ನೂರು ಕೋಟಿ ಅನುದಾನ, 10 ಸಾವಿರ ಮನೆಗಳ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಈಗಾಗಲೇ ಬಳ್ಳಾರಿ ಜಿಲ್ಲೆಯಲ್ಲಿ ಅನುಷ್ಟಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆ ಮತ್ತು ತಾಲೂಕಿಗೆ ಒಂದರಂತೆ ಸಮುದಾಯ ಭವನ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ,’’ ಎಂದು ತಿಳಿಸಿದರು.

                                                                                                                         

 

 

ಗಗ ಅಂತ್ಯ ಸಂಸ್ಕಾರ ವೇಳೆ ದಾಳಿ ಮಾಡಿದ ಜೇನು ಹುಳಗಳು
ಅಕ್ಟೋಬರ್.30
ಚಾಮರಾಜ ನಗರ: ಗುಂಡ್ಲುಪೇಟೆ ತಾಲೂಕಿನ ಶ್ಯಾನಡ್ರಹಳ್ಳಿಯಲ್ಲಿ ಭಾನುವಾರ ಶವ ಸಂಸ್ಕಾರದ ವೇಳೆ ಹಲವರ ಮೇಲೆ ಹೆಜ್ಜೇನು ದಾಳಿ ನಡೆಸಿದೆ.
ವಯಸ್ಸಾದ ಗ್ರಾಮದ ಪುಟ್ಟಮ್ಮ ಎಂಬುವರ ಅಂತ್ಯಕ್ರಿಯೆ ಅವರದೇ ಜಮೀನಿನಲ್ಲಿ ಭಾನುವಾರ ಮಧ್ಯಾಹ್ನ ನಡೆಯುತ್ತಿತ್ತು. ಈ ವೇಳೆ ತೆಂಗಿನ ಮರದಲ್ಲಿ ಕಟ್ಟಿದ್ದ ಹಳಿಯಿಂದ ಮೇಲೆದ್ದ ಜೇನುಹುಳುಗಳು ಹಲವರಿಗೆ ಕಚ್ಚಿದವು. ಇದರಿಂದ ಸ್ಥಳದಲ್ಲಿದ್ದ ಹೆಚ್ಚಿನ ಮಂದಿ ಬಟ್ಟೆ, ಪಂಚೆ, ಸೀರೆ ಹೊದ್ದು, ರಕ್ಷ ಣೆಗಾಗಿ ಸುತ್ತಲಿನ ಆಲೆಮನೆ, ಶೆಡ್ ಇತರೆಡೆ ಓಡಿ ಹೋದರು.
ಕೆಲ ಮಂದಿಯಷ್ಟೆ ಶವದ ಬಳಿ ಇದ್ದರು. ಇವರಿಗೆ ಜೇನು ಕಚ್ಚಿದ್ದು, ಅಂತ್ಯಕ್ರಿಯೆ ಅಪೂರ್ಣವಾಗಬಾರದು ಎಂಬ ಕಾರಣಕ್ಕೆ ಹೊಗೆ ಹಾಕಿ, ಡಿಡಿಟಿ ಪೌಡರ್ ಸಿಂಪರಿಸಿಕೊಂಡು ಅಂತ್ಯಕ್ರಿಯೆ ನೆರವೇರಿಸಿದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

 

 

    ff ಬ್ಯಾಂಕ್ ನಲ್ಲಿ ಕನ್ನಡ ಭಾಷೆ ಬಳಸದಿದ್ದಕ್ಕೆ ಪ್ರತಿಭಟನೆ
ಅಕ್ಟೋಬರ್.28
ಚಾಮರಾಜ ನಗರ: ಸಂತೇಮರಹಳ್ಳಿ: ಬ್ಯಾಂಕ್ ವ್ಯವಸ್ಥಾಪಕರು ಕನ್ನಡ ಭಾಷೆಯಲ್ಲಿ ವ್ಯವಹಾರ ಮಾಡದೇ ಗ್ರಾಹಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ವಿಜಯಾ ಬ್ಯಾಂಕ್ ಎದುರು ಮಹಿಳಾ ಸ್ವ-ಸಹಾಯ ಸಂಘಟನೆಗಳ ಸದಸ್ಯರು ಹಾಗೂ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬ್ಯಾಂಕ್ ಎದುರು ಜಮಾಯಿಸಿದ ಪ್ರತಿಭಟನಾಕಾರರು ಬ್ಯಾಂಕ್ ವ್ಯವಸ್ಥಾಪಕರ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್ನ ವ್ಯವಸ್ಥಾಪಕರಾದ ನವೀನ್ಕುಮಾರ್ ಉಪಾಧ್ಯಾಯ ಹಾಗೂ ಡಿಗ್ರೂಪ್ ನೌಕರರಾದ ಗುರು ಎಂಬವರು ಹಿಂದಿ ಭಾಷೆಯಲ್ಲಿ ವ್ಯವಹಾರ ನಡೆಸುತ್ತಾರೆ. ಇದರಿಂದ ಬ್ಯಾಂಕ್ ವ್ಯವಹಾರ ಮಾಡಲು ಸಮಸ್ಯೆಯಾಗುತ್ತಿದೆ, ಸರಕಾರ ರೈತರ ಸಾಲ ವಸೂಲಾತಿ ಮಾಡಬಾರದೆಂದು ಆದೇಶ ನೀಡಿದ್ದರೂ ಕೂಡ ಬ್ಯಾಂಕ್ ವ್ಯವಸ್ಥಾಪಕರು ರೈತರ ಮನೆಮನೆಗೆ ತೆರಳಿ ಸಾಲ ಕಟ್ಟುವಂತೆ ಒತ್ತಡ ಹೇರುವ ಮೂಲಕ ತುಂಬಾ ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಲೀಡ್ಬ್ಯಾಂಕ್ ವ್ಯವಸ್ಥಾಪಕಿ ಸುನಂದಾ ಹಾಗೂ ಆರ್ ಓ ಕಾಂತರಾಜ್ ಅವರು ಮನವಿ ಸಲ್ಲಿಸಿದರು. ನಂತರ ಮಾತನಾಡಿ ಒಂದು ತಿಂಗಳೊಳಗೆ ಬ್ಯಾಂಕ್ ವ್ಯವಸ್ಥಾಪಕರನ್ನು ಬೇರೆಡೆ ವರ್ಗಾವಣೆ ಮಾಡುವುದಾಗಿ ಭರವಸೆ ನೀಡಿದರು.
ಬ್ಯಾಂಕ್ ವ್ಯವಸ್ಥಾಪಕ ನವೀನ್ಕುಮಾರ್ ಉಪಾಧ್ಯಾಯ ಪ್ರತಿಭಟನಾಕಾರರಲ್ಲಿ ಕ್ಷ ಮೆಯಾಚಿಸಿದ ಮೇಲೆ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಮಹಿಳಾ ಸ್ವಸಹಾಯ ಸಂಘದ ಮುಖ್ಯಸ್ಥೆ ಲಕ್ಷ್ಮೀಸಿದ್ದರಾಜು, ಗ್ರಾ.ಪಂ.ಅಧ್ಯಕ್ಷೆ ಸುಮಂಗಲಿಶ್ರೀನಿವಾಸ್, ಸದಸ್ಯರಾದ ಎಸ್.ಮಹದೇವಯ್ಯ, ಪುಟ್ಟಸ್ವಾಮಿ, ಜಿಲ್ಲಾ ರೈತ ಹಿತರಕ್ಷ ಣಾ ಹೋರಾಟ ಸಮಿತಿ ಅಧ್ಯಕ್ಷ ಆಲೂರುಮಲ್ಲು, ರೈತ ಮುಖಂಡರಾದ ಎ.ಎಸ್.ಚನ್ನಬಸಪ್ಪ, ನೀಲಮ್ಮ, ಕಮಲಮ್ಮ, ಚಿಕ್ಕದೇವಿ ಇತರರು ಪಾಲ್ಗೊಂಡಿದ್ದರು.

Ads
;