ದೂರವಾಣಿ : 080-69999676
ಇಮೇಲ್ : Info@Vijayataranga.com


    12 

 ಮಂಡ್ಯದಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆ

 ಡಿಸೆಂಬರ್-22

 ಮಂಡ್ಯ: ವಿಷ ಸೇವಿಸಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಸಮೀಪದ ಕಬ್ಬಾರೆಯಲ್ಲಿ ಜರುಗಿದೆ. 
ಕಬ್ಬಾರೆ ಗ್ರಾಮದ ನಿವಾಸಿ ಬೋರೇಗೌಡ ಆತ್ಮಹತ್ಯೆ ಮಾಡಿಕೊಂಡ ರೈತರಾಗಿದ್ದು, ಇವರು ವವಿಧ ಬ್ಯಾಂಕುಗಳಲ್ಲಿ 4ಲಕ್ಷ ಚಿನ್ನಾಭರಣ ಸಾಲ ಪಡೆದಿದ್ದರು. ಅಲ್ಲದೆ ಲೇವಾದೇವಿದಾರರಿಂದ 3ಲಕ್ಷ ಹೆಚ್ಚುವರಿ ಸಾಲ ಪಡೆದಿದ್ದರು. 3ಎಕರೆ ಜಮೀನಿನಲ್ಲಿ ಕಬ್ಬು ಟಮೋಟೋ ಬೆಳೆದು ನಷ್ಟಹೊಂದಿದ ಪರಿಣಾಮ ಮನನೊಂದು ಕ್ರಿಮಿನಾಶಕ ಸೇವಿಸಿದ್ದರು. ಇವರನ್ನು ಪಟ್ಟಣ, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಳಗ್ಗೆ ಸಾವನ್ನಪ್ಪಿದರು. ಮೃತರ ಪತ್ನಿ ವನಿತಾ ನೀಡಿದ ದೂರಿನ ಮೇರೆಗೆ ಪಟ್ಟಣ ಪೊಲಿಸ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೃತ ರೈತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಜೆಡಿಎಸ್ ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಬ್ಯಾಡರಹಳ್ಳಿ ಶಿವಕುಮಾರ್ ಆಗ್ರಹಿಸಿದ್ದಾರೆ.

 

  ಗಗಗ ಕಾಡಾನೆ ದಾಳಿಗೆ ವ್ಯಕ್ತಿ ಬಲಿ
ಡಿಸೆಂಬರ್.16
ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕು ತಾಳಿಕಟ್ಟೆ ಪ್ರದೇಶಕ್ಕೆ ನುಗ್ಗಿರುವ ಕಾಡಾನೆ ವ್ಯಕ್ತಿಯೊಬ್ಬನನ್ನು ಬಲಿ ಪಡೆದಿದೆ.
ತಾಳಿಕಟ್ಟೆ ಗ್ರಾಮದ ರೈತ ಗಾಳೆಪ್ಪ (45) ಮೃತ ದುರ್ದೈವಿ. ಕಾಡಾನೆದಾಳಿಯಿಂದ ಶುಕ್ರವಾರ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ.
ಜಮೀನಿನಲ್ಲಿ ಕೆಲಸ ಮಾಡುವಾಗ ಗಾಳೆಪ್ಪನನ್ನು ಆನೆ ತುಳಿದಿದೆ. ಶನಿವಾರ ಬೆಳಿಗ್ಗೆ ಗಾಳೆಪ್ಪ ಶವ ಪತ್ತೆಯಾಗಿದೆ.
ನಿನ್ನೆ ಕಾಡಾನೆ ದಾಳಿಯಿಂದಾಗಿ ತಾಳಿಕಟ್ಟೆ, ದುಮ್ಮಿ, ಬೆಟ್ಟ ಕಡೂರುಗ್ರಾಮಗಳಲ್ಲಿ ಏಳು ಜನ ಗಾಯಗೊಂಡಿದ್ದರು. ಹೊಳಲ್ಕೆರೆ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

 

     

ಹಾಡಹಗಲೇ ಮಹಿಳೆ ಕುತ್ತಿಗೆಯಿಂದ ಸರ ಕಳ್ಳತನ

ಡಿಸೆಂಬರ್.15

ಮಂಡ್ಯ: ನಗರದ ಗಾಂಧಿನಗರ 3ನೇ ಕ್ರಾಸ್‌ನಲ್ಲಿ ಗುರುವಾರ ಸಂಜೆ ಜನನಿಡಿತ ರಸ್ತೆಯಲ್ಲೇ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಗಳಿಬ್ಬರು ಮಹಿಳೆ ಕುತ್ತಿಗೆಯಿಂದ ಚಿನ್ನದ ಸರ ಅಪಹರಿಸಿ ಪರಾರಿಯಾಗಿದ್ದಾರೆ.
ಗಾಂಧಿನಗರ ನಿವಾಸಿ ವಕೀಲ ಶ್ರೀಕಂಠ ಆರಾಧ್ಯ ಎಂಬುವರ ಪತ್ನಿ ವಿಮಲಾ ಎಂಬುವರೇ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ. ವಿಮಲಾ ಅವರು ವಾಯುವಿಹಾರಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಹೋಂಡಾ ಆಕ್ಟೀವಾದಲ್ಲಿ ಬಂದ ವ್ಯಕ್ತಿಗಳು ಸರ ಕಸಿದುಕೊಂಡು ಅಲ್ಲಿಂದ ನಾಪತ್ತೆಯಾಗಿದ್ದಾರೆ. ಎರಡು ತಾಳಿ ಸೇರಿದಂತೆ ಸುಮಾರು 60 ಗ್ರಾಂ ತೂಕದ ಚಿನ್ನದ ಸರ ಕಳೆದುಕೊಂಡ ವಿಮಲಾ ಅವರು ಪೊಲೀಸರು ದೂರು ನೀಡಿದ್ದಾರೆ.
ಘಟನೆ ಬೆನ್ನಲ್ಲೇ ಪಿಎಸ್‌ಐ ನಿರಂಜನ್‌ ನೇತೃತ್ವದ ಪೊಲೀಸರ ತಂಡವು ನಗರದ ನಾನಾ ರಸ್ತೆಗಳಲ್ಲಿನ ಸಿಸಿಟಿವಿ ಪುಟೇಜ್‌ಗಳ ಪರಿಶೀಲನೆ ಮೂಲಕ ಸರಗಳ್ಳರ ಬೆನ್ನು ಹತ್ತಿದೆ. ಮಂಡ್ಯ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

                                                        

ಬೈಕ್ ಗೆ ಪೆಟ್ರೋಲ್ ಟ್ಯಾಂಕರ್ ಡಿಕ್ಕಿಯಾಗಿ ಕಾರ್ಮಿಕರಿಬ್ಬರ ಸಾವು

ಡಿಸೆಂಬರ್.12 

ಕೆ.ಆರ್.ಪೇಟೆ: ಬೈಕ್ಗೆ ಪೆಟ್ರೋಲ್ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಕಾರ್ಮಿಕರಿಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಶ್ರೀನಿವಾಸ್ (30) ಮತ್ತು ನವೀನ್ (30) ಅಪಘಾತದಲ್ಲಿ ಮೃತಪಟ್ಟಿರುವ ದುರ್ದೈವಿಗಳು. ಶ್ರವಣಬೆಳಗೊಳ ಕಡೆಯಿಂದ ವೇಗವಾಗಿ ಬದ ಪೆಟ್ರೋಲ್ ಟ್ಯಾಂಕರ್ ಸಂತೇಬಾಚಹಳ್ಳಿ ಕ್ರಾಸ್ ಬಳಿ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದ ರಭಸಕ್ಕೆ ಬೈಕ್ ಸವಾರರು ತಮ್ಮ ಬೈಕಿನೊಂದಿಗೆ ಟ್ಯಾಂಕರ್ನ ಮುಂಬದಿ ಚಕ್ರಕ್ಕೊಬ್ಬರು ಹಾಗೂ ಹಿಂಬದಿ ಚಕ್ರಕ್ಕೊಬ್ಬರು ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಟ್ಯಾಂಕರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪಟ್ಟಣ ಠಾಣೆ ಪೊಲೀಸರು ಸ್ಥಳಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಶವಗಳನ್ನು ಪಟ್ಟಣದ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

 

                                                         

ಟಬ್ ಗೆ ಬಿದ್ದು 8 ತಿಂಗಳ ಮಗು ಸಾವು

ಡಿಸೆಂಬರ್.12

 

ಮಂಡ್ಯ:ಮನೆಯಲ್ಲಿ ತೆವಳುತ್ತ ಬಚ್ಚಲು ಮನೆಗೆ ಹೋದ ಮಗು ನೀರು ತುಂಬಿದ ಟಬ್ ಗೆ ಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮದ್ದೂರು ತಾಲೂಕಿನಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಚನ್ನೇಗೌಡನದೊಡ್ಡಿಯ ಪುಟ್ಟಸ್ವಾಮಿ ಮತ್ತು ಸೌಜನ್ಯ ಅವರ ಎಂಟು ತಿಂಗಳ ಮಗು ಸಾವನ್ನಪ್ಪಿದೆ.
ನಿನ್ನೆ ಸಂಜೆ ಸೌಜನ್ಯ ಬಟ್ಟೆಯನ್ನು ಒಣಗಿಹಾಕಲು ಮಹಡಿ ಮೇಲೆ ಹೋಗಿದ್ದಾರೆ. ಮನೆಯ ಒಳಗೆ ಆಟವಾಡುತ್ತಿದ್ದ ಮಗು ತೆವಳುತ್ತ ಬಚ್ಚಲು ಮನೆಗೆ ಹೋಗಿ ನೀರು ತುಂಬಿದ ಟಬ್ ಹಿಡಿದುಕೊಂಡು ತಲೆ ಕೆಳಗಾಗಿ ಬಿದ್ದು ನೀರು ಕುಡಿದು ಉಸಿರುಗಟ್ಟಿ ಸಾವನ್ನಪ್ಪಿದೆ.

 

12  ಬೈಕ್-ಕಾರು ಮುಖಾಮುಖಿ, ಮೂವರು ಯುವಕರ ದುರ್ಮರಣ
 ಡಿಸೆಂಬರ್ -9
ಮಂಡ್ಯ: ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಶ್ರೀ ರಂಗಪಟ್ಟಣದ ಹೊಸ ಆನಂದೂರು ಬಳಿ ನಡೆದಿದೆ. ಮೈಸೂರಿನ ಒಕ್ಕಲಗೇರಿ ನಿವಾಸಿ ಗಿರೀಶ್(19), ಕುಂಬಾರಗೇರಿಯ ಜೀವನ್ಗೌಡ(18), ಅಶೋಕ ರಸ್ತೆಯ ನಿವಾಸಿ ಯಶವಂತ್ ಸಾವನ್ನಪ್ಪಿರುವ ದುರ್ದೈವಿಗಳು. ನಿನ್ನೆ ಮಧ್ಯಾಹ್ನ ಬೆಳಗೊಳ ಕಡೆಯಿಂದ ಮೈಸೂರಿಗೆ ಈ ಮೂವರು ಬೈಕ್ನಲ್ಲಿ ಬರುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಕಾರು ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಗಿರೀಶ್ ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಜೀವನ್ ಮತ್ತು ಯಶವಂತ್ ತೀವ್ರವಾಗಿ ಗಾಯಗೊಂಡ ಪರಿಣಾಮ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಬ್ಬರೂ ಮೃತಪಟ್ಟಿದ್ದಾರೆ. ಸಂಬಂಧ ಕೆಆರ್ಎಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದಾರೆ

 

44  ಶಿವರಾಮೇಗೌಡ ಮಗಳ ಅದ್ದೂರಿ ಮದುವೆಗೆ 216 ಬಸ್ ಬುಕ್..!
 ಡಿಸೆಂಬರ್-7
 ಮಂಡ್ಯ : ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಲ್. ಶಿವರಾಮೇಗೌಡ ಮಗಳ ಅದ್ದೂರಿ ಮದುವೆಗೆ 216   ಕೆಎಸ್ಆರ್ ಟಿಸಿ ಬಸ್ ಬುಕ್ ಮಾಡಿದ್ದಾರೆ.
 ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಮದುವೆಗೆ ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ   ಮಾಜಿ ಶಾಸಕ ಶಿವರಾಮೇಗೌಡ ಹಳ್ಳಿಗಳಿಂದ ಮದುವೆಗೆ ಬರುವವರಿಗೆ 216 ಕೆಎಸ್ಆರ್ ಟಿಸಿ ಬಸ್ ಬುಕ್   ಮಾಡಿದ್ದಾರೆ.
 ಮಂಡ್ಯ ವಿಭಾಗದಿಂದ 216 ಕೆಎಸ್ಆರ್ ಟಿಸಿ ಬಸ್ ಬುಕ್ ಮಾಡಿದ್ದು, ಮಂಡ್ಯ ಗ್ರಾಮೀಣ ಭಾಗದಲ್ಲಿ ಸಂಚರಿಸುವ   ಬಸ್'ಗಳಲ್ಲಿ ಸಂಚಾರ ವ್ಯತ್ಯಯವಾಗುವ ಸಾಧ್ಯತೆಯಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಲಾಭದ ಉದ್ದೇಶದಿಂದ   ಸಾರ್ವಜನಿಕರ ಹಿತ ಮರೆತರಾ ಎಂಬ ಮಾತುಗಳು ಕೇಳಿ ಬರುತ್ತಿವೆ.

 

  45       

ಜೆಡಿಎಸ್ ಕಾರ್ಯಕರ್ತನ ಹತ್ಯೆ, ಮೂವರ ಬಂಧನ

ಡಿಸೆಂಬರ್-6

ಮದ್ದೂರು: ಜೆಡಿಎಸ್ ಮುಖಂಡ ಸಂತೋಷ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ನ.29 ರಂದು ಮಾರಕಾಸ್ತ್ರಗಳಿಂದ ಕೊಚ್ಚಿ ಸಂತೋಷ್ ಹತ್ಯೆ ಮಾಡಲಾಗಿತ್ತು. ಬಂಧಿತ ಆರೋಪಿಗಳನ್ನು ಬೆಂಗಳೂರು ಸಮೀಪದ ನೆಲಗದರೇನಹಳ್ಳಿಯ ಹರೀಶ್, ಕೆ.ಮಲ್ಲಿಗೆರೆಯ ಸುರೇಶ್, ಮಾದನಾಯಕನಹಳ್ಳಿಯ ನವೀನ್ ಎಂದು ಗುರುತಿಸಲಾಗಿದೆ. ಸುರೇಶ್ ಹತ್ಯೆಯಾದ ಸಂತೋಷ್ ಚಲನವಲನದ ಬಗ್ಗೆ ಉಳಿದ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದ.ನ.29ರಂದು ಮದ್ದೂರು ತಾಲೂಕಿನ ಕೌಡ್ಲೆ ಸಮೀಪದ ಕೆ.ಜಿ.ಕೊಪ್ಪಲು ಗ್ರಾಮದ ಬಳಿ ಸಂತೋಷ್ ಹತ್ಯೆ ಮಾಡಲಾಗಿತ್ತು. ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಮದ್ದೂರು ಪಟ್ಟಣ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಹತ್ಯೆಯಾದ ಸಂತೋಷ್ ಮಾಜಿ ಶಾಸಕ ಕೆ.ಸುರೇಶ್ ಗೌಡ ಅವರ ಬೆಂಬಲಿಗನಾಗಿದ್ದ. ಕೆ.ಜಿ.ಕೊಪ್ಪಲು ಗ್ರಾಮದ ಬಳಿ ಸ್ನೇಹಿತರ ಜೊತೆ ಮಾತನಾಡುತ್ತಾ ನಿಂತಿದ್ದಾಗ ಕಾರಿನಲ್ಲಿ ಬಂದ ಆರೋಪಿಗಳು ಸಂತೋಷ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಸ್ಥಳದಲ್ಲಿಯೇ ಸಂತೋಷ್ ಮೃತಪಟ್ಟಿದ್ದ. ಕೆ.ಸುರೇಶ್ ಗೌಡ ಅವರು ಘಟನೆ ಬಗ್ಗೆ ಮಾಹಿತಿ ಪಡೆದ ಬಳಿಕ ಗ್ರಾಮಕ್ಕೆ ಭೇಟಿ ನೀಡಿದ್ದು. ಪೊಲೀಸರ ಜೊತೆ ಮಾತುಕತೆ ನಡೆಸಿದರು. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರು.

 

 

    45

ಮದುವೆಯಾಗಲ್ಲ ಎಂದಿದ್ದ ಯುವಕನ ಮನೆಗೆ : ಎಚ್ ಡಿಕೆ ಭೇಟಿ

ಡಿಸೆಂಬರ್-5

ಮಂಡ್ಯ : ತನ್ನ ವಿವಾಹಕ್ಕೆ ಎಚ್.ಡಿ. ಕುಮಾರಸ್ವಾಮಿ ಬರಲೇಬೇಕು ಎಂದು ಪಟ್ಟು ಹಿಡಿದು ಧರಣಿ ಕುಳಿತಿದ್ದ ಅಭಿಮಾನಿ ಮನೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಭೇಟಿ ನೀಡಿ ವಧು ವರರನ್ನು ಹಾರೈಸಿದ್ದಾರೆ.ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ರವಿ ಎನ್ನುವವರು ತಮ್ಮ ವಿವಾಹ ಸಮಾರಂಭಕ್ಕೆ ಕುಮಾರಸ್ವಾಮಿ ಅವರು ಬರಲೇಬೇಕು ಎಂದು ಒತ್ತಾಯಿಸಿ ಉಪವಾಸ ಸತ್ಯಗ್ರಹ ನಡೆಸಿದ್ದರು.ವಿಷಯ ತಿಳಿದ ಕುಮಾರಸ್ವಾಮಿ ಅವರು, ರವಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡಿದ್ದರು, ಮದುವೆಗೆ ಬರಲಾಗುವುದಿಲ್ಲ. ಮದುವೆ ಮುಗಿದ ನಂತರ ಮನೆಗೆ ಬರುತ್ತೇನೆ ಎಂದು ಭರವಸೆ ನೀಡಿದ್ದರು. ತನ್ನ ನೆಚ್ಚಿನ ನಾಯಕ ಭರವಸೆಯಿಂದ ರವಿ ಪ್ರತಿಭಟನೆ ಕೈಬಿಟ್ಟು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

 

 

333      ಮಾಜಿ ಶಾಸಕರ ಬೆಂಬಲಿಗನ ಹತ್ಯೆ
 ನವೆಂಬರ್ -30
 ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ಗ್ಯಾಂಗ್ ವಾರ್ ಗಳು ತಲೆ ಎತ್ತಿದ್ದು, ಒಂದಲ್ಲ ಒಂದು ಕಾರಣಕ್ಕೆ ಹೆಣ ಬೀಳುತ್ತಲೇ ಇದೆ. ಇದೀಗ ಮಾಜಿ   ಶಾಸಕ   ಕೆ.ಸುರೇಶ್ ಗೌಡ ಎಂಬುವರ ಬೆಂಬಲಿಗ ಎನ್ನಲಾಗುತ್ತಿರುವ ಹುಡುಗನ ಮೇಲೆ ದುಷ್ಕರ್ಮಿಗಳು ಮಚ್ಚು ಬೀಸಿ ಕೊಲೆಗೈದಿದ್ದಾರೆ.
 ಮದ್ದೂರು ತಾಲೂಕಿನ ಕೌಡ್ಲೆ ಸಮೀಪದ ಕೆ.ಜಿ.ಕೊಪ್ಪಲು ಗ್ರಾಮದ ಬಳಿ ನಿನ್ನೆ ಈ ಘಟನೆ ನಡೆದಿದ್ದು, ಜನ ಭಯಭೀತರಾಗಿದ್ದಾರೆ. ಹತ್ಯೆಗೀಡಾದ   ಯುವಕ ಕೊಪ್ಪ ಹೋಬಳಿ ಕೆ.ಮಲ್ಲಿಗೆರೆ ಗ್ರಾಮದ ರಮೇಶ್ ಎಂಬುವರ ಪುತ್ರ ಸಂತೋಷ್(24).
 ಈತ ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ಕೌಡ್ಲೆ ಸಮೀಪದ ಕೆ.ಜಿಕೊಪ್ಪಲು ಗ್ರಾಮದ ಬಳಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಇಂಡಿಕಾ   ಕಾರಿನಲ್ಲಿ ಆಗಮಿಸಿದ ಐದು ಮಂದಿ ಯುವಕರ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದೆ. ಪರಿಣಾಮ   ತೀವ್ರಗಾಯಗೊಂಡಿದ್ದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
 ಮೃತ ಸಂತೋಷ್ ಮಾಜಿ ಶಾಸಕ ಕೆ. ಸುರೇಶ್ ಗೌಡ ಅವರ ಬೆಂಬಲಿಗನಾಗಿದ್ದು ವಿಷಯ ತಿಳಿದ ಸುರೇಶ್ ಗೌಡ ಸ್ಥಳಕ್ಕಾಗಮಿಸಿ ಪೊಲೀಸ್   ಅಧಿಕಾರಿಗಳೊಡನೆ ಘಟನೆ ಸಂಬಂಧ ಚರ್ಚಿಸಿದ್ದಾರೆ. ಈತನ ಕೊಲೆಯ ಹಿಂದೆ ಯಾರ ಕೈವಾಡವಿದೆ ಏತಕ್ಕಾಗಿ ಕೊಲೆ ಮಾಡಲಾಗಿದೆ ಎಂಬುದು   ಪೊಲೀಸರ ತನಿಖೆಯಿಂದಷ್ಟೆ ತಿಳಿದು ಬರಬೇಕಿದೆ.
 ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
 ಘಟನಾ ಸ್ಥಳಕ್ಕೆ ಎಸ್ಪಿ ಜಿ. ರಾಧಿಕಾ, ಎಎಸ್ಪಿ ಲಾವಣ್ಯ, ಡಿವೈಎಸ್ಪಿ ಮಲ್ಲಿಕ್, ಸಿಪಿಐ ಕೆ. ಪ್ರಭಾಕರ್ ಭೇಟಿ ನೀಡಿದ್ದರು. ಕೊಪ್ಪ ಪೊಲೀಸ್ ಠಾಣಾ   ಪಿಎಸ್  ಐ ಶಿವಮಂಜು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

 

 

445        ಸಾವನ್ನೇ ಜಯಿಸಿದ : ಖಾದರ್
ನವೆಂಬರ್-27
 ಮಂಡ್ಯ: ಕಾಲುಜಾರಿ ಜಲಪಾತಕ್ಕೆ ಬಿದ್ದ ವ್ಯಕ್ತಿಯೊಬ್ಬರು 2 ದಿನಗಳ ನಂತರ ಪಾರಾಗಿ ಬಂದಿದ್ದಾರೆ. ಬೆಂಗಳೂರಿನ ಖಾದರ್ ಎಂಬುವವರು ಶನಿವಾರ  ಮಧ್ಯಾಹ್ನ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿ ಜಲಪಾತ ವೀಕ್ಷಣೆಗೆ ಬಂದಿದ್ದಾರೆ.
 ಅವರೊಬ್ಬರೇ ಜಲಪಾತ ವೀಕ್ಷಿಸುವಾಗ ಕಾಲು ಜಾರಿ ಬಿದ್ದಿದ್ದು, ಬಿದ್ದ ರಭಸಕ್ಕೆ ಕಾಲು ಮುರಿದು ಅವರಿಗೆ ಪ್ರಜ್ಞೆ ತಪ್ಪಿದೆ. ಎಚ್ಚರವಾದಾಗ  ರಾತ್ರಿಯಾಗಿದ್ದು, ಅವರು ಕೂಗಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ.
 ಸೋಮವಾರ ಮಧ್ಯಾಹ್ನದವರೆಗೂ ಬಂಡೆಯ ಮೇಲೆ ನೀರಿನ ನಡುವೆ ಇದ್ದ ಅವರು ನೀರು ಕುಡಿದೇ ಬದುಕಿದ್ದಾರೆ. ಸೋಮವಾರ ಮಧ್ಯಾಹ್ನ ಜಲಪಾತ  ವೀಕ್ಷಣೆಗೆ ಪ್ರವಾಸಿಗರು ಬಂದಿದ್ದನ್ನು ಗಮನಿಸಿದ ಖಾದರ್, ತಾನು ತೊಟ್ಟಿದ್ದ ಜರ್ಕಿನ್ ಬಿಚ್ಚಿ ತಿರುಗಿಸಿದ್ದು, ಇದನ್ನು ಗಮನಿಸಿದ ಪ್ರವಾಸಿಗರು  ಬೆಳಕವಾಡಿ ಪೊಲೀಸರಿಗೆ ತಿಳಿಸಿದ್ದಾರೆ.
 ಪೊಲೀಸರು ಸ್ಥಳೀಯರ ನೆರವಿನಿಂದ ಖಾದರ್ ನನ್ನು ರಕ್ಷಿಸಿದ್ದಾರೆ. 2 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಖಾದರ್ ನನ್ನು  ಆಸ್ಪತ್ರೆಗೆ ಸೇರಿಸಲಾಗಿದೆ.

    

  gg

ನ್ಯಾಯಾಲಯದ ಆದೇಶ ತಳ್ಳಿದಕ್ಕೆ ವೋಲ್ವೋ ಬಸ್ಸ್ ಜಪ್ತಿ
ನವೆಂಬರ್.25
ಕೆ.ಆರ್.ಪೇಟೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಅಂಚೆ ನೌಕರನಿಗೆ ಡಿಕ್ಕಿಹೊಡೆದು ಆತನ ಸಾವಿಗೆ ಕಾರಣವಾಗಿದ್ದ ಕಾರಣ ನ್ಯಾಯಾಲಯ 17 ಲಕ್ಷ ರೂ.ಪರಿಹಾರವನ್ನು ವಾರಸುದಾರರಿಗೆ ನೀಡುವಂತೆ ಕೆಎಸ್ಆರ್ಟಿಸಿ ಸಂಸ್ಥೆಗೆ ಆದೇಶ ನೀಡಿತ್ತು. ಆದರೆ 6 ತಿಂಗಳಾದರೂ ಪರಿಹಾರ ನೀಡದ್ದರಿಂದ ಸಂಸ್ಥೆಗೆ ಸೇರಿದ ವೋಲ್ವೋ ಬಸ್ಸೊಂದನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮತ್ತು ಪರಿಹಾರ ವಿಭಾಗದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಜೂನ್ 9, 2014ರಂದು ತಾಲೂಕಿನ ವಿಠಲಾಪುರ ಗ್ರಾಮದ ಅಂಚೆ ಇಲಾಖೆ ನೌಕರ ವಿ.ಸಿ.ಗೋಪಾಲ್ ಅವರು ಕಾರ್ಯನಿಮಿತ್ತ ಚಿನಕುರುಳಿಗೆ ಹೋಗಿ ವಾಪಸ್ ಬರುತ್ತಿದ್ದಾಗ ಹಿಂದಿನಿಂದ ಬಂದ ಕೆಎಸ್ಆರ್ಟಿಸಿ ಬಸ್ ಗೋಪಾಲ್ ಅವರಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಸಂಸ್ಥೆ ವಿರುದ್ಧ ಗೋಪಾಲ್ ಅವರ ವಾರಸುದಾರರು ಪಟ್ಟಣದ ಹಿರಿಯ ಶ್ರೇಣಿ ಜೆಎಂಎಫ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಗೋಪಾಲ್ ಅವರ ಕುಟುಂಬದವರಿಗೆ 17 ಲಕ್ಷ ರೂ.ಪರಿಹಾರ ನೀಡುವಂತೆ 2017ರ ಮೇ 10ರಂದು ಆದೇಶ ನೀಡಿತ್ತು. ಈ ಆದೇಶ ಪಾಲಿಸಬೇಕೆಂದು ಮೂರು ನೋಟಿಸ್ ನೀಡಿದರೂ ಅಧಿಕಾರಿಗಳು ಯಾವುದೇ ಉತ್ತರ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನ.23ರಂದು ಪಟ್ಟಣಕ್ಕೆ ಆಗಮಿಸುವ 17 ಲಕ್ಷ ರೂ.ಬೆಲೆ ಬಾಳುವ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಗೆ ಸೇರಿದ ಬಸ್ಸೊಂದನ್ನು ಜಪ್ತಿ ಮಾಡುವಂತೆ ನ್ಯಾಯಾಧೀಶ ಗುರುಪ್ರಸಾದ್ ಕಾರಂತ್ ಅವರು ಒಂದು ವಾರದ ಹಿಂದೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಅಧಿಕಾರಿಗಳಾದ ರೇಣುಕಾ, ಅನಿಲ್, ಆನಂದ್ ಮತ್ತು ಸತೀಶ್ ಅವರು ಗುರುವಾರ ಸಂಜೆ ಮೈಸೂರಿನಿಂದ ಮುಂಬಯಿಗೆ ಹೊರಟಿದ್ದ ವೋಲ್ವೋ ಬಸ್ಸನ್ನು ನ್ಯಾಯಾಲಯದ ಮಾರ್ಗವಾಗಿ ಹೋಗುತ್ತಿದ್ದ ಸಂದರ್ಭದಲ್ಲಿ ತಡೆದು ಜಪ್ತಿ ಮಾಡಿ ನ್ಯಾಯಾಲಯದ ವಶಕ್ಕೆ ನೀಡಿದರು.
ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ: ಬಸ್ ಜಪ್ತಿ ಮಾಡಿರುವ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಕೆ.ಆರ್.ಪೇಟೆ ಸಾರಿಗೆ ಡಿಪೋ ಮ್ಯಾನೇಜರ್ ಶ್ರೀನಿವಾಸ್ ಅವರು ಜಪ್ತಿಯಾದ ಬಸ್ಸಿನ ಪ್ರಯಾಣಿಕರಿಗೆ ಬದಲಿ ಪ್ರಯಾಣಕ್ಕೆ ಬೇರೆ ಬಸ್ಸಿನ ವ್ಯವಸ್ಥೆ ಮಾಡಿದರು. ಅರ್ಜಿದಾರರ ಪರ ಹಿರಿಯ ವಕೀಲರರಾದ ಎಸ್.ಸತೀಶ್ ವಾದ ಮಂಡಿಸಿದ್ದರು.

 

 

    gg  ಮಾಜಿ ಸಚಿವರ ಪುತ್ರಿ ಅದ್ದೂರಿ ಮದುವೆ ಆಮಂತ್ರಣ
ನವೆಂಬರ್.23
ಮಂಡ್ಯ: ನಾಗಮಂಗಲ ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡರ ಪುತ್ರಿಯ ವಿವಾಹದ ಅದ್ಧೂರಿ ವಿಡಿಯೋ ಆಮಂತ್ರಣ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಈ ಹಿಂದೆ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಮಗಳ ಮದುವೆಗೂ ಇದೇ ರೀತಿ ಅದ್ಧೂರಿ ವಿಡಿಯೋ ಆಮಂತ್ರಣ ನೀಡಲಾಗಿತ್ತು. ಈಗ ಜೆಡಿಎಸ್ ಮುಖಂಡ ಎಲ್ಆರ್ಎಸ್ ಪುತ್ರಿ ವಿವಾಹಕ್ಕೂ ಅದೇ ರೀತಿ ಆಮಂತ್ರಣ ನೀಡಲಾಗುತ್ತಿದೆ.
ಎಲ್ಆರ್ಎಸ್ ಅವರ ಪುತ್ರಿ ಭವ್ಯ ಅವರ ಮದುವೆ ಶಿವಲಾಲ್ ಮತ್ತು ಕಾಮಿನಿ ದಂಪತಿ ಪುತ್ರ ರಾಜೀವ್ ಅವರೊಂದಿಗೆ ಡಿ.6 ಮತ್ತು 7ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಅದ್ಧೂರಿ ಸೆಟ್ ನಿರ್ಮಿಸಿ ಚಿತ್ರೀಕರಿಸಲಾಗಿದೆ. ಹಾಡಿಗೆ ಕಲಾವಿದರ ಆಕರ್ಷಕ ನೃತ್ಯದೊಂದಿಗೆ ಶಿವರಾಮೇಗೌಡ ದಂಪತಿ ವಿವಾಹ ಆಮಂತ್ರಣ ಕೋರುವುದನ್ನು ವಿಡಿಯೋ ಚಿತ್ರೀಕರಿಸಲಾಗಿದೆ. ಇದು ಚರ್ಚೆಗೆ ಗ್ರಾಸವಾಗಿದೆ.

 

     

ಆಡಳಿತ ವೈಖರಿ ಬಜೆಪಿ ಅವರನ್ನು ಕೆರಳಿಸಿದೆ: ಸಿ ಎಂ

 ನವೆಂಬರ್ -20
ಮಂಡ್ಯ: 'ಸಿದ್ದರಾಮಯ್ಯ 5 ವರ್ಷ ಆಡಳಿತ ಪೂರೈಸಿದ್ದಾನಲ್ಲ ಎಂದು ಬಿಜೆಪಿ ನಾಯಕರಿಗೆ ಹೊಟ್ಟೆಕಿಚ್ಚು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾಗಮಂಗಲದಲ್ಲಿ ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಿಎಂ 'ಈಶ್ವರಪ್ಪ ಇದ್ದಾನೆ ಅವ ಬುದ್ದಿ ಹೀನ, ಯಡಿಯೂರಪ್ಪ ಅಂತ ಇದ್ದಾನೆ ಅವನೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಇದ್ದಾನೆ ಅವನಿಗೆ ಹೇಗೆ ಮಾತನಾಡಬೇಕೆಂಬುದೇ ಗೊತ್ತಿಲ್ಲ, ಪಾರ್ಲಿಮೆಂಟರಿ ಲ್ಯಾಂಗ್ವೇಜ್ ಗೊತ್ತಿಲ್ಲ. ಅನಾಗರಿಕ ಮಾತುಗಳನ್ನಾಡುತ್ತಾನೆ' ಎಂದರು. 'ಬಿಜೆಪಿಯವರು ಹೀಗೆ ಮಾತನಾಡುವುದು ಯಾಕೆ ಗೊತ್ತಾ ? ಅವರಿಗೆ ಹೊಟ್ಟೆಕಿಚ್ಚು . ಸಿದ್ದರಾಮಯ್ಯ 5 ವರ್ಷ ಆಡಳಿತ ಪೂರ್ಣ ಮಾಡಿದನಲ್ಲಾ ಎಂದು. ಅವರ ಹೊಟ್ಟೆ ಕಿಚ್ಚು ಅವರನ್ನೇ ಸುಡುತ್ತದೆ. ನನಗೆ ರಾಜ್ಯದ ಜನ ಆಶೀರ್ವಾದ ಮಾಡುತ್ತಾರೆ'ಎಂದರು.'ನಾನು ಬಿಜೆಪಿ ನಾಯಕರ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲ. ನನಗೂ ಹಳ್ಳಿ ಭಾಷೆಯಲ್ಲಿ ಬೈಯಲು ಬರುತ್ತದೆ ಆದರೆ ಹಾಗೆ ಮಾತನಾಡುವುದಿಲ್ಲ' ಎಂದರು.

 

23

 ರಮ್ಯಾ ಮನೆ ಮಾಡಿದ್ದೇಕೆ ಗೊತ್ತಾ..?
 ನವೆಂಬರ್ -18

 ಮಂಡ್ಯ:  ನಟಿ ಹಾಗೂ ರಾಜಕಾರಣಿ ರಮ್ಯಾ ಅವರು ಮಂಡ್ಯದಲ್ಲಿ ಮನೆ ಮಾಡಿದ್ದಾರೆ. ಅವರು ಮುಂದಿನ ವಿಧಾನಸಭೆ  ಚುನಾವಣೆಯಲ್ಲಿ ಮಂಡ್ಯದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತಾದರೂ ಈ ಗೊಂದಲಗಳಿಗೆಲ್ಲಾ ತೆರೆ ಬಿದ್ದಿದೆ.
 ರಮ್ಯಾ ಎ.ಐ.ಸಿ.ಸಿ. ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಅವರು ವಿಧಾನಸಭೆ ಚುನಾವಣೆಗಿಂತ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.
 ಸಂಸತ್ ಸ್ಥಾನಕ್ಕೆ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಅವರು ಮುಂದಿನ ಲೋಕಸಭೆ  ಚುನಾವಣೆಗೆ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ.
 ಆಪ್ತರು ಮತ್ತು ಹಿತೈಷಿಗಳ ಬಳಿ ಈ ಕುರಿತು ಮಾತನಾಡಿರುವ ಅವರು, ಮುಂದಿನ ರಾಜಕೀಯ ಭವಿಷ್ಯವನ್ನು  ಗಮನದಲ್ಲಿಟ್ಟುಕೊಂಡು ಮಂಡ್ಯದಲ್ಲಿ ಮನೆ ಮಾಡಿದ್ದು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ ಎಂದು  ಹೇಳಲಾಗಿದೆ.

 

 

77     ರಮ್ಯಾ ಮಂಡ್ಯದಲ್ಲಿ ಮನೆ ಖರೀದಿಸಿಲ್ಲ
ನವೆಂಬರ್- 13
ಮಂಡ್ಯ : ಮಾಜಿ ಸಂಸದೆ ರಮ್ಯಾ ಮಂಡ್ಯದಲ್ಲಿ ಮನೆ ಖರೀದಿ ಮಾಡಿಲ್ಲ ಎಂದು ಮನೆ ಮಾಲೀಕರು ಸ್ಪಷ್ಟನೆ ಕೊಟ್ಟಿದ್ದಾರೆ. 'ಮನೆಯನ್ನು ಮಾರುವ ಚಿಂತನೆಯೂ ನಮ್ಮ ಮುಂದಿಲ್ಲ' ಎಂದು ಅವರು ಹೇಳಿದ್ದಾರೆ.
ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಮಂಡ್ಯದಲ್ಲಿ ಮನೆ ಖರೀದಿ ಮಾಡಿದ್ದಾರೆ. ನ.29ರಂದು ಹೊಸ ಮನೆಗೆ ಆಗಮಿಸಿ, ಗೃಹ ಪ್ರವೇಶ ಮಾಡಿ, ಚುನಾವಣಾ ಕಾರ್ಯಗಳನ್ನು ಆರಂಭಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಮನೆಯ ಮಾಲೀಕ ಸಾದತ್ ಅಲಿಖಾನ್ ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. 'ರಮ್ಯಾ ಕೆ.ಆರ್.ರೋಡ್ನ ವಿದ್ಯಾನಗರದಲ್ಲಿರುವ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಆದರೆ, ಬಾಡಿಗೆಗೆ ಇದ್ದ ಮನೆಯನ್ನು ಖರೀದಿ ಮಾಡಿದ್ದಾರೆ' ಎಂಬ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ.
'ಅದು ನನ್ನ ತಂದೆಯವರು ಇದ್ದ ಮನೆ. ರಮ್ಯಾ ಅವರಿಗೆ ಬಾಡಿಗೆ ನೀಡಿದ್ದೇನೆ ಹೊರತು ಅದನ್ನು ಮಾರಿಲ್ಲ. ಆ ಮನೆ ಮೇಲೆ ಭಾವನಾತ್ಮಕ ಸಂಬಂಧವಿದೆ. ಅದನ್ನು ಮಾರುವ ಚಿಂತನೆಯೂ ನಮ್ಮ ಮುಂದಿಲ್ಲ' ಎಂದು ಮಾಲೀಕರು ಸ್ಪಷ್ಟಪಡಿಸಿದ್ದಾರೆ.
ರಮ್ಯಾ ಅವರು ಮಂಡ್ಯದಲ್ಲಿ ಮನೆ ಮಾಡಿ ಮುಂದಿನ ವಿಧಾನಸಭೆ ಚುನಾವಣೆಗೆ ಮಂಡ್ಯ ಅಥವ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಈಗ ಮನೆ ಖರೀದಿ ಮಾಡಿಲ್ಲ ಎಂದು ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

 

 

 

33  ಬ್ರಿಡ್ಜ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕರಿಬ್ಬರ ದಾರುಣ ಸಾವು
 ನವೆಂಬರ್-11
ಮಂಡ್ಯ: ಬ್ರಿಡ್ಜ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಜಲ್ಲೆಯ ಮಳವಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 209ರ ಚಿಲ್ಲಾಪುರ ಗೇಟ್ ಬಳಿ ತಡರಾತ್ರಿ ನಡೆದಿದೆ.
ಹಲಗೂರಿನ ಪ್ರತಾಪ್(23) ಬಾಣಸಮುದ್ರದ ಶಶಿ(24) ಮೃತ ದುರ್ದೈವಿಗಳು. ಘಟನೆಯಿಂದ ಪ್ರತಾಪ್ ಸ್ಥಳದಲ್ಲಿಯೇ ಮೃತಪಟ್ಟರೆ, ಶಶಿ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಅಜಾಗರೂಕತೆ ಹಾಗೂ ಅತಿವೇಗವೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

11  ಅಂಬಿ-ಮಾದೇಗೌಡ ಗೌಪ್ಯ ಚರ್ಚೆ
 ನವೆಂಬರ್-11
 ಮಂಡ್ಯ : ಮಾಜಿ ಸಂಸದೆ ರಮ್ಯಾ ಮತ್ತೆ ಮಂಡ್ಯ ಜಿಲ್ಲೆಗೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದಾರೆ ಎಂಬ ವಿಚಾರವೊಂದು ಮೂಲಗಳಿಂದ ತಿಳಿದುಬಂದಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ರಮ್ಯಾ ವಾಸವಿದ್ದ ಮನೆ ಕ್ಲೀನಿಂಗ್ ಕೆಲಸ ಶುರುವಾಗಿದೆ. ನವೆಂಬರ್ 29 ಹುಟ್ಟುಹಬ್ಬದಂದೇ ಮಂಡ್ಯದಲ್ಲಿ ಮತ್ತೆ ಪದ್ಮಾವತಿ ಪರ್ವ ಆರಂಭವಾಗಲಿದೆ. ರಮ್ಯಾಗೆ ಮಂಡ್ಯದಲ್ಲೇ ಟಿಕೆಟ್ ನೀಡಿ ಜಿಲ್ಲೆಯ ನಾಯಕತ್ವ ನೀಡಲು ನಡೆದಿದೆ ಸಿದ್ಧತೆ ನಡೆಸಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.
ಇನ್ನು ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಂಡ್ಯದಲ್ಲಿ ರಾಜಕಾರಣ ಗರಿಗೆದರಿದ್ದು, ಇಂದು ಶಾಸಕ ಅಂಬರಿಶ್ ಕಾಂಗ್ರೆಸ್ ಹಿರಿಯ ನಾಯಕ ಜಿ.ಮಾದೇಗೌಡ ಜೊತೆ ಒಂದು ಗಂಟೆಗಳ ಕಾಲ ಗೌಪ್ಯ ಮಾತುಕತೆ ನಡೆಸಿದ್ದಾರೆ. ಮಂಡ್ಯದಲ್ಲಿ ನಡೆದ ಟಿಪ್ಪು ಜಯಂತಿಗೆ ಗೈರಾಗಿದ್ದ ಅಂಬಿ, ರಾತ್ರಿ ಮಂಡ್ಯದ ಹೊರವಲಯದಲ್ಲಿರುವ ತಮ್ಮ ಆಪ್ತ ಅಮರಾವತಿ ಚಂದ್ರಶೇಖರ್ ನಿವಾಸಕ್ಕೆ ಜಿ.ಮಾದೇಗೌಡರನ್ನು ಕರೆಸಿಕೊಂಡು ಗೌಪ್ಯ ಮಾತುಕತೆ ನಡೆಸಿದ್ರು.
ಮಾಜಿ ಸಂಸದೆ ರಮ್ಯಾ ಮಂಡ್ಯದಲ್ಲಿ ಸ್ವಂತ ಮನೆ ಮಾಡಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ರಮ್ಯಾ ಸ್ಪರ್ಧಿಸುತ್ತಾರೆ ಅನ್ನೋ ಮಾತು ಕಿವಿಗೆ ಬೀಳುತ್ತಲೇ ಕ್ಷೇತ್ರಕ್ಕೆ ರಾತ್ರೋರಾತ್ರಿ ಆಗಮಿಸಿದ ಅಂಬಿ ಮಾದೇಗೌಡರೊಂದಿಗೆ ಗೌಪ್ಯ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಂಬರೀಶ್, ಮಾದೇಗೌಡರು ನನ್ನ ತುಂಬಾ ಇಷ್ಟಪಡ್ತಾರೆ. ಅವರೊಂದಿಗೆ ಮಾತನಾಡಬೇಕೆನಿಸಿತು ಮಾತನಾಡಿದ್ದೇನೆ.
ರಾಜಕೀಯ ಚರ್ಚೆ ನಡೆದಿಲ್ಲ ಎಂದ ಅವರು ನನಗೆ ಟಿಕೆಟ್ ಕೊಡೋದು ಬಿಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.

 

 

                                            

ಮಂಡ್ಯದಲ್ಲಿ ಭಿಕ್ಷಾಟನೆ ಹೆಚ್ಚಳ: ಅಂಕಿ ಸಂಖ್ಯೆ ಸಹಾಯವಾಣಿಗೆ ಗೊಂದಲ

ನವೆಂಬರ್-9

 ಮಂಡ್ಯ: ಜಿಲ್ಲೆಯಲ್ಲಿ ಪ್ರತಿವರ್ಷ ದಿನದಿಂದ ದಿನಕ್ಕೆ ಮಕ್ಕಳ ಭಿಕ್ಷಾಟನೆಯಲ್ಲಿ ಹೆಚ್ಚುತ್ತಲೇ ಇದೆ. ಪ್ರತಿ ವರ್ಷ ಮಕ್ಕಳ ಸಹಾಯವಾಣಿಗೆ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಬಗ್ಗೆ ಸಾಕಷ್ಟು ದೂರುಗಳು ದಾಖಲಾಗಿವೆ. ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಅಂಕಿ ಸಂಖ್ಯೆ ಮಾತ್ರ ಮಕ್ಕಳ ಸಹಾಯವಾಣಿಗೆ ಕಚಿತವಾಗಿ ಸಿಗುತ್ತಿಲ್ಲ..

2012-13 ರಿಂದ 2016-17ರವರೆಗೆ ಮಕ್ಕಳ ಸಹಾಯವಾಣಿಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಸಂಖ್ಯೆ 249. ಇದು ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರುಗಳು ಮಾತ್ರ. ಇದನ್ನು ಹೊರತುಪಡಿಸಿ ನೂರಾರು ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವುದು ವಾಸ್ತವ ಸಂಗತಿ.ಜಿಲ್ಲೆಯಲ್ಲಿ ಬಾಲ್ಯವಿವಾಹ ಹೊರತುಪಡಿಸಿದರೆ ಮಕ್ಕಳ ಭಿಕ್ಷಾಟನೆ ದೊಡ್ಡ ಪಿಡುಗಾಗಿ ಪರಿಣಮಿಸಿದೆ.

ಮಂಡ್ಯ ತಾಲೂಕಿನ ಬೇವಿನಹಳ್ಳಿ, ಚಿಕ್ಕಮಂಡ್ಯ, ಹೊಳಲು ಸರ್ಕಲ್, ಸಂತೆಮಾಳ, ಗಾಮನಹಳ್ಳಿ, ಮಂಗಲ, ಬೂದನೂರು, ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ, ಕೃಷ್ಣರಾಜಸಾಗರ, ನಾಗಮಂಗಲ ತಾಲೂಕಿನ ಶಿಕಾರಿಪುರ, ಪಾಂಡವಪುರದ ರೈಲು ನಿಲ್ದಾಣ ಹೀಗೆ ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿ ಭಿಕ್ಷೆಯನ್ನೇ ವೃತ್ತಿ ಮಾಡಿಕೊಂಡಿದ್ದಾರೆ.

 

                                                                                                                                          

ವಿಕಲಚೇತನರು ಆರ್ಥಿಕ, ಶೈಕ್ಷಣಿಕದಿಂದ ಅಭಿವದ್ಧಿ ಸಾಧ್ಯ

 

ನವೆಂಬರ್.2

ನಾಗಮಂಗಲ: ಸರಕಾರದ ಯೋಜನೆ ಪಡೆದುಕೊಂಡು ವಿಕಲಚೇತನರು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಭಿವದ್ಧಿ ಹೊಂದಬೇಕು ಎಂದು ಹರದನಹಳ್ಳಿ ಗ್ರಾಪಂ ಪಿಡಿಒ ಬಸವಶೆಟ್ಟಿ ತಿಳಿಸಿದರು.

ತಾಲೂಕಿನ ದೇವಲಾಪುರ ಹೋಬಳಿಯ ಯಗಟಹಳ್ಳಿ ಗ್ರಾಮದಲ್ಲಿ ಹರದನಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಕಲಚೇತನರ ಸೌಲಭ್ಯ ಕುರಿತ ಅರಿವಿನ ಸಿಂಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಕಲಚೇತನರಿಗೆ ವಿವಿಧ ರೀತಿಯ ಸವಲತ್ತುಗಳನ್ನು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿಗೆ ಕರೆತರುವ ನಿಟ್ಟಿನಲ್ಲಿ ಸರಕಾರ ಹಲವು ಯೋಜನೆಗಳನ್ನು ರೂಪಿಸಿದೆ. ತಾಲೂಕಿನ ಹರದನಹಳ್ಳಿ ಗ್ರಾಪಂ ವ್ಯಾಪ್ತಿಯ 30 ಗ್ರಾಮಗಳಲ್ಲಿ 120ಕ್ಕೂ ಹೆಚ್ಚು ಮಂದಿ ವಿಕಲಚೇತನರಿದ್ದು, ಅವರ ಅಗತ್ಯತೆಗಳನ್ನು ಗುರಿತಿಸುವ ಸಲುವಾಗಿ ಸರ್ವೇ ಕಾರ್ಯ ನಡೆಸಿ ವರದಿ ನೀಡುವಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆರು ಪ್ರಮುಖ ಪಾತ್ರವಹಿಸಬೇಕು. ಸರಕಾರ ಬಿಡುಗಡೆ ಮಾಡುವ ಯೋಜನೆ ಮತ್ತು ಅನುದಾನದಲ್ಲಿ ಶೇ.5ರಷ್ಟು ಹಣವನ್ನು ವಿಕಲಚೇತರ ಅಭಿವದ್ಧಿಗಾಗಿ ಯೇ ಬಳಕೆ ಮಾಡಲಾಗುತ್ತಿದ್ದು, ಅರ್ಹ ವ್ಯಕ್ತಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

 

 

   gg

ನಾಡ ಹಬ್ಬಕ್ಕೂ ಬಾರದ ಅಂಬರೀಶ್
ನವೆಂಬರ್.1
ಮಂಡ್ಯ: ಸರ್‌.ಎಂ.ವಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಡಹಬ್ಬ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾಜಿ ಸಚಿವ, ಮಂಡ್ಯದ ಶಾಸಕ ಅಂಬರೀಶ್ ಭಾಗವಹಿಸಿಲ್ಲ.
ಜಿಲ್ಲಾ ಉಸ್ತುವಾರಿ ಸ್ಥಾನ‌ ಹೋದ ನಂತರ ಜಿಲ್ಲೆಯ ರಾಷ್ಟ್ರೀಯ ಮತ್ತು ನಾಡಹಬ್ಬದ ಕಾರ್ಯಕ್ರಮಕ್ಕೆ ಅಂಬರೀಶ್‌ ಸತತ ಗೈರು ಆಗುತ್ತಿರುವುದಕ್ಕೆ ಕ್ಷೇತ್ರದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೆ ಮಂಡ್ಯದಲ್ಲಿ ನಡೆದ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ರಾಜಕೀಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಚಿವ ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯರಾದ ಅಪ್ಪಾಜಿಗೌಡ, , ತಾಲ್ಲೂಕು ಪಂಚಾಯತ್ ಅಧ್ಯಕ್ಷ ಬೀರಪ್ಪ ಇನ್ನಿತರರಿದ್ದರು.

 

 

 

66  ಚೀನಾ ಮೊಬೈಲ್ ಬ್ಲಾಸ್ಟ್
 ಅಕ್ಟೋಬರ್-30
ಮಂಡ್ಯ : ರಿಪೇರಿ ಮಾಡುವ ವೇಳೆ ಚೀನಾ ಮೊಬೈಲ್ ಬ್ಲಾಸ್ಟ್ ಆಗಿರುವ ಘಟನೆ ಮಂಡ್ಯದ ಮಳಿಗೆಯೊಂದರಲ್ಲಿ ನಡೆದಿದೆ.
ನಾಗರಮಂಗಲ ರಸ್ತೆಯಲ್ಲಿರುವ ಪ್ರದೀಪ್ ಎಂಬುವರ ಅಂಗಡಿಯಲ್ಲಿ ಮೊಬಲ್ ಬ್ಲಾಸ್ಟ್ ಆಗಿದೆ. ಚೈನಾ ಮೂಲದ ಕಂಪನಿಗೆ ಸೇರಿದ ಮೊಬೈಲ್ ಆನ್ ಆಗುತ್ತಿಲ್ಲ ಎಂದು ಗ್ರಾಹಕರೊಬ್ಬರು, ಅಂಗಡಿಯ ಮಾಲಿಕ ಪ್ರದೀಪ್ ಅವರಿಗೆ ರಿಪೇರಿ ಮಾಡಲು ನೀಡಿದ್ದಾರೆ.
ರಿಪೇರಿ ಮಾಡುವಾಗ ಮೊಬೈಲ್ ನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡು ಬ್ಲಾಸ್ಟ್ ಆಗಿದೆ. ಆದರೆ ಮೊಬೈಲ್ ನಲ್ಲಿ ಬಂದ ಹೊಗೆ ಪ್ರದೀಪ್ ಅವರ ಅಂಗಡಿಯನ್ನು ಆವರಿಸಿ ಕ್ಷಣ ಕಾಲ ಭಯದ ವಾತಾವರಣ ನಿರ್ಮಿಸಿದೆ.

 

 

ff   ಭೀಕರ ಅಪಘಾತಕ್ಕೆ 10 ಬಲಿ
 ಅಕ್ಟೋಬರ್-30
ಮದ್ದೂರು: ಮದುವೆಗೆ ಹೊರಟಿದ್ದ ಟೆಂಪೋವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 10 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮದ್ದೂರು ತಾಲೂಕಿನ ಅವಸರದಹಳ್ಳಿ ಬೀರಮ್ಮ ( 51) ಹಾಗೂ ಯಡನಹಳ್ಳಿಯ ಮಾದಮ್ಮ(63), ಪಾರ್ವತಮ್ಮ(48), ಜಯಮ್ಮ(46), ಸಣ್ಣಮ್ಮ (60),ರೇಣುಕಮ್ಮ(40),ಮೀನಾಕ್ಷಿ(37) ಶಿವಣ್ಣ (45),ಸೋನು(5) ಮತ್ತು ವದುವಿನ ತಂಗಿ ಪೂಜಾ ಎಂದು ಗುರುತಿಸಲಾಗಿದೆ.
ಕುಣಿಗಲ್ ತಾಲೂಕಿನ ಶಿವನಹಳ್ಳಿ ವರ ಹಾಗೂ ಮದ್ದೂರು ತಾಲೂಕಿನ ಅವಸರದಹಳ್ಳಿ ರಾಜಪ್ಪ ಎನ್ನುವವರ ಮಗಳಿಗೆ ಮದುವೆ ನಿಶ್ಚಯವಾಗಿದ್ದು, ಭಾನುವಾರ ವಧುವಿನ ಕಡೆಯ 50ಕ್ಕೂ ಹೆಚ್ಚು ಮಂದಿ ಅವಸರದಹಳ್ಳಿಯಿಂದ ಟೆಂಪೋ ಮೂಲಕ ಮದ್ದೂರು ಪಟ್ಟಣದ ಕಲ್ಯಾಣ ಮಂಟಪಕ್ಕೆ ಹೊರಟಿದ್ದ ವೇಳೆ ಕೆಸ್ತೂರು ಠಾಣಾ ವ್ಯಾಪ್ತಿಯ ತೊರೆಶೆಟ್ಟಿಹಳ್ಳಿ ಗ್ರಾಮದ ಸಮೀಪ ಬೇರೆ ವಾಹನ ಹಿಂದಿಕ್ಕುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆ ಹಾಗೂ ಇತರ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ, ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಪರಶೀಲನೆ ನಡೆಸಿದ್ದಾರೆ. ಮದ್ದೂರು ತಾಲೂಕಿನ ಕೆಸ್ತೂರು ಠಾಣೆಯಲ್ಲಿ ಅಈ ಕುರಿತು ಪ್ರಕರಣ ದಾಖಲಾಗಿದೆ.

 

 

      hhh

 

  ಅಂಧನ ಬಾಳಿಗೆ ಬೆಳಕಾದ ಯುವತಿ

ಅಕ್ಟೋಬರ್.26
 ಕೆ.ಆರ್.ಪೇಟೆ: ಅಂಧ ಯುವಕನನ್ನು ಯುವತಿಯೊಬ್ಬಳು ಸರಳ ವಿವಾಹವಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ತಾಲೂಕಿನ ವಳಗೆರೆಮೆಣಸ ಗ್ರಾಮದ ಮಾಯಮ್ಮ ಮತ್ತು ಈರಯ್ಯ ದಂಪತಿಗಳ ಪುತ್ರ ಮಂಜುನಾಥ್ ಅಂಧನಾಗಿದ್ದು, ಈತನನ್ನು ಪಾಂಡವಪುರ ತಾಲೂಕಿನ ದಿ. ಸುಜಾತ ಮತ್ತು ಬಸವರಾಜು ಅವರ ಪುತ್ರಿ ವೀಣಾ ಎಂಬಾಕೆ ಪಟ್ಟಣದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದಲ್ಲಿ ಸರಳ ವಿವಾಹವಾಗಿದ್ದು, ಆ ಮೂಲಕ ಅಂಧ ಯುವಕನ ಬಾಳಿಕೆ ಬೆಳಕು ನೀಡಿದ್ದಾರೆ.ಎರಡೂ ಕಣ್ಣಿಲ್ಲದಿದ್ದರೂ ಬೇರೆಯವರ ಆಶ್ರಯದಲ್ಲಿ ಬದುಕದೇ ಸ್ವಾವಲಂಬಿಯಾಗಿ ಬದುಕುವ ಛಲವನ್ನು ರೂಢಿಸಿಕೊಂಡಿದ್ದ ಮಂಜುನಾಥನಿಗೆ ಯಾರೂ ಸಹ ಹೆಣ್ಣು ಕೊಡಲು ಮುಂದೆ ಬಂದಿರಲಿಲ್ಲ. ಇದರಿಂದಾಗಿ ವಿವಾಹವಾಗುವ ಆಸೆಯನ್ನು ಕೈಬಿಟ್ಟು ತನ್ನ ಪಾಡಿಗೆ ತಾನು ತೆಂಗಿನಕಾಯಿ ಸುಲಿಯುವ ಕಾಯಕವನ್ನು ಮಾಡುತ್ತಾ ತನ್ನ ಜೀವನಕ್ಕೆ ಸಾಕಾಗುವಷ್ಟು ಸಂಪಾದನೆ ಮಾಡುವ ಮೂಲಕ ಸಮಾಜದಲ್ಲಿ ಮಾದರಿಯಾಗಿ ಬದುಕುತ್ತಿದ್ದನು.ಈತನನ್ನು ತುಂಬಾ ಹತ್ತಿರದಿಂದ ನೋಡಿದ್ದ ಮಂಜುನಾಥ್ ಅವರ ಹತ್ತಿರದ ಸಂಬಂಧಿಯೂ ಆಗಿರುವ ವೀಣಾ ಅವರ ಸಾಕು ತಾಯಿಯಾದ ಆದ ಹರವು ಗ್ರಾಮದ ಪಾರ್ವತಿ ಅವರಿಗೆ, ಮಂಜುನಾಥನಿಗೆ ತಮ್ಮ ಸಾಕು ಮಗಳನ್ನು ವಿವಾಹ ಮಾಡಿದರೆ ಇಬ್ಬರೂ ಸುಖವಾಗಿ ಬಾಳುತ್ತಾರೆ ಅಂತ ಅನ್ನಿಸಿದೆ. ಅಂಧನಾದ ಮಂಜುನಾಥನಿಗೂ ಆಸರೆಯೂ ಆಗುತ್ತದೆ ಎಂದು ಇಬ್ಬರಿಗೂ ತಮ್ಮ ಬಂಧುಗಳ ಸಮ್ಮುಖದಲ್ಲಿ ಗುರುವಾರ ಸರಳ ವಿವಾಹ ನೆರವೇರಿಸಿದರು.ಸರಳ ವಿವಾಹವಾದ ನೂತನ ವಧೂ-ವರರನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ.ಎಸ್.ಕೃಷ್ಣಮೂರ್ತಿ, ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್, ಜಿಲ್ಲಾ ಛಲವಾದಿ ಮಹಸಭಾ ಅಧ್ಯಕ್ಷ ಮಾಂಬಹಳ್ಳಿ ಜಯರಾಂ, ತಾಲೂಕು ಅಧ್ಯಕ್ಷ ಮುದುಗೆರೆ ಮಹೇಂದ್ರ, ಎಪಿಎಂಸಿ ನಿರ್ದೇಶಕ ಸೋಮಸುಂದರ್, ಗ್ರಾ.ಪಂ.ಸದಸ್ಯ ಶಿವರಾಂ ಸೇರಿದಂತೆ ಹಲವು ಗಣ್ಯರು ಹಾಜರಿದ್ದು ಶುಭಹಾರೈಸಿದ್ದಾರೆ.

 

 

 

77

  ಗಾಂಜಾ ಬೆಳೆದ ವ್ಯಕ್ತಿ ಅರೆಸ್ಟ್

 ಅಕ್ಟೋಬರ್.26
 ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಡತಾಳು ಗ್ರಾಮದ ರೈತನೊಬ್ಬ ತನ್ನ ಮನೆಯ ಹಿತ್ತಲಿನಲ್ಲಿ ಗಾಂಜಾ ಬೆಳೆದಿದ್ದ ರೈತನನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ಜವರೇಗೌಡ ಬಂಧಿತ ರೈತ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಖಚಿತ ಮಾಹಿತಿ ಪಡೆದು ಪೊಲೀಸರು ಜವರೇಗೌಡ ಮನೆ ದಾಳಿ ನಡೆಸಿ ಮನೆಯ ಹಿತ್ತಲಿನಲ್ಲಿ ಬೆಳೆದಿದ್ದ ಸುಮಾರು 1.5 ಕೆ.ಜಿ ಹಸಿ ಗಾಂಜಾ ಗಿಡ ವಶಪಡಿಸಿಕೊಂಡಿದ್ದಾರೆ.

 

 

ff        ತುಂಬಿದ ಸಿಂಗರಸಿನ ಕೆರೆಗೆ ಬಾಗಿನ ಸಮರ್ಪಣೆ
ಅಕ್ಟೋಬರ್.26
ಮಂಡ್ಯ: ನಾಗಮಂಗಲ ತಾಲೂಕಿನ ಎಲ್ಲ ಗ್ರಾಮಗಳಿಗೂ ಶಾಶ್ವತ ಕುಡಿಯುವ ನೀರಿನ ಯೋಜನೆ ಕಲ್ಪಿಸುವ ಉದ್ದೇಶದಿಂದ 2 ಸಾವಿರ ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಸೂಳೆಕೆರೆ ಮತ್ತು ಪಟ್ಟಣದ ಹೊರವಲಯದ ಸಿಂಗರಸಿನಕೆರೆ ಭರ್ತಿಯಾಗಿ ಕೋಡಿಬಿದ್ದಿರುವ ಹಿನ್ನಲೆಯಲ್ಲಿ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಮಾತನಾಡಿದರು.
ಕಳೆದ ನಾಲ್ಕು ವರ್ಷಗಳಿಂದ ಭೀಕರ ಬರಗಾಲ ಆವರಿಸಿದ್ದ ಹಿನ್ನ್ನೆಲೆಯಲ್ಲಿ ಮಳೆಯಿಲ್ಲದೆ ತಾಲೂಕಿನ ಯಾವ ಕೆರೆ ಕಟ್ಟೆಗಳು ತುಂಬಿರಲಿಲ್ಲ. ದೇವರ ಕಪೆಯಿಂದ ಈ ಬಾರಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಹಲವು ಕೆರೆ ಕಟ್ಟೆಗಳು ಭರ್ತಿಯಾಗಿವೆ.
ತಾಲೂಕಿನ ಹೇಮಾವತಿ ಅಚ್ಚು ಕಟ್ಟೆ ವ್ಯಾಪ್ತಿಯ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ಮೂಲಕ ಯಾವುದೇ ಹಳ್ಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಶಾಶ್ವತ ಯೋಜನೆ ಕಲ್ಪಿಸುವ ಸಲುವಾಗಿ ನಾಲಾ ಆಧುನೀಕರಣ ಸೇರಿದಂತೆ ಕುಡಿಯುವ ನೀರಿನ ಯೋಜನೆಗಾಗಿಯೇ 2 ಸಾವಿರ ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದರಲ್ಲಿ 900 ಕೋಟಿ ರೂ. ವೆಚ್ಚದ ಯೋಜನೆ ಗೆ ಸರಕಾರ ಹಸಿರು ನಿಶಾನೆ ತೋರಿಸಿದೆ ಎಂದು ಹೇಳಿದರು.

 

 

 

qq   ಬೆಕ್ಕಳಲೆ ಗ್ರಾಮದಲ್ಲಿ ಬೆಕ್ಕೇ ಗ್ರಾಮದೇವತೆ
 ಅಕ್ಟೋಬರ್-24
ಮಂಡ್ಯ: ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಕ್ಕಳಲೆ ಗ್ರಾಮ. ಹಿಂದೆ ಮಾರ್ಜಾಲಪುರ ಅಂತಾನೂ ಕರೀತಿದ್ದರು.. ಈ ಗ್ರಾಮಕ್ಕೆ ಬೆಕ್ಕೇ ದೇವರು. ಗ್ರಾಮಸ್ಥರು ಶುಭಕಾರ್ಯಕ್ಕೆ ಹೋಗುವ ಮುನ್ನ ಅಥವಾ ಒಂದು ಕೆಲಸ ಆರಂಭಿಸುವ ಮುನ್ನ ಮೊದಲು ಬೆಕ್ಕಿನ ದರ್ಶನ ಪಡೆಯೋದು ಗ್ರಾಮದ ಅಲಿಖಿತ ನಿಯಮ.
ಗ್ರಾಮದಲ್ಲಿ ಮೂರು ದೇವಸ್ಥಾನಗಳನ್ನು ನಿರ್ಮಿಸಿದ್ದಾರೆ. ಮಂಗಳವಾರ ತಮ್ಮೂರಿನ ಈ ಮೂರು ದೇವಸ್ಥಾನದಲ್ಲಿ ಬೆಕ್ಕಿನ ಮಂಗಮ್ಮನಿಗೆ ವಿಶೇಷ ಪೂಜೆ ನಡೆಯುತ್ತೆ. ವರ್ಷಕ್ಕೊಮ್ಮೆ ಜಾತ್ರೆ ಕೂಡ ನಡೆಯುತ್ತೆ. ಅಷ್ಟೇ ಅಲ್ಲ, ಹಬ್ಬ ಹರಿದಿನಗಳಲ್ಲಿ ಬೆಕ್ಕಿಗೆ ಎಡೆಕೊಟ್ಟು ಬೆಕ್ಕು ಬಿಟ್ಟ ಎಂಜಲನ್ನೇ ಪ್ರಸಾದವಾಗಿ ಸ್ವೀಕರಿಸುತ್ತಾರೆ. ಪ್ರತಿಮನೆಯಲ್ಲೂ ಹಾಲು ಕರೆದು ಮೊದಲು ನೀಡೋದೆ ಬೆಕ್ಕಿಗೆ.
ಇನ್ನೂ ಗ್ರಾಮದಲ್ಲಿ ಬೆಕ್ಕು ಸತ್ತರೆ ಮನುಷ್ಯರಂತೆ ಶವಸಂಸ್ಕಾರ ಮಾಡುತ್ತಾರೆ. ಅಲ್ಲದೆ ಯಾರೂ ಬೆಕ್ಕನ್ನು ಹೊಡೆಯಲ್ಲ. ಅಪ್ಪಿ ತಪ್ಪಿ ಹೊಡೆದವರು ಉದ್ದಾರಾಗಿಲ್ಲ ಅನ್ನೋದನ್ನ ಸಾಕ್ಷಿ ಸಮೇತ ಬಿಚ್ಚಿಡುತ್ತಾರೆ ಗ್ರಾಮಸ್ಥರು.
ಮದುವೆ ಮುಂಜಿಯಂತಹ ಕಾರ್ಯಗಳು ಬೆಕ್ಕಿನ ದರ್ಶನವಿಲ್ಲದೆ ನಡೆಯೋದೇ ಇಲ್ಲ. ಒಟ್ಟಿನಲ್ಲಿ ಬೆಕ್ಕನ್ನ ಅನಿಷ್ಟ ಪ್ರಾಣಿ ಎಂದು ಜನ ದೂರವಿಡುವಾಗ. ಈ ಗ್ರಾಮಸ್ಥರು ದೇವತಾ ಸ್ವರೂಪಿಯಾಗಿ ನೋಡುತ್ತಿರೋದು ನಿಜಕ್ಕೂ ಅಚ್ಚರಿ.

 

 

       ಭರ್ತಿಯಾದ ನ್ಯಾಮನಹಳ್ಳಿ ಕೆರೆ
ಅಕ್ಟೋಬರ್.23
ಪಾಂಡವಪುರ: ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಭರ್ತಿಯಾದ ನ್ಯಾಮನಹಳ್ಳಿ ಕೆರೆಗೆ ಸಂಸದ ಸಿ.ಎಸ್.ಪುಟ್ಟರಾಜು ಹಾಗೂ ಗ್ರಾಮಸ್ಥರು ಕೆರೆಗೆ ಬಾಗಿನ ಅರ್ಪಿಸಿದರು.
ಬಳಿಕ ಮಾತನಾಡಿದ ಅವರು, ಸತತ ಬರಗಾಲದಿಂದ ನೀರಿಲ್ಲದೆ ಬರಿದಾಗಿದ್ದ ನ್ಯಾಮನಹಳ್ಳಿ ಕೆರೆಯೂ ಕಳೆದ ಹಲವು ದಿನಗಳಿಂದ ಸುರಿದ ಮಳೆಯಿಂದ ಇದೀಗ ಭರ್ತಿಯಾಗಿದೆ. ಆದ್ದರಿಂದ ಗ್ರಾಮಸ್ಥರ ಮುಖದಲ್ಲಿ ಸಂತಸ ಮನೆ ಮಾಡಿದ್ದು ಗ್ರಾಮಸ್ಥರೆಲ್ಲಾ ಸೇರಿ ಕೆರೆಗೆ ಬಾಗಿನ ಅರ್ಪಿಸಿದ್ದೇವೆ ಎಂದು ಹೇಳಿದರು.
ನ್ಯಾಮನಹಳ್ಳಿ ಕೆರೆಯೂ ಸುಮಾರು 80 ಎಕರೆ ಅಧಿಕ ವಿಸ್ತೀರ್ಣ ಹೊಂದಿದ್ದು, ಸುಮಾರು 100 ಎಕೆರೆಗೂ ಅಧಿಕ ಕೃಷಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಸುತ್ತಿದೆ, ಜತೆಗೆ ಕೆರೆಯಿಂದ ಹೋಗುವಂತಹ ನೀರು ಅಮತಿ ಗ್ರಾಮದ ಕೆರೆಗೂ ಸೇರುತ್ತದೆ. ಇದೀಗ ಕೆರೆಯೂ ಭರ್ತಿಯಾಗಿರುವು ದರಿಂದ ಕೆರೆ ಅಚ್ಚುಕಟ್ಟಿನ ಪ್ರದೇಶದ ರೈತರು ಕಷಿ ಚಟುವಟಿಕೆಗಳಿಗೆ ಅನುಕೂಲ ಮಾಡಿ ಕೊಟ್ಟಿದೆ ಎಂದರು.

 

 

 

     

 ಏಕಾಏಕಿ ನೀರುಗಂಟಿ ನೌಕರರ ವಜಾ

ಅಕ್ಟೋಬರ್.21

ಮಂಡ್ಯ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೀರುಗಂಟಿ ನೌಕರರನ್ನು ಏಕಾಏಕಿ ಕೆಲಸದಿಂದ ವಜಾ ಮಾಡಿರುವುದನ್ನು ಖಂಡಿಸಿ ತಾಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ಹರಳಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 20ವರ್ಷಗಳಿಂದ ಕೆಲಸ ಮಾಡುತ್ತಿದ್ದ ಇಬ್ಬರು ನೀರುಗಂಟಿ ನೌಕರರನ್ನು ವಜಾಗೊಳಿಸಿರುವುದನ್ನು ಖಂಡಿಸಿ ತಾಲೂಕು ಗ್ರಾ.ಪಂ.ನೌಕರರ ಸಂಘದ ಅಧ್ಯಕ್ಷ ಮೋದೂರು ನಾಗರಾಜು, ಜಿಲ್ಲಾ ಘಟಕದ ಉಪಾಧ್ಯಕ್ಷ ಎಂ.ಕೆ.ಕುಮಾರ್ ನೇತೃತ್ವದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಲು ಸಾಕಷ್ಟು ಸಕಾರಣಗಳಿದ್ದು ಅಂತಹ ನೌಕರರಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು. ನಂತರ ಕ್ರಮ ವಹಿಸಬೇಕು ಆದರೆ ಪಿಡಿಒ ರವಿ ಅವರು ಕಾನೂನನ್ನು ಪರಿಪಾಲಿಸದೆ ಏಕಾಏಕಿ ನೌಕರರನ್ನು ವಜಾ ಮಾಡುವ ಮೂಲಕ ನೌಕರರನ್ನು ಬೀದಿಗೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರು ದೂರಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಇಒ ಚಂದ್ರಮೌಳಿ ಅವರು ಪಿಡಿಒ ಸಮ್ಮುಖದಲ್ಲಿ ವಜಾ ಮಾಡಲಾಗಿರುವ ಇಬ್ಬರೂ ನೌಕರರನ್ನು ಮರುನೇಮಕ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.

 

Ads
;