ದೂರವಾಣಿ : 080-69999676
ಇಮೇಲ್ : Info@Vijayataranga.com


87  ಎಂಟು ಕಾಲುಗಳುಳ್ಳ ಕುರಿಮರಿ ಜನನ
 ಡಿಸೆಂಬರ್-28
ಮೈಸೂರು: ಕುರಿಯೊಂದು ಎಂಟು ಕಾಲುಗಳನ್ನೊಳಗೊಂಡ ಮರಿಗೆ ಜನ್ಮ ನೀಡಿರುವ ವಿಸ್ಮಯಕಾರಿ ಘಟನೆ ನಂಜನಗೂಡು ತಾಲೂಕಿನ ಎಂ.ಕೊಂಗಳ್ಳಿ ಗ್ರಾಮದಲ್ಲಿ ನಡೆದಿದ್ದು, ಆ ಮರಿಯನ್ನು ನೋಡಲು ಅಕ್ಕಪಕ್ಕದ ಊರಿನ ಗ್ರಾಮಸ್ಥರು ಮುಗಿಬಿದ್ದಿದ್ದಾರೆ.
ಗ್ರಾಮದ ಕುಳ್ಳಚಾರಿ ಎಂಬುವವರು ಸಾಕಿರುವ ಕುರಿಯೊಂದು ಎಂಟು ಕಾಲುಗಳುಳ್ಳ ಮರಿಗೆ ಜನ್ಮ ನೀಡಿದೆ. ಈ ಸುದ್ದಿ ತಿಳಿದು ಅದೇ ಊರಿನ ಗ್ರಾಮಸ್ಥರ ಜೊತೆಗೆ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ಬರುತ್ತಿದ್ದಾರೆ. ಆದರೆ ಎಂಟು ಕಾಲುಗಳಿರುವ ಮರಿ ಹುಟ್ಟಿರುವುದಕ್ಕೆ ಮೂಕವಿಸ್ಮಯವಾಗಿರುವ ಸಾರ್ವಜನಿಕರು ಘಟನೆ ಕುರಿತು ಅಪಶಕುನದ ಮಾತುಗಳಾನ್ನಾಡುತ್ತಿರುವುದು ಕೇಳಿ ಬಂದಿದೆ. ಇಂತಹ ವಿಚಿತ್ರವಾಗಿ ಹುಟ್ಟುವ ಜೀವಿಗಳು ಉಳಿಯುವುದು ಕೂಡ ಅನುಮಾನವೆಂಬ ಮಾತು ಸಹ ಕೇಳಿಬಂದಿದೆ.

 

 

858  ಬಸ್ ದರೋಡೆ : ಪೊಲೀಸರು ಸೇರಿ ಎಲ್ಲರೂ ಖುಲಾಸೆ!
 ಡಿಸೆಂಬರ್ 27
ಮೈಸೂರು: ಇಲವಾಲ ಬಳಿ ನಡೆದ ಬಸ್ ದರೋಡೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. 2.07 ಕೋಟಿ ರೂ.ಗಳನ್ನು ಪೊಲೀಸರು ದರೋಡೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಇದಾಗಿತ್ತು.
ಮೈಸೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆದಿತ್ತು. ಪೊಲೀಸ್ ಅಧಿಕಾರಿಗಳನ್ನು ಅಮಾನತಿನಲ್ಲಿಟ್ಟು ತನಿಖೆ ನಡೆಸಲಾಗಿತ್ತು.
ಪ್ರಕರಣದ ಆರೋಪಿಗಳಾದ ಸಬ್ ಇನ್ಸ್ಪೆಕ್ಟರ್ ಪಿ.ಜಗದೀಶ, ಹೆಡ್ ಕಾನ್ಸ್ಟೆಬಲ್ ಸತೀಶ, ಕಾನ್ಸ್ಟೆಬಲ್ ಗಳಾದ ಅಬ್ದುಲ್ ಲತೀಫ್, ಎನ್.ಎ. ಅಶೋಕ್, ರವಿ, ಬಿ.ಎನ್.ಮನೋಹರ್, ಐಜಿಪಿ ಗನ್ಮ್ಯಾನ್ ಪ್ರಕಾಶ್, ಪೊಲೀಸ್ ಮಾಹಿತಿದಾರರಾದ ಸಲೀಂ, ಷರೀಫ್ ಅವರನ್ನು ಖುಲಾಸೆಗೊಳಿಸಲಾಗಿದೆ.
ಘಟನೆಯ ಹಿನ್ನಲೆ : 2014ರ ಜನವರಿ 4ರ ಮುಂಜಾನೆ ಕೇರಳಕ್ಕೆ ತೆರಳುತ್ತಿದ್ದ ಕಲ್ಪಕಾ ಬಸ್ಸಿನಲ್ಲಿ 2.27 ಕೋಟಿ ಹವಾಲಾ ಹಣ ಇದೆ ಎಂದು ಮಾಹಿತಿ ಸಿಕ್ಕಿತ್ತು.
ಪೊಲೀಸರು ಇಲವಾಲಾ ಬಳಿ ಬಸ್ಸನ್ನು ತಡೆದು ತಪಾಸಣೆ ಮಾಡಿದ್ದರು. ಸಿಕ್ಕಿದ ಹಣವನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ, 2.27 ಕೋಟಿ ಹಣದಲ್ಲಿ 2.07 ಕೋಟಿಯನ್ನು ಪೊಲೀಸರು ದರೋಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಎಫ್ಐಆರ್ನಲ್ಲಿ 20 ಲಕ್ಷ ಹಣ ಮಾತ್ರ ಸಿಕ್ಕಿದೆ ಎಂದು ದಾಖಲಿಸಿದ್ದರು. ಬಸ್ಸಿನಲ್ಲಿದ್ದ ಸೈನುಲಬ್ಬೀನ್ ಹಣ ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು.

 

 

    12

 ‘ಸೆಕ್ಸ್ ವರ್ಕ್’ ಧಂದೆ ನಡೆಸುತ್ತಿದ್ದ, ನಟರ ಹೆಸರು ಬಯಲು

 ಡಿಸೆಂಬರ್ -22

 ಮೈಸೂರು: ಕನ್ನಡದ ಖ್ಯಾತ ನಟರಿಬ್ಬರ ಕಾಮಪುರಾಣವೀಗ ಹೊರಬಿದ್ದಿದೆ.ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದ ಯುವತಿ ಹೇಳಿದ ಆ ಇಬ್ಬರು ನಟರು ಯಾರುಗೊತ್ತಾ? ಯುವತಿ ಸ್ಯಾಂಡಲ್ವುಡ್ನ ಇಬ್ಬರು ಸ್ಟಾರ್ ನಟರ ಹೆಸರನ್ನು ಬಾಯಿಬಿಟ್ಟಿದ್ದಾಳೆ. ಸಾಧು ಕೋಕಿಲಾ, ಮಂಡ್ಯ ರಮೇಶ್ ಹೆಸರು ಬಾಯ್ಬಿದ್ದಾಳೆ. 'ಸಾಧು ಕೋಕಿಲಾ, ಮಂಡ್ಯ ರಮೇಶ್ ನನ್ನನ್ನು ಬಳಸಿಕೊಳ್ಳುತ್ತಿದ್ದರು ಎಂದು ಆಕೆ ಹೇಳಿದ್ದಾಳೆ.

 

 

11  ಜೀವಂತ ಬಾಂಬ್ ಪತ್ತೆ..! ತಪ್ಪಿತು ಭಾರಿ ಅನಾಹುತ
 ಡಿಸೆಂಬರ್-20
ಮೈಸೂರು: ಮೈಸೂರಿನ ಬಸ್ ನಿಲ್ದಾಣದ ಬಳಿ ಜೀವಂತ ಬಾಂಬ್ ಪತ್ತೆಯಾಗಿದೆ. ಮೈಸೂರಿನ ಗ್ರಾಮೀಣ ಬಸ್ ನಿಲ್ದಾಣದ ಬಳಿಯಲ್ಲಿ ಈ ಬಾಂಬ್ ಪತ್ತೆಯಾಗಿದೆ. ಜನನಿಬಿಡ ಪ್ರದೇಶವನ್ನು ಗುರಿಯಾಗಿಸಿಕೊಂಡು ಬಾಂಬ್ ಇರಿಸಲಾಗಿತ್ತು.
ಸಾಂಸ್ಕೃತಿಕ ನಗರಿಯಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿ ಈ ಕೃತ್ಯ ಎಸಗಲಾಗಿತ್ತು. ಆದರೆ ಈ ಯತ್ನ ವಿಫಲವಾಗಿದೆ. ಬಾಕ್ಸ್ ಒಂದರಲ್ಲಿ ಐಇಡಿಯನ್ನು ಇರಿಸಲಾಗಿತ್ತು. ಬಾಕ್ಸ್'ನಲ್ಲಿ 60 ಬ್ಯಾಟರಿ ಸೆಲ್'ಗಳು ಹಾಗೂ ವೈರ್ಗಳು ಪತ್ತೆಯಾಗಿವೆ.
ದುಷ್ಕರ್ಮಿಗಳು ಟೈಮರ್ ಅಳವಡಿಸದೇ ಬಿಟ್ಟು ಹೋಗಿದ್ದರು. ಆಟೋ ಚಾಲಕರ ಸಮಯಪ್ರಜ್ಞೆಯಿಂದ ಮೈಸೂರಿನಲ್ಲಿ ಸಂಭವಿಸುತ್ತಿದ್ದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

 

 

44   ಬಾಂಬ್ ಬೆದರಿಕೆ ಕರೆ: ಪೊಲೀಸರಿಂದ ಪರಿಶೀಲನೆ
 ಡಿಸೆಂಬರ್-20
ಮೈಸೂರು: ಇಂದು ಬೆಳಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ ಬಂದ ಬಾಂಬ್ ಬೆದರಿಕೆ ಕರೆಯಿಂದಾಗಿ ಇಡೀ ಮೈಸೂರು ಒಂದು ಕ್ಷಣ ಬೆಚ್ಚಿ ಬಿದ್ದಿದೆ.
ಇಂದು ಬೆಳ್ಳಂಬೆಳಗ್ಗೆ ಪೊಲೀಸ್ ಕಂಟ್ರೋಲ್ ರೂಮ್ ಬಂದ ಕರೆಯಲ್ಲಿ ವ್ಯಕ್ತಿಯೊಬ್ಬ ಮಾತನಾಡಿ ಗ್ರಾಂಮಾಂತರ ಬಸ್ ನಿಲ್ದಾಣದ ಮುಂಭಾಗದ ಪೀಪಲ್ ಪಾರ್ಕ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ಮಾಹಿತಿ ಕೊಟ್ಟಿದ್ದಾನೆ.
ತಕ್ಷಣ ಎಚ್ಚೆತ್ತ ಪೊಲೀಸರು ಶ್ವಾನದಳದ ಸಹಾಯದಿಂದ ಪರಿಶೀಲನೆ ನಡೆಸಿ ಕೆಲ ಸಂಶಯಾಸ್ಪದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪರಿಶೀಲನೆ ಮುಂದುವರಿದೆ.

 

78  ಬೆಂಗಳೂರಿನಿಂದ ಮೈಸೂರಿಗೆ ರಾತ್ರಿ ರೈಲು ಸಂಚಾರವಿಲ್ಲ
 ಡಿಸೆಂಬರ್-18
ಮೈಸೂರು : ಬೆಂಗಳೂರಿನಿಂದ ಮೈಸೂರಿನತ್ತ ಪ್ರಯಾಣಿಸುವವರಿಗೆ ವಾರದಲ್ಲಿ 4 ದಿನ ಸಂಜೆ 7ರ ನಂತರ ಪ್ರಯಾಣಿಸಲು ರೈಲು ಇರುವುದಿಲ್ಲ. ರಾತ್ರಿ 7 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲು ನಿಲ್ದಾಣದಿಂದ ಹೊರಡುವ ಪ್ಯಾಸೆಂಜರ್ ಕಡೆಯ ರೈಲು. ಇದು ತಪ್ಪಿದರೆ ಮಧ್ಯರಾತ್ರಿ 12ರವರೆಗೂ ರೈಲ್ವೆ ನಿಲ್ದಾಣದಲ್ಲೇ ಕಾಲ ಕಳೆಯಬೇಕು!
ಪ್ರತಿದಿನ ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ಇಂತಹದೊಂದು ಸುದ್ದಿ ಸಿಡಿಲು ಬಡಿದಂತಾಗಿದೆ. ಹೌದು! ಈ ರೀತಿಯ ಸೂಚನೆ ನೀಡುವ ಮೂಲಕ ನೈರುತ್ಯ ರೈಲ್ವೆ ಮೈಸೂರು-ಬೆಂಗಳೂರು ನಿತ್ಯ ಪ್ರಯಾಣಿಕರಿಗೆ ಶಾಕ್ ನೀಡಿದೆ.
ಮೈಸೂರು ಮಾರ್ಗವಾಗಿ ಸಂಚರಿಸುತ್ತಿದ್ದ ಬೆಂಗಳೂರು-ಕಣ್ಣೂರು, ಕಾರವಾರ ರೈಲು 2018ರ ಫೆ.10ರಿಂದ ಆರಂಭಿಸಿ ಪ್ರತಿ ಭಾನುವಾರದಿಂದ ಬುಧವಾರದವರೆಗೆ ಕುಣಿಗಲ್ ಮಾರ್ಗವಾಗಿ ಸಂಚರಿಸಲಿದೆ. ಇದರಿಂದ ಬೆಂಗಳೂರು-ಮೈಸೂರು ನಡುವೆ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಭಾರೀ ಅನಾನುಕೂಲವಾಗಲಿದೆ. ಈ ಎಕ್ಸ್ ಪ್ರೆಸ್ ರೈಲು ಉಳಿದ 3 ದಿನ ಈವರೆಗಿನಂತೆ ಮೈಸೂರು
ಮಾರ್ಗದಲ್ಲಿ ಸಂಚರಿಸಲಿದೆ.
ನಿತ್ಯ ರಾತ್ರಿ 8.30ಕ್ಕೆ ಬೆಂಗಳೂರಿನಿಂದ ಹೊರಡುತ್ತಿದ್ದ ಕಣ್ಣೂರು (ಕಾರವಾರ) ಎಕ್ಸ್ ಪ್ರೆಸ್ ರೈಲು ಫೆ.10ರ ನಂತರ ರಾತ್ರಿ 7.15ಕ್ಕೆ ಬೆಂಗಳೂರಿನಿಂದ ಹೊರಟು ಕುಣಿಗಲ್ ಮಾರ್ಗವಾಗಿ ಕಣ್ಣೂರು ಮತ್ತು ಕಾರವಾರದತ್ತ ತೆರಳಲಿದೆ. ಹಾಗಾಗಿ, ಮೈಸೂರು ಮಾರ್ಗದ ಪ್ರಯಾಣಿಕರಿಗೆ ಸಂಜೆ 7ರ ರೈಲು ತಪ್ಪಿದರೆ ರಾತ್ರಿ 12ಕ್ಕೆ ಹೊರಡುವ ಪ್ಯಾಸೆಂಜರ್ ರೈಲಿಗೇ ಕಾಯಬೇಕಾಗಿದೆ.
ಇದಕ್ಕೆ ಪ್ರಯಾಣಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪ್ರವಾಸಿ ತಾಣವಾಗಿರುವ ಮೈಸೂರಿಗೆ ಕಣ್ಣೂರು ಎಕ್ಸ್ ಪ್ರೆಸ್ ರೈಲಿನಲ್ಲಿ ಹೆಚ್ಚು ಜನ ಸಂಚರಿಸುತ್ತಾರೆ. ಈಗ ಏಕಾಏಕಿ ಮಾರ್ಗ ಬದಲಾವಣೆಯಿಂದ ಸಾಕಷ್ಟು ಸಮಸ್ಯೆ ಆಗಲಿದೆ. ಅಲ್ಲದೇ, ಮೈಸೂರು ಭಾಗದಿಂದ ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ, ಮಂಗಳೂರು, ಕಾರವಾರದತ್ತ ಈ ರೈಲಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೂ ಅನಾನುಕೂಲವಾಗಲಿದೆ. ಆದ್ದರಿಂದ ಕೂಡಲೇ ಇದಕ್ಕೆ ಪರ್ಯಾಯ ಸೇವೆ ಕಲ್ಪಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಬೆಂಗಳೂರು-ಮೈಸೂರು ನಡುವೆ ನಿತ್ಯವೂ ಅತಿ ಹೆಚ್ಚು ಅಂದರೆ 20ಕ್ಕೂ ಅಧಿಕ ರೈಲುಗಳು ಸಂಚರಿಸುತ್ತವೆ. ನಿತ್ಯ ಕನಿಷ್ಠ 20 ಸಾವಿರ ಜನ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಮಂಡ್ಯ,ರಾಮನಗರ, ಚನ್ನಪಟ್ಟಣ ಸುತ್ತಲ ಪ್ರದೇಶದಿಂದಲೇ 5-6 ಸಾವಿರ ಜನ ನಿತ್ಯವೂ ಬೆಂಗಳೂರಿಗೆ ಕೆಲಸಕ್ಕಾಗಿ ಹೋಗಿ ಬರುತ್ತಾರೆ. ಅವರಲ್ಲಿ ಬಹುತೇಕರು ರಾತ್ರಿ 8.30ರ ಕಣ್ಣೂರು ಎಸ್ ರೈಲನ್ನೇ ಅವಲಂಬಿಸಿದ್ದಾರೆ. ಅವರೆಲ್ಲರಿಗೂ ಕೆಲಸ ಮುಗಿಸಿ ವಾಪಸಾಗಲು ಸಮಸ್ಯೆಯಾಗಲಿದೆ.
ಇನ್ನೊಂದೆಡೆ, ಮಂಗಳೂರು, ಕಾರವಾರಕ್ಕೆ ಹೋಗುವ ಪ್ರಯಾಣಿಕರಿಗೆ ಬೆಂಗಳೂರಿನಿಂದ ಕುಣಿಗಲ್ ಮಾರ್ಗವಾಗಿ ಮಂಗಳೂರಿಗೆ ಸಂಚರಿಸುವುದರಿಂದ 80 ಕಿ.ಮೀ.ಗಳಷ್ಟು ಅಂತರ ಕಡಿಮೆ ಆಗಲಿದೆ. ಜತೆಗೆ ಪ್ರಯಾಣ ಅವಧಿಯಲ್ಲಿ 2 ತಾಸು ಉಳಿತಾಯವೂ ಆಗಲಿದೆ.
ದೂರದೂರಿನ ಪಯಾಣಿಕರ ದೃಷ್ಟಿಯಿಂದ ಈ ಮಾರ್ಗ ಬದಲಾವಣೆ ಒಳ್ಳೆಯದೆ. ಇದನ್ನು ವಾರದಲ್ಲಿ 4 ದಿನಕ್ಕೆ ಸೀಮಿತಗೊಳಿಸದೆ, ವಾರದ ಏಳೂ ದಿನಗಳಿಗೆ ವಿಸ್ತರಿಸಬೇಕು. ಪರ್ಯಾಯವಾಗಿ ಮೈಸೂರಿಗೆ ರಾತ್ರಿ 8 ಅಥವಾ 8.30ರ ವೇಳೆ ಹೆಚ್ಚುವರಿ ರೈಲು ಸೇವೆ ಆರಂಭಿಸಬೇಕು. ಇದರಿಂದ ಸಾವಿರಾರು ಜನರಿಗೆ ಅನುಕೂಲ ಆಗಲಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ

 

 

           ಸರಕಾರಿ ಜಮೀನಿನಲ್ಲಿ ಅಧಿಕೃತ ಮನೆ ನಿರ್ಮಾಣ
ಡಿಸೆಂಬರ್.15
ಮೈಸೂರು: ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಲು ಗ್ರಾಮೀಣ ಪ್ರದೇಶಗಳಲ್ಲಿ ಕಲಂ 94ಸಿ, ನಗರ ಪ್ರದೇಶಗಳಲ್ಲಿ 94 ಸಿಸಿ ಅಡಿ ಅರ್ಜಿ ಸಲ್ಲಿಸಲು ಫೆ.4ರ ವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇಲ್ಲಿ ಗುರುವಾರ ತಿಳಿಸಿದರು.
ಬಗರ್ಹುಕುಂ ಸಾಗುವಳಿದಾರರು ಸಲ್ಲಿಸಿರುವ ಅಕ್ರಮ-ಸಕ್ರಮಕ್ಕೆ ಸಂಬಂಧಿಸಿದ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅಧಿಕಾರಿಗಳು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಸರ್ಕಾರ ಹೊರಡಿಸುವ ಆದೇಶಗಳನ್ನು ಅನುಷ್ಠಾನಗೊಳಿಸಲು ವಿಳಂಬ ಮಾಡುತ್ತಿದ್ದಾರೆ. ಉಪವಿಭಾಗಾಧಿಕಾರಿಗಳು ಇನ್ನೂ ಸರಿಯಾಗಿ ಕಣ್ಣು ಬಿಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಬಗರ್ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿ ಹಲವು ವರ್ಷಗಳೇ ಕಳೆದಿವೆ. ಆದರೆ, ಇದುವರೆಗೆ ಇತ್ಯರ್ಥವಾಗದೆ ಉಳಿದುಕೊಂಡಿವೆ. ನಾವೆಲ್ಲಾ ಏನು ಕೆಲಸ ಮಾಡುತ್ತಿದ್ದೇವೆ? ಏನು ಆಡಳಿತ ನಡೆಸುತ್ತಿದ್ದೇವೆ? ನಮಗೆಲ್ಲಾ ನಾಚಿಕೆಯಾಗಬೇಕು. ದಯವಿಟ್ಟು
ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ. ಇಲ್ಲದಿದ್ದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ’ ಎಂದರು.
ರಾಜ್ಯದಲ್ಲಿ ಸಾವಿರ ಹೊಸ ಗ್ರಾಮಗಳನ್ನು ರಚಿಸಲಾಗುತ್ತಿದೆ. ಪೋಡಿ ಮುಕ್ತ ಗ್ರಾಮ ಅಭಿಯಾನ ಪ್ರಗತಿಯಲ್ಲಿದೆ. ಅಕ್ರಮ-ಸಕ್ರಮದ ಮೂಲಕ ಮಂಜೂರಾಗಿರುವ ಸರ್ಕಾರಿ ಜಮೀನನ್ನೂ ಪೋಡಿ ಮಾಡಬೇಕು. ಸಿಬ್ಬಂದಿ ಕೊರತೆ ನೀಗಿಸಲು ಸದ್ಯದಲ್ಲೇ ಸಾವಿರ ಸರ್ವೆಯರ್ಗಳನ್ನು ನೇಮಕ ಮಾಡಿ ತರಬೇತಿ ನೀಡಲಾಗುವುದು. ಗ್ರಾಮ ಲೆಕ್ಕಿಗರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಹೊಸದಾಗಿ ರಚಿಸಿರುವ ತಾಲ್ಲೂಕುಗಳು ಮುಂದಿನ ತಿಂಗಳಿನಿಂದ ಜಾರಿಗೆ ಬರಲಿವೆ ಎಂದು ಹೇಳಿದರು.

 

      123 

 ಹೆಂಡತಿಯನ್ನು ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ

 ಡಿಸೆಂಬರ್.12

 ಮೈಸೂರು: ಪತ್ನಿಯ ಶೀಲ ಶಂಕಿಸಿ ಕೊಲೆಗೈದಿದ್ದ ಪತಿಗೆ ಮೈಸೂರು ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಎಚ್ಡಿ ಕೋಟೆ ತಾಲೂಕಿನ ಬೀರಂಬಳ್ಳಿ ಗ್ರಾಮದ ವಾಸಿ ಪುಟ್ಟಸ್ವಾಮಿ ಶಿಕ್ಷೆಗೆ ಒಳಗಾದ ವ್ಯಕ್ತಿ. ಪುಟ್ಟಸ್ವಾಮಿ ಹಾಗೂ ನಾಗಮ್ಮ ವಿವಾಹವಾಗಿ 32 ವರ್ಷವಾಗಿತ್ತು. ಪತ್ನಿಯ ಶೀಲ ಶಂಕಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಈತ 2013ರ ಡಿ.7ರಂದು ಮದ್ಯಸೇವಿಸಿ ಬಂದು ಪತ್ನಿ ಜತೆ ಜಗಳವಾಡಿದ್ದಾನೆ.ಜಗಳ ವಿಕೋಪಕ್ಕೆ ತಿರುಗಿ ಪುಟ್ಟಸ್ವಾಮಿ ನಾಗಮ್ಮನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದನು. ತಕ್ಷಣವೇ ಆಕೆಯನ್ನು ಕೆಆರ್ ಆಸ್ಪತ್ರೆಗೆ ದಾಖಲಿಸಿದರೂ ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು.ಈ ಬಗ್ಗೆ ಎಚ್ಡಿ ಕೋಟೆ ಠಾಣೆ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮೈಸೂರು 5ನೆ ಅಧಿಕ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜೋಷಿಯವರು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 8 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ನಾಗಪ್ಪ ವಾದ ಮಂಡಿಸಿದ್ದರು.

 

 

                                        

ಉಮೇಶ್ ಕತ್ತಿ ನನ್ನ ಬೆಸ್ಟ್ ಫ್ರೆಂಡ್ : ಸಿಎಂ

ಡಿಸೆಂಬರ್-9 

ಮೈಸೂರು: ನಾನು ಮತ್ತು ಉಮೇಶ್ಕತ್ತಿ ಒಳ್ಳೆಯ ಸ್ನೇಹಿತರು. ಹಾಗಾಗಿ ಪ್ರತಿ ದಿನ ಸಂಪರ್ಕದಲ್ಲಿದ್ದೇವೆ. ಆದರೆ, ಇದುವರೆಗೆ ರಾಜಕೀಯ ವಿಷಯ ಚರ್ಚಿಸಿಲ್ಲ ಎಂದು ಸಿಎಂ ಸಿದ್ದ ರಾಮಯ್ಯ ಹೇಳಿದರು. ನಗರದ ಸಿಎಂ ನಿವಾಸದಲ್ಲಿ ಬಿಜೆಪಿ ಶಾಸಕ ಉಮೇಶ್ಕತ್ತಿ ಕಾಂಗ್ರೆಸ್ಗೆ ಸೇರುತ್ತಾರೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿದಿನ ದೂರವಾಣಿಯಲ್ಲಿ ಸಂಪರ್ಕದಲ್ಲಿರುತ್ತೇವೆ. ಹಾಗೆಂದ ಮಾತ್ರಕ್ಕೆ ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸುತ್ತೇವೆ ಎಂದೇನಿಲ್ಲ ಎಂದರು.
ಪತ್ರಕರ್ತ ರವಿಬೆಳಗೆರೆ ಬಂಧನ ಪ್ರಕರಣದಲ್ಲಿ ಪೊಲೀಸರು ಕಾನೂನು ರೀತಿ ಕ್ರಮ ತೆಗೆದುಕೊಳ್ಳುತ್ತಾರೆ. ಅವರು ಏಕೆ ಬಂಧಿಸಿದ್ದಾರೆ ಎಂಬ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಅಧಿಕಾರಿಗಳಿಂದ ಪೂರ್ಣ ಮಾಹಿತಿ ಪಡೆದು ನಂತರ ವಿವರ ನೀಡುತ್ತೇನೆ ಎಂದು ತಿಳಿಸಿದರು. ಪೊಲೀಸರು ಕಾನೂನು ರೀತಿ ಕೆಲಸ ಮಾಡುತ್ತಿದ್ದಾರೆ. ಈ ಪ್ರಕರಣದ ಸಂಬಂಧ ಯಾರೊಂದಿಗೂ ನಾನು ಚರ್ಚಿಸಿಲ್ಲ. ಯಾವುದೇ ಕಾರಣಕ್ಕೆ ಬಂಧಿಸಿದ್ದರೂ ಪೊಲೀಸರು ಕಾನೂನು ಪ್ರಕಾರ ಅವರ ಕೆಲಸ ಮಾಡುತ್ತಾರೆ ಎಂದು ಹೇಳಿದರು.

 

     456 

ಆಟೋ - ಬೈಕ್ ಮುಖಾಮುಖಿ ಡಿಕ್ಕಿ : ಅಪ್ಪ-ಮಗ ಸ್ಥಳದಲ್ಲೇ ಸಾವು

 ಡಿಸೆಂಬರ್-9

ಮೈಸೂರು: ಬನ್ನೂರು ಮುಖ್ಯರಸ್ತೆಯಲ್ಲಿ ಆಪೇ ಆಟೋ ಮತ್ತು ದ್ವಿಚಕ್ರವಾಹನ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರವಾಹನದಲ್ಲಿ ಸವಾರಿ ಮಾಡುತ್ತಿದ್ದ ತಂದೆ ಮಗ ಇಬ್ಬರೂ ದಾರುಣವಾಗಿ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಮೃತರನ್ನು ಬನ್ನೂರಿನ ಬಾಣಸವಾಡಿಯ ನಿವಾಸಿಗಳಾದ ಮಹೇಂದ್ರ ಮತ್ತು ಆತನ ತಂದೆ ಸಿದ್ಧಶೆಟ್ಟಿ ಎಂದು ಹೇಳಲಾಗಿದೆ. ಮಹೇಂದ್ರ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಸಿದ್ಧಶೆಟ್ಟಿ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಬನ್ನೂರು ರಸ್ತೆಯಲ್ಲಿ ಬರುತ್ತಿರುವಾಗ ಆಪೇ ಆಟೋ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

    123 

ವರುಣಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಹೊಣೆ ನನ್ನದು: ಸದಾನಂದ ಗೌಡ

 ಡಿಸೆಂಬರ್-9

ಮೈಸೂರು: ಮುಂಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುವುದು ಖಚಿತ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಿಂದು ವರುಣಾ ಕ್ಷೇತ್ರದ ಪ್ರವಾಸ ಮಾಡಿಬಂದೆ. ಅಲ್ಲಿನ ಕಾರ್ಯಕರ್ತರು ಹಾಗೂ ಪರಿಸ್ಥಿತಿ ಅವಲೋಕಿಸಿದಾಗ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ನಿಲ್ಲೋದು ಖಚಿತವಾಗಿದೆ ಎಂದರು. ಮುಂದಿನ ಚುನಾವಣೆಗಾಗಿ ವರುಣಾ ಕ್ಷೇತ್ರದ ಉಸ್ತುವಾರಿ ನನ್ನ ಹೆಗಲಿಗೆ ಬಿದ್ದಿದೆ. ಇದನ್ನ ಸವಾಲಾಗಿ ಸ್ವೀಕರಿಸಿರುವ ನಾನು ಪ್ರತೀ ಬೂತ್ ನಲ್ಲೂ ಬಿಜೆಪಿಗೆ ಹೆಚ್ಚು ಮತಗಳಿಸಕೊಡಲು ಶ್ರಮಿಸುವೆ. ಕರ್ನಾಟಕ ರಾಜ್ಯವನ್ನು ನಂ.1 ಭ್ರಷ್ಟಾಚಾರ ರಾಜ್ಯ ಮಾಡಿರುವ ಮುಖ್ಯಮಂತ್ರಿಯನ್ನು ಕೆಳಗಿಳಿಸಿ ಮತ್ತೆ ಒಳ್ಳೆಯ ಆಡಳಿತ ಕೊಡೋದು ಬಿಜೆಪಿಯ ಗುರಿ. ಆ ಕೆಲಸವನ್ನು ಸಿಎಂ ಸ್ವಕ್ಷೇತ್ರ ವರುಣಾ ಕ್ಷೇತ್ರದಿಂದಲೇ ಆರಂಭಿಸಿದ್ದೇವೆ. ಸಿದ್ದರಾಮಯ್ಯ ಹೆಗಲ ಮೇಲೆ ಟವಲ್ ಏರಿಸಿ ರಾಜ್ಯ ಅಭಿವೃದ್ಧಿಯತ್ತ ಸಾಗುತ್ತಿದೆ ಅಂತಾ ಏನೇ ಹೇಳಿದರೂ ಅಂಕಿ ಅಂಶ ಬೇರೆನೆ ಹೇಳುತ್ತಿದೆ ಎಂದು ಹೇಳಿದರು.ಹುಣಸೂರಿನಲ್ಲಿ ಹನುಮ ಜಯಂತಿಗೆ ತಡೆ ಹಾಕಿದ್ದು ಸರಿಯಲ್ಲ. ಸಿದ್ದರಾಮಯ್ಯ ಸಾಧನೆ ಕಡಿಮೆಯಾಗಿದ್ದು, ತಾವು ಏನು ಮಾಡಿದರೂ ಏನು ಆಗುತ್ತಿಲ್ಲ ಅನ್ನೋದು ಅರ್ಥವಾಗಿದೆ. ದಿನೇ ದಿನೇ ಅವರ ಸಂಖ್ಯಾಬಲ ಮತ್ತು ಸಾಮರ್ಥ್ಯ ಕಡಿಮೆಯಾಗುತ್ತಿದೆ. ಇದರಿಂದ ಹತಾಶರಾಗಿರುವ ಸಿಎಂ ರಾಜ್ಯದಲ್ಲಿ ಅಶಾಂತಿ ಉಂಟು ಮಾಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಿ ಗಲಭೆ ಸೃಷ್ಟಿಸಿ ಅಧಿಕಾರಕ್ಕೆ ಬರೋದು ಅವರ ಪ್ಲಾನ್. ಆದರೆ ಜನ ಇದೆಲ್ಲವನ್ನು ಗಮನಿಸುತ್ತಿದ್ದಾರೆ. ಹುಣಸೂರಿನ ಘಟನೆ ಕಾಂಗ್ರೆಸ್ ಪ್ರೇರಿತ ಎಂದರು.

 

45  ಶಾಲಾ ವಾಹನ ಪಲ್ಟಿಯಾಗಿ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ
 ಡಿಸೆಂಬರ್-9
ಮೈಸೂರು : ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿದ ಪಲ್ಟಿ ಹೊಡೆದ ಪರಿಣಾಮ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಟಿ. ನರಸಿಪುರ ತಾಲ್ಲೂಕಿನ ನಂಜಾಪುರ ಗ್ರಾಮದ ಬಳಿ ನಡೆದಿದೆ.
ಗಾಯಾಳುಗಳು ಬನ್ನೂರಿನ ಸಾರ್ವಜನಿಕ ಆಸ್ಪತ್ರೆ ಮತ್ತು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ. ಮೈಸೂರಿನ ಗೀತಾ ಶಿಶು ಸಂಸ್ಥೆ ಕಾಲೇಜಿನಿಂದ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಕ್ಕೆಂದು ಆಗಮಿಸಿದ ವಿದ್ಯಾರ್ಥಿಗಳು ಹೆಗ್ಗೂರಿನ ಶ್ರೀ ಮತ್ತಿತಾಳೇಶ್ವರ ಸ್ವಾಮಿ ದೇವಾಲಯದಲ್ಲಿ ಶ್ರಮದಾನ ಮಾಡಿ ಶಿಬಿರ ಸ್ಥಳಕ್ಕೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
ಬನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

 

 

45  ಪ್ರೇಮಾ ವೈಫಲ್ಯದಿಂದ ಆತ್ಮಹತ್ಯೆಗೆ ಶರಣಾದ ಯುವತಿ
 ಡಿಸೆಂಬರ್-8
ಮೈಸೂರು : ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಶಂಕರಾಪುರ ಲಿಂಗಾರಾಜು ಎಂಬುವರ ಪುತ್ರಿ ಸುನಂದಾ (25) ಆತ್ಮಹತ್ಯೆಗೆ ಶರಣಾಗಿರುವ ಯುವತಿ. ಸುನಂದಾ ಮೈಸೂರಿನ ಹೆಬ್ಬಾಳಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗುತ್ತಿದೆ.
ಪ್ರೇಮಾ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

 

 

124     ಅನಂತ್ ಕುಮಾರ್ ಹೆಗಡೆ ವಿರುದ್ಧ ಸಿಎಂ ಎಫ್ ಐಆರ್
ಡಿಸೆಂಬರ್-8
ಮೈಸೂರು: ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಕಿತ್ತೂರ್ ನಲ್ಲಿ ಬಿಜೆಪಿಯ ಪರಿವರ್ತನ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದಕ್ಕಾಗಿ ಅವರ ವಿರುದ್ಧ ಮೈಸೂರು ನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮೈಸೂರು ಜಿಲ್ಲೆಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಸವರಾಜ ನಾಯ್ಕ ರಿಂದ ಸಲ್ಲಿಸಲಾದ ಅರ್ಜಿಯೊಂದನ್ನು ಅನುಸರಿಸಿ ಪೋಲೀಸರು ಕ್ರಮ ತೆಗೆದುಕೊಳ್ಳುವಂತೆ ನ್ಯಾಯಾಲಯ ಸೂಚನೆ ನೀಡಿದೆ. ನವೆಂಬರ್ 25 ರಂದು ದೇವರಾಜ ಪೊಲೀಸ್ ಠಾಣೆಯಲ್ಲಿ ನಾಯ್ಕ, ಹೆಗಡೆ ವಿರುದ್ಧ ದೂರು ಸಲ್ಲಿಸಿದ್ದರು. ಪೊಲೀಸ್ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಪಾಳ್ಯ ಸುರೇಶ್ ನೇತೃತ್ವದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾನೂನು ಮತ್ತು ಮಾನವ ಹಕ್ಕುಗಳ ವಕೀಲರ ಸಮಿತಿಯು ನವೆಂಬರ್ 30 ರಂದು ನಾಲ್ಕನೇ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದೆ.
ಫಿರ್ಯಾದಿ ಪರವಾಗಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ದೂರುಗಳ ಆಧಾರದ ಮೇಲೆ ಮತ್ತಷ್ಟು ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡಿದರು. ಅಂತೆಯೇ, ಪೊಲೀಸರು ಐಪಿಸಿ ಸೆಕ್ಷನ್ 153 (ಎ) ಮತ್ತು 504 ಅಡಿಯಲ್ಲಿ ಸಂಸದರ ವಿರುದ್ಧ ಎಫ್ ಐಆರ್ (ಸಂಖ್ಯೆ-230/2017) ದಾಖಲಿಸಿದ್ದಾರೆ.

 

 

44  ಜೈಲಿನಿಂದಲೇ ಉದ್ಯಮಿಗೆ ಅವಾಜ್ ಹಾಕಿದ ಖೈದಿ!
 ಡಿಸೆಂಬರ್-8
ಮೈಸೂರು : ಕೇಂದ್ರ ಕಾರಗೃಹದಲ್ಲಿರುವ ಕೈದಿಯೊಬ್ಬ ಉದ್ಯಮಿಗೆ ಮೊಬೈಲ್ ಕರೆ ಮಾಡಿ 20 ಲಕ್ಷ ರೂ. ಗೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.
ಕೈದಿ ಬಸವರಾಜ್ ಎಂಬುವರು ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಮಂಡ್ಯ ಮೂಲದ ಉದ್ಯಮಿ ಡಿವೈಎಸ್ ಪಿ ಚಂದ್ರಶೇಖರ್ ಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯ ಪೊಲೀಸರು ಮತ್ತು ಮೈಸೂರಿನ ಸಿಸಿಬಿ ತಂಡ ಜಂಟಿಯಾಗಿ ಜೈಲಿನ ಪರಿಶೀಲನೆ ನಡೆಸಿದರು.
ಖೈದಿ ಬಸವರಾಜ್ ಜೈಲಿನಲ್ಲಿ ಗಾಂಜಾ, ಮೊಬೈಲ್ ಫೋನ್ ಹಾಗೂ ಹಲವು ಸಿಮ್ ಕಾರ್ಡ್ ಗಳು ದೊರೆತಿದೆ. ಸಂಬಂಧಿಕರು ಹಾಗೂ ಸ್ನೇಹಿತರು ಭೇಟಿ ಮಾಡಿ ಆಹಾರ ನೀಡುವಾಗ ಮೊಬೈಲ್ ಕೊಟ್ಟಿದ್ದಾರೆಂಬ ಅಂಶ ಬೆಳಕಿಗೆ ಬಂದಿದೆ.

 

                                    

ರೈತರ ನಿದ್ದೆಗೆಡಿಸಿದ ಚಿರತೆ ಹಾವಳಿ!

ಡಿಸೆಂಬರ್-7 

ಮೈಸೂರು: ಜಿಲ್ಲೆಯ ಕಾಡಂಚಿನ ಗ್ರಾಮದ ರೈತರು ಮೊದಲೇ ಕಾಡಾನೆಗಳಿಂದ ಬೇಸತ್ತು ಹೋಗಿದ್ದಾರೆ. ಆದರೆ, ಇದೀಗ ಚಿರತೆ ಹಾವಳಿಯಿಂದಾಗಿ ಜನರ ನಿದ್ದೆಗೆಡಿಸಿದೆ.
ಜಿಲ್ಲೆಯಲ್ಲಿ ಒಂದಾದ ಮೇಲೊಂದು ಚಿರತೆಗಳು ಪ್ರತ್ಯಕ್ಷವಾಗಿ ಜನರನ್ನು ಆತಂಕಕ್ಕೀಡಾಗುವಂತೆ ಮಾಡಿದೆ. ಇದೀಗ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಮರೂರುಕಾವಲು ಗ್ರಾಮದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ. ಬಂಡಿಪುರ ಕಾಡಂಚಿನ ಜನರ ನೆಮ್ಮದಿ ಕಸಿದ ಕಾಡುಪ್ರಾಣಿಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಬಂಡೀಪುರ ಉದ್ಯಾನ ಸೇರಿದಂತೆ ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಇದೀಗ ಕಾಡಾನೆಗಳಿಗಿಂತ ಚಿರತೆಗಳದ್ದೇ ಹಾವಳಿ ಹೆಚ್ಚಾಗಿದೆ. ನೇರವಾಗಿ ಕೊಟ್ಟಿಗೆಗೆ ನುಗ್ಗಿ ಜಾನುವಾರು, ಕುರಿ, ಮೇಕೆಗಳಲ್ಲದೆ ಸಾಕು ನಾಯಿಗಳ ಮೇಲೆಯೂ ದಾಳಿ ಮಾಡಿ ತಿಂದು ಹಾಕುತ್ತಿವೆ.
ಕಳೆದ ಆರು ತಿಂಗಳಿಂದ ಇಲ್ಲಿ ವಾಸ್ತವ್ಯ ಹೂಡಿದ್ದ ಚಿರತೆ ಆಗಾಗ್ಗೆ ಸಾಕು ನಾಯಿ ಕೋಳಿ ಹಾಗೂ ಹಸುಗಳ ಕರುಗಳನ್ನು ಹೊತ್ತೊಯ್ದು ತಿಂದು ಹಾಕುತ್ತಾ ಬಂದಿತ್ತು. ಅದನ್ನು ಸೆರೆಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದರು. ಆದರೆ, ಇದೀಗ ಮತ್ತೆ ಚಿರತೆ ಪ್ರತ್ಯಕ್ಷವಾಗಿರುವುದು ಈ ವ್ಯಾಪ್ತಿಯ ಜನ ಆತಂಕಕ್ಕೀಡಾಗುವಂತೆ ಮಾಡಿದೆ. ಗ್ರಾಮದ ಮೂಡ್ಲೇಗೌಡರ ತೋಟದ ಮನೆಗೆ ನುಗ್ಗಿದ ಚಿರತೆ ಅವರ ಕೊಟ್ಟಿಗೆಯಲ್ಲಿದ್ದ 5 ನಾಟಿ ಕೋಳಿಗಳನ್ನು ತಿಂದು ಹಾಕಿದೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಇದೇ ಕೊಟ್ಟಿಗೆಯಲ್ಲಿದ್ದ ಕುರಿಗಳನ್ನು ಕೊಂದು ತಿಂದು ಹಾಕಿ ಹೋಗಿತ್ತು.

 

 

22     ಎಂ.ಕೆ.ಸೋಮಶೇಖರ್ಗೆ ಜಾಮೀನುರಹಿತ ಬಂಧನದ ವಾರೆಂಟ್
 ಡಿಸೆಂಬರ್-7
ಮೈಸೂರು: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಶಾಸಕ ಎಂ.ಕೆ.ಸೋಮಶೇಖರ್ ವಿರುದ್ಧ ಮೈಸೂರು ನ್ಯಾಯಾಲಯ ಜಾಮೀನುರಹಿತ ಬಂಧನದ ವಾರೆಂಟ್ ಹೊರಡಿಸಿದೆ. ಶಾಸಕ ಸೋಮಶೇಖರ್ ಸುಳ್ಳು ಮಾಹಿತಿ ನೀಡಿ ಗ್ಯಾಸ್ ಏಜೆನ್ಸಿ ಪಡೆದಿದ್ದಾರೆಂದು ಮಾಜಿ ಕಾರ್ಪೊರೇಟರ್ ಎಂ.ಸಿ.ಚಿಕ್ಕಣ್ಣ 2008ರ ಮೇನಲ್ಲಿ ಪತ್ರಿಕಾ ಹೇಳಿಕೆ ನೀಡಿದ್ದರು.
ಇದರ ವಿರುದ್ದ ಸೋಮಶೇಖರ್ ಸಹ ಪ್ರತಿ ಹೇಳಿಕೆ ನೀಡಿದ್ದರು. ಇದರಿಂದ ಬೇಸರಗೊಂಡ ಚಿಕ್ಕಣ್ಣ ಅವರು ಸೋಮಶೇಖರ್ ವಿರುದ್ಧ ಮೈಸೂರಿನ ಜೆಎಂಎಫ್ಸಿ 3ನೇ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಇದೇ ಡಿಸೆಂಬರ್ 4ರಂದು ಸೋಮಶೇಖರ್ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ ಅವರು ಹಾಜರಾಗಲಿಲ್ಲ. ಆದ್ದರಿಂದ ನ್ಯಾಯಾಲಯ ಜಾಮೀನುರಹಿತ ಬಂಧನದ ವಾರೆಂಟ್ ಹೊರಡಿಸಿದೆ.

 

 

     45 

ಕುಕ್ಕರಹಳ್ಳಿ ಕೆರೆಯಲ್ಲಿ ಅಸ್ವಸ್ಥಗೊಂಡ ಪಕ್ಷಿಗಳು, ಹಕ್ಕಿಜ್ವರ ಶಂಕೆ

ಡಿಸೆಂಬರ್-7

ಮೈಸೂರು: ಇತಿಹಾಸ ಪ್ರಸಿದ್ಧ ನಗರದ ಕುಕ್ಕರಹಳ್ಳಿ ಕೆರೆಗೆ ದೇಶ-ವಿದೇಶಗಳಿಂದ ವಿವಿಧ ಜಾತಿಯ ಪಕ್ಷಿಗಳು ವಲಸೆ ಬರುತ್ತವೆ. ಆದರೆ, ಬೆಳ್ಳಂಬೆಳಗ್ಗೆ ಇದ್ದಕ್ಕಿದ್ದಂತೆ ಎರಡು ಪೆಲಿಕಾನ್ ಪಕ್ಷಿಗಳು ಅಸ್ವಸ್ಥಗೊಂಡಿದ್ದು, ಆತಂಕ ಸೃಷ್ಟಿಸಿದೆ. ಪ್ರತಿದಿನ ಕುಕ್ಕರಹಳ್ಳಿ ಕೆರೆಗೆ ನೂರಾರು ಮಂದಿ ವಾಯು ವಿಹಾರಕ್ಕೆ ಆಗಮಿಸುತ್ತಾರೆ. ಬೆಳಗ್ಗೆ ಎರಡು ಪೆಲಿಕಾನ್ ಪಕ್ಷಿಗಳು ಅಸ್ವಸ್ಥಗೊಂಡಿದ್ದವು. ಕೆರೆಯ ಸಮೀಪ ಸುಸ್ತಾಗಿ ಬಿದ್ದಿದ್ದವು. ತಕ್ಷಣ ವಾಯು ವಿಹಾರಿಗಳು ಪೀಪಲ್ಸ್ ಫಾರ್ ಅನಿಮಲ್ ಸಂಘಟನೆಗೆ ವಿಷಯ ತಿಳಿಸಿದ್ದಾರೆ. ಸಂಘಟನೆ ಸದಸ್ಯರು ಧಾವಿಸಿ ಎರಡು ಪಕ್ಷಿಗಳಿಗೂ ಪ್ರಥಮ ಚಿಕಿತ್ಸೆ ನೀಡಿದರು. ಅದರಲ್ಲಿ ಒಂದು ಪಕ್ಷಿ ಚೇತರಿಸಿಕೊಂಡಿದ್ದರಿಂದ ಮತ್ತೆ ಕೆರೆಗೆ ಬಿಟ್ಟಿದ್ದರು. ಆದರೆ, ಹಕ್ಕಿಜ್ವರ ಬಂದಿರಬಹುದೆಂಬ ಶಂಕೆಯಿಂದ ಪುನಃ ಬೋಟ್ ಸಹಾಯದಿಂದ ಕೆರೆಗೆ ಹೋಗಿ ಪಕ್ಷಿಯನ್ನು ಹೊರತಂದು ಎರಡಕ್ಕೂ ಚುಚ್ಚುಮದ್ದು ನೀಡಿದ್ದಾರೆ. ರಕ್ತ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಹಕ್ಕಿಗಳು ಅಸ್ವಸ್ಥಗೊಳ್ಳಲು ನಿಖರ ಕಾರಣ ಗೊತ್ತಾಗಲಿದೆ.

 

 

 

   45 

ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳ ಮಾಲೀಕರಿಗೆ ನೋಟಿಸ್

 ಡಿಸೆಂಬರ್-6

 ಮೈಸೂರು : ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಿರುವ ಕಟ್ಟಡಗಳ ತೆರವಿಗೆ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹಿನಕಲ್ ಗ್ರಾಮ ಸರ್ವೆ ನ> 200/3ಡಿ ಯಲ್ಲಿ ಬೃಹತ್ ಕಟ್ಟಡ ನಿರ್ಮಿಸಲಾಗಿದೆ. 2009 ರ ಜೂನ್ ನಲ್ಲಿ ನಕ್ಷೆ ಅನುಮೋದನೆ ಪಡೆದಿದ್ದರೂ ಅಂಗೀಕೃತ ನಕ್ಷೆ ಕಟ್ಟಡ ನಿರ್ಮಿಸಿಲ್ಲ. ಈ ಹಿನ್ನೆಲೆಯಲ್ಲಿ 2010 ರಲ್ಲಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಿಯಮಗಳನ್ನು ಗಾಳಿಗೆ ತೂರಿರುವುದನ್ನು ಖಚಿತಪಡಿಸಿದ್ದರು. ಇನ್ನು ಮಾಲೀಕರಿಗೆ ಕರ್ನಾಟಕ ನಗರ ಮತ್ತು ಗ್ರಾಮ ಯೋಜನೆ ಕಾಯಿದೆ ಉಲ್ಲಂಘಿಸಿರುವ ಕಾರಣ ಕೂಡಲೇ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವಂತೆ ಕರಡು ಪ್ರತಿ ಹೊರಡಿಸಲಾಗಿದೆ. ತೆರವುಗೊಳಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆಯನ್ನೂ ಪ್ರಾಧಿಕಾರ ನೀಡಿದೆ.

 

242   ಮೈಸೂರಿನಲ್ಲಿ ಇಬ್ಬರು ರೈತರು ಆತ್ಮಹತ್ಯೆ
 ಡಿಸೆಂಬರ್-6
 ಮೈಸೂರು: ಸಾಲಬಾಧೆಯಿಂದ ಮನನೊಂದು ಕ್ರಿಮಿನಾಶಕ ಸೇವಿಸಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ   ಕೆ.ಆರ್.ನಗರ ತಾಲೂಕಿನಲ್ಲಿ ನಡೆದಿದೆ.
 ಸಾಲಿಗ್ರಾಮ ಹೋಬಳಿಯ ಮುಂಡೂರು ಗ್ರಾಮದ ತಮ್ಮಣ್ಣೇಗೌಡರ ಪುತ್ರ ದಿನೇಶ್(26), ಹೊಸಅಗ್ರಹಾರ ಹೋಬಳಿಯ ಮಂಡಿಗನಹಳ್ಳಿ   ಗ್ರಾಮದ   ಚಲುವರಾಜು ಪುತ್ರ ಚನ್ನಕೇಶವ (26) ಆತ್ಮಹತ್ಯೆ ಮಾಡಿಕೊಂಡ ರೈತರು.
 ಸಾಲಿಗ್ರಾಮ ಹೋಬಳಿಯ ಮುಂಡೂರು ಗ್ರಾಮದ ತಮ್ಮಣ್ಣೇಗೌಡರ ಪುತ್ರ ದಿನೇಶ್ ತನ್ನ ಎರಡು ಎಕರೆ ಜಮೀನಿನಲ್ಲಿ ತಂಬಾಕು ಬೆಳೆಗಾಗಿ   ಸಾಲಿಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕ್ನಲ್ಲಿ ತಂಬಾಕು ಬೆಳೆ ಹದ ಮಾಡಲು ಮತ್ತು ತಂಬಾಕು ಬ್ಯಾರಲ್ ಗಾಗಿ 2ಲಕ್ಷ ಸಾಲ, ಕೈಸಾಲ 3 ಲಕ್ಷ   ಮಾಡಿದ್ದನು. ಕಳೆದ ವಾರದಿಂದ ತಂಬಾಕು ಬೆಲೆ ಕುಸಿದ ಹಿನ್ನಲೆಯಲ್ಲಿ ಮನನೊಂದು ತನ್ನ ಜಮೀನಿನಲ್ಲಿ ಕ್ರೀಮಿನಾಶಕ ಸೇವಿಸಿ ಆತ್ಮಹತ್ಯೆ   ಮಾಡಿ   ಕೊಂಡಿದ್ದು, ಹೆಚ್ಚಿನ ಚಿಕ್ಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ   ಮೃತಪಟ್ಟಿದ್ದಾನೆ.
 ಇನ್ನೊಬ್ಬ ಹೊಸಅಗ್ರಹಾರ ಹೋಬಳಿಯ ಮಂಡಿಗನಹಳ್ಳಿ ಗ್ರಾಮದ ಚಲುವರಾಜು ಎಂಬುವರ ಪುತ್ರ ಚನ್ನಕೇಶವ ತನ್ನ ಒಂದೂವರೆ ಎಕರೆ       ಜಮೀನಿನಲ್ಲಿ ರೇಷ್ಮೆ ಬೆಳಗಾಗಿ ಕೊಳವೆ ಬಾವಿ ಕೊರೆಯಿಸಿದ್ದು, ನೀರು ಬರದ ಕಾರಣ ಮತ್ತೆರಡು ಕೊಳವೆ ಬಾವಿ ಕೊರೆಯಿಸಿದ್ದಾರೆ.
  ಆದರೆ ಅದರಲ್ಲೂ ನೀರು ಬಂದಿರಲಿಲ್ಲ, ಕೊಳವೆ ಬಾವಿ ಕೊರೆಯಿಸಲು ಕೈಸಾಲವಾಗಿ ಮೂರು ಲಕ್ಷ ರೂ ಸಾಲ ಮಾಡಿದ್ದನು. ಅಲ್ಲದೆ, ರೇಷ್ಮೆ   ನಾಟಿಗಾಗಿ ಹೊಸಅಗ್ರಹಾರ ಸಹಕಾರ ಸಂಘದಲ್ಲಿ 50 ಸಾವಿರ ಸಾಲ ಮಾಡಿದ್ದನು. ಆದರೆ ಕೊಳವೆಬಾವಿಗೆ ಮಾಡಿದ ಸಾಲದಿಂದ ಚಿಂತೆಗೀಡಾದ   ಈತ ಮನನೊಂದು ಜಮೀನಿನಲ್ಲಿ ಟೊಮೇಟೋ ಬೆಳೆಗೆ ಕ್ರೀಮಿನಾಶಕ ಔಷಧಿ ಸಿಂಪಡಿಸುವಾಗ ಅದೇ ಔಷಧಿಯನ್ನು ತಾನು ಸೇವಿಸಿದ್ದಾನೆ.
 ಇದರಿಂದ ಅಸ್ವಸ್ಥಗೊಂಡು ಒದ್ದಾಡುತ್ತಿದ್ದುದನ್ನು ಪಕ್ಕದ ಜಮೀನಿನವರು ನೋಡಿ ಕುಟುಂಬದವರಿಗೆ ತಿಳಿಸಿದ್ದು, ಕೂಡಲೇ ಹೆಚ್ಚಿನ ಚಿಕ್ಕಿತ್ಸೆಗಾಗಿ   ಕೆ.ಆರ್.ನಗರ ತಾಲ್ಲೂಕು ಆಸ್ಪತ್ರೆ ದಾಖಲಿಸಲಾಯಿತಾದರೂ ಚಿಕ್ಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಮೃತಪಟ್ಟಿದ್ದಾನೆ. ಮೃತ ಚನ್ನಕೇಶವನ   ತಾಯಿ   ಶಾಂತಮ್ಮ ನೀಡಿದ ದೂರಿನ ಮೇರೆಗೆ ಸಾಲಿಗ್ರಾಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

777  ಸಂವಿಧಾನ ಮುಟ್ಟಿದರೆ ಕ್ರಾಂತಿ: ಪರಮೇಶ್ವರ್ ಎಚ್ಚರಿಕೆ
 ಡಿಸೆಂಬರ್-1
 ಮೈಸೂರು: ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಬಿಜೆಪಿಯವರು ಬದಲಾಯಿಸಲು  ಮುಂದಾದರೆ ದೊಡ್ಡಕ್ರಾಂತಿಯೇ ಆಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್  ಎಚ್ಚರಿಕೆ ನೀಡಿದ್ದಾರೆ.
 ಸಂವಿಧಾನದಲ್ಲಿ ಜಾತ್ಯತೀತ ಆಶಯಗಳಿಗೆ ಮಹತ್ವ ನೀಡಲಾಗಿದೆ. ಎಲ್ಲರಿಗೂ ಸಮಾನತೆ  ಕಲ್ಪಿಸಿರುವ ಸಂವಿಧಾನ ಬದಲಾವಣೆ ಅಸಾಧ್ಯದ ಮಾತು. ಹಾಗೊಂದು ವೇಳೆ  ಬದಲಾಯಿಸಿದರೆ ಕಾಂಗ್ರೆಸ್ ಕೈಕಟ್ಟಿ ಕೂರುವುದಿಲ್ಲ. ಶೋಷಣೆ ಯನ್ನು ನಾವು ಸಹಿಸುವುದಿಲ್ಲ.  ಅನಾದಿ ಕಾಲದಿಂದಲೂ ಶೋಷಿತರು, ಅಲ್ಪಸಂಖ್ಯಾತರಿಗೆ ಶಿಕ್ಷಣವನ್ನು ವಂಚಿಸಲಾಯಿತು.  ಇದನ್ನು ಅರ್ಥ ಮಾಡಿಕೊಂಡು ಅಲ್ಪಸಂಖ್ಯಾತರು ಬಿಜೆಪಿಗೆ ಯಾವುದೇ ಕಾರಣಕ್ಕೂ ಮತ  ನೀಡಬಾರದು ಎಂದು ಮನವಿ ಮಾಡಿದರು.
 ಭಾರತ ಉಳಿಯಲು ಕಾಂಗ್ರೆಸ್ ಪಕ್ಷ ತ್ಯಾಗ, ಬಲಿದಾನ ಮಾಡಿದೆ. ಒಂದು ವೇಳೆ 1947ರಲ್ಲಿ  ಬಿಜೆಪಿ ಅಧಿಕಾರದಲ್ಲಿದ್ದರೆ ಭಾರತ ದೇಶ ಏನಾಗುತ್ತಿತ್ತು ಎಂಬುದನ್ನು ಅಲ್ಪಸಂಖ್ಯಾತರು  ಗಂಭೀರವಾಗಿ ಆಲೋಚಿಸಬೇಕು ಎಂದರು.

  

444 ತವರಿಗೆ ಹೊರಟ ಸಿಎಂ ಸಿದ್ದರಾಮಯ್ಯ
 ನವೆಂಬರ್-28
 ಮೈಸೂರು : ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಹೋದರನ ಮಗನ ಮದುವೆ ಹಿನ್ನೆಲೆಯಲ್ಲಿ ಮೂರು ದಿನ  ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
 ಇಂದು ಸಂಜೆ ಸಿದ್ದರಾಮಯ್ಯ ಅವರು ಮೈಸೂರಿಗೆ ಆಗಮಿಸಲಿದ್ದಾರೆ. ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ  ವಾಸ್ತವ್ಯ ಹೂಡಲಿದ್ದಾರೆ. ಸಿದ್ದರಾಮಯ್ಯ ಅವರ ಸಹೋದರ ರಾಮಣ್ಣರ ಪುತ್ರನ ಮದುವೆ. ನ. 29 ರಂದು  ನಿಶ್ಚಯಗೊಂಡಿದ್ದು, ಸಿದ್ದರಾಮನಹುಂಡಿಯಲ್ಲಿ ನಡೆಯಲಿದೆ.
 ಮದುವೆ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಭಾಗಿಯಾಗಲು ನಿರ್ಧರಿಸಿರುವ ಸಿಎಂ ಚಪ್ಪರ ಶಾಸ್ತ್ರಕ್ಕೆ  ತೆರಳಲಿದ್ದಾರೆ.

  

  gg ಪ್ರಕಾಶ್ ರೈಗೆ ತಿರುಗೇಟು ನೀಡಿದ ಪ್ರತಾಪ ಸಿಂಹ
ನವೆಂಬರ್.25
ಮೈಸೂರು: ನಟ ಪ್ರಕಾಶ್ ರೈ ತಮಗೆ ನೀಡಿರುವ ನೋಟಿಸ್ಗೆ ಮೈಸೂರಿನ ಬಿಜೆಪಿ ಸಂಸದ ಪ್ರತಾಪ ಸಿಂಹ ತಿರುಗೇಟು ನೀಡಿದ್ದಾರೆ.
ಪ್ರಕಾಶ್ ರೈ ನೋಟಿಸ್ ನೀಡಬೇಕಿರುವುದು ನನಗಲ್ಲ. ಇದನ್ನು ಪ್ರಕಟಿಸಿದ ವೆಬ್ಸೈಟ್ಗೆ. ನಾನು ಆ ಸುದ್ದಿಯನ್ನು ರೀಟ್ವೀಟ್ ಮಾಡಿದ್ದೇನೆ ಅಷ್ಟೆ. ಪ್ರಕಾಶ್ ರೈ ಮೊದಲು ಟ್ವಿಟರ್ ಹಾಗೂ ರೀಟ್ವೀಟ್ ಬಗ್ಗೆ ತಿಳಿದುಕೊಳ್ಳಲಿ, ಎಂದು ಪ್ರತಾಪ ಸಿಂಹ ಪ್ರಕಾಶ್ ರೈ ವಿರುದ್ಧ ಹರಿಹಾಯ್ದರು.
''ಪ್ರಕಾಶ್ ರೈ ನೋಟಿಸ್ ನನಗೆ ತಲುಪಿಲ್ಲ. ನಾನು ಯಾರ ವೈಯಕ್ತಿಕ ಬದುಕಿನ ಬಗ್ಗೆಯೂ ಮಾತಾಡುವುದಿಲ್ಲ. ಪ್ರಕಾಶ್ ರೈ ಮೊದಲು ತಮ್ಮ ನಿಜವಾದ ಹೆಸರನ್ನು ಸ್ಪಷ್ಟಪಡಿಸಲಿ. ಅವರಿಗೆ ತಮಿಳುನಾಡಿನಲ್ಲಿ ಒಂದು ಹೆಸರು, ಕರ್ನಾಟಕದಲ್ಲಿ ಮತ್ತೊಂದು ಹೆಸರಿದೆ,'' ಎಂದು ವಾಗ್ದಾಳಿ ನಡೆಸಿದರು.
ಪ್ರಕಾಶ್ ರೈಗೆ ಬಿಜೆಪಿಯನ್ನು ಎದುರಿಸುವ ಶಕ್ತಿ ಇದೆಯಾ? ಹಾಗಿದ್ದರೆ ರಾಜಕೀಯಕ್ಕೆ ಬರಲಿ. ಅವರಿಗೆ ಭಯ ಇದ್ದರೆ ಸಿದ್ದರಾಮಯ್ಯ ಅವರ ಬಳಿ ಭದ್ರತೆ ಕೇಳಲಿ. ಮೋದಿ ಅವರನ್ನು ಪ್ರಶ್ನಿಸುವ ನಿಮ್ಮನ್ನು ಯಾರೂ ಪ್ರಶ್ನಿಸುವ ಹಾಗಿಲ್ಲವೇ? ಅಭಿವ್ಯಕ್ತಿ ಸ್ವಾತಂತ್ರ್ಯ ನಿಮಗೆ ಮಾತ್ರ ಅಲ್ಲ, ನಮಗೂ ಇದೆ ಎಂದರು.

 

222  83ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಾಂಸ್ಕೃತಿಕ ನಗರಿ ಕನ್ನಡದ ಕಂಪು
 ನವೆಂಬರ್-24
ಮೈಸೂರು: ಕನ್ನಡಿಗರ ಅಸ್ಮಿತೆಯಾದ 'ನುಡಿಹಬ್ಬದ ತೇರು' 27 ವರ್ಷಗಳ ಬಳಿಕ ಸಾಂಸ್ಕೃತಿಕ ನಗರಿ, ಸಾಹಿತಿಗಳ ಬೀಡು ಮೈಸೂರಿಗೆ ಆಗಮಿಸಿದ್ದು, 3 ದಿನಗಳ ಕಾಲ ನಡೆಯುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ಸಂಭ್ರಮದ ಚಾಲನೆ ಸಿಗಲಿದೆ.
ಅಕ್ರರ ಜಾತ್ರೆಗೆ ಅರಮನೆ ನಗರಿ ಮೈಸೂರು ಸಿಂಗಾಗೊಂಡು, ಕನ್ನಡಿಗರನ್ನು ಕೈಬೀಸಿ ಕರೆಯುತ್ತಿದೆ. 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದಾಗಿದ್ದು, ಬಂಡಾಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ.
ಬೆಳಿಗ್ಗೆ 8.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರು ರಾಷ್ಟ್ರ ಧ್ವಜಾರೋಹಣ ಮಾಡಲಿದ್ದು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ಅವರು ಪರಿಷತ್ತಿನ ಧ್ವಜಾರೋಹಣ ಮಾಡಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ ರಾಜಣ್ಣ ಅವರು ನಾಡ ಧ್ವಜಾರೋಹಣ ಮಾಡಲಿದ್ದಾರೆ.
ಅಕ್ಷರ ಜಾತ್ರೆ ಹಿನ್ನಲೆಯಲ್ಲಿ ಮೈಸೂರಿ ನಗರದಾದ್ಯಂತ ಕನ್ನಡ ಬಾವುಟಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕಟೌಟ್ ಗಳು ರಾರಾಜಿಸುತ್ತಿವೆ. ಪ್ರಮುಖ ರಸ್ತೆ, ವೃತ್ತಗಳಲ್ಲಿ ಕನ್ನಟ ಬಾವುಟ ಹೋಲುವಂತೆ ಕೆಂಪು-ಹಳದಿ ಬಣ್ಣದ ವಿದ್ಯುದೀಪಾಲಂಕಾರಗಳನ್ನು ಮಾಡಲಾಗಿದೆ. ಸಮ್ಮೇಳಕ್ಕೆ ಈಗಾಗಲೇ 10 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಸಾಹಿತ್ಯ ಸಮ್ಮೇಳನದಲ್ಲಿ ಶಿಕ್ಷಣ, ಕೃಷಿ, ದಲಿತರ ವಿಚಾರ, ಮಹಿಳೆಯರ ಸಬಲೀಕರಣ, ಕನ್ನಡ ಸಾಹಿತ್ಯ ಇತಿಹಾಸ ಮತ್ತು ಸಂಶೋಧನೆ, ಸ್ಥಳೀಯ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರೆದಿರುವ ಪತ್ರದ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೌನ ಹೀಗೆ ನಾನಾ ವಿಚಾರಗಳ ಕುರಿತು ದಿಗ್ಗಜರು ಚರ್ಚೆಯನ್ನು ನಡೆಯಲಿದ್ದಾರೆ. ಇಲ್ಲದೆ. ಕನ್ನಡ-ಇಂಗ್ಲೀಷ್ ಭಾಷೆಗಳ ನಡುವಿನ ಘರ್ಷಮೆ, ಇಂಗ್ಲೀಷ್ ಜಾಗತೀಕರಣದಿಂದಾಗಿ ಸ್ಥಳೀಯ ಭಾಷೆಗಳ ಹತ್ಯೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ರಕ್ಷಣೆ, ಹಂಪಿ ವಿಶ್ವವಿದ್ಯಾಲಯದ ಸ್ವಾಯತ್ತತೆ ಹಾಗೂ ಇತರೆ ವಿಚಾರಗಳ ಕುರಿತು ಚರ್ಚೆಗಳು ನಡೆಯಲಿದೆ.
ಮಹಾರಾಜ ಕಾಲೇಜು ಮೈದಾನದಲ್ಲ ಪ್ರಧಾನ ವೇದಿಕೆಯಲ್ಲಿ ಬೆಳಿಗ್ಗೆ 11 ಗಂಟೆಗೆ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಡಾ.ಬರಗೂರು ರಾಮಚಂದ್ರಪ್ಪ, ಸಮ್ಮೇಳನಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ್ ಅವರು ಭಾಷಣ ಮಾಡಲಿದ್ದಾರೆ.
ಇನ್ನು ಸಮ್ಮೇಳನದಲ್ಲಿ ನಡೆಯಲಿರುವ ಸಾಂಸ್ಕೃಕ ಕಾರ್ಯಕ್ರಮಗಳನ್ನು ಸಚಿವೆ ಉಮಾಶ್ರೀ ಉದ್ಘಾಟಿಸಲಿದ್ದು, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಸಚಿವ ತನ್ವೀರ್ ಸೇಠ್ ಅವರು ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ವಿವಿಐಪಿಗಳು, ವಿಐಪಿಗಳು, ಸಾಹಿತಿಗಳು ಸೇರಿದಂತೆ ಒಟ್ಟು 5,000 ಜನರು ಆಗಮಿಸಲಿದ್ದು, ಸಮ್ಮೇಳನಕ್ಕೆ ಸಾಕಷ್ಟು ಭದ್ರತೆಗಳನ್ನು ಒದಗಿಸಲಾಗಿದೆ. ಸುಮಾರು 1 ಲಕ್ಷ ಅತಿಥಿಗಳಿಗೆ ಬೋಜನಕೂಟವನ್ನುಆಯೋಜಿಸಲಾಗಿದೆ. ಅತಿಥಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಕಾರ್ಯಕ್ರಮ ಆಯೋಜಕರು ಹೋಟೆಲ್ ರೂಮ್ ಗಳನ್ನು ಬುಕ್ ಮಾಡಿದ್ದಾರೆ. ಅಲ್ಲದೆ, ಸಮ್ಮೇಳನ ನಡೆಯುವ ಸುತ್ತಮುತ್ತಲಿನ ಪ್ರದೇಶಗಳಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

 

454   ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಇಂದು ಮೈಸೂರು ಬಂದ್
 ನವೆಂಬರ್-22
 ಮೈಸೂರು : ಎಂಎಲ್ ಸಿ ಗೋ ಮಧುಸೂದನ್ ಅವರ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಇಂದು ಕರೆ         ಮೈಸೂರು ಬಂದ್ ನಿಂದ ಇಂದು ಬೆಳಗ್ಗಿನ ಚಿತ್ರ ಪ್ರದರ್ಶನಗಳು ರದ್ದಾಗಿವೆ.
 ಖಾಸಗಿ ಸುದ್ದಿವಾಹಿನಿಯ ಚರ್ಚೆಯಲ್ಲಿ ಮಾತನಾಡುತ್ತಾ ಗೋ ಮಧುಸುದೂನ್ ಅವರು ಅಂಬೇಡ್ಕರ್ ಅವರು   ಬರೆದಿರುವ ಸಂವಿಧಾನ ನಾವು ಒಪ್ಪುವುದಿಲ್ಲ. ಅದೊಂದು ಸುಳ್ಳಿನ ಕಂತೆ ಎಂಬ ಹೇಳಿಕೆ ಖಂಡಿಸಿ ಎಸ್ ಡಿಪಿಐ,   ಸಿಪಿಐಎಂ, ಮೈಸೂರು ವಿವಿ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ದಲಿತ ಸಂಘಟನೆಗಳು ಮೈಸೂರ   ಬಂದ್ ಗೆ ಕರೆ ನೀಡಿವೆ.
 ಮೈಸೂರು ಬಂದ್ ನಿಂದಾಗಿ ಚಿತ್ರ ಪ್ರದರ್ಶನಗಳು ರದ್ದಾಗಿರುವುದನ್ನು ಬಿಟ್ಟರೆ ಶಾಲೆ, ಕಾಲೇಜುಗಳು   ಕಾರ್ಯನಿರ್ವಹಿಸುತ್ತಿವೆ.

   

    

ಸಂಚಾರಿ ಪೊಲೀಸರಿಂದ ಆಪರೇಷನ್ ಚೀತಾ ಕಾರ್ಯಾಚರಣೆ

ನವೆಂಬರ್ 18
ಮೈಸೂರು : ನಗರದಲ್ಲಿ ಸಂಚಾರಿ ಪೊಲೀಸರು ಆಪರೇಷನ್ ಚೀತಾ ಶುರುವಿಟ್ಟುಕೊಂಡಿದೆ. ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳ ಪೊಲೀಸರು ಸೇರಿಕೊಂಡು ಅನಿರೀಕ್ಷಿತವಾಗಿ ಸಂಚಾರ ತಪಾಸಣೆ ಕಾರ್ಯಾಚರಣೆಯನ್ನು 'ಆಪರೇಷನ್ ಚೀತಾ' ಎಂಬ ಹೆಸರಿನಡಿ ಆರಂಭಿಸಲಾಗಿದೆ.
ಆಪರೇಷನ್ ಚೀತಾ ಕಾರ್ಯಾಚರಣೆಯಲ್ಲಿ ನಗರದ ಎಲ್ಲಾ ಸಂಚಾರ ಮತ್ತು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಠಾಣೆಗಳ ಅಧಿಕಾರಿಗಳು ನಗರಾದಾದ್ಯಂತ ಪ್ರಮುಖವಾದ ಸ್ಥಳಗಳಲ್ಲಿ ನಿಂತು ವಿವಿಧ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರ ತಪಾಸಣೆ ನಡೆಸುತ್ತಿದ್ದಾರೆ. ಇನ್ನು ಇವರ ವಿರುದ್ಧ ಪ್ರಕರಣಗಳನ್ನು ದಾಖಲಿಸದೇ, ಈ ಸವಾರರಿಗೆ ಪೊಲೀಸರು ಸ್ನೇಹಭಾವದಿಂದ, ವಾಹನ ಸವಾರರು ಅನುಸರಿಸಬೇಕಾದ ಸಂಚಾರ ನಿಯಮಗಳು ಮತ್ತು ಹೊಂದಿರಬೇಕಾದ ಅಗತ್ಯ ದಾಖಲೆಗಳ ಬಗ್ಗೆ ತಿಳುವಳಿಕೆಯನ್ನು ನೀಡಿದರು.ಇನ್ನು ಈ ಕಾರ್ಯಾಚರಣೆಯಲ್ಲಿ ಒಟ್ಟು 3000 ಸಂಖ್ಯೆಯ ವಾಹನ ಸವಾರರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗಿದೆ. ಈ ಕಾರ್ಯಾಚರಣೆಯನ್ನು ಮೈಸೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಡಿ.ಸಿ.ಪಿ. ಡಾ. ವಿಕ್ರಂ ವಿ ಅಮಟೆರವರ ಮಾರ್ಗದರ್ಶನದಲ್ಲಿ ನಗರದ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ಕೈಗೊಂಡಿದ್ದು, ಈ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತ ಡಾ. ಎ. ಸುಬ್ರಮಣ್ಯೇಶ್ವರ ರಾವ್ ಶ್ಲಾಘಿಸಿರುತ್ತಾರೆ.

  

     

ಮೈಸೂರು ನಗರ ಮತ್ತೆ ದೀಪಾಲಂಕಾರದಿಂದ    ಕಂಗೊಳಿಸಲಿದೆ


ನವೆಂಬರ್ 13


ಮೈಸೂರು: ದಸರಾ ವೇಳೆಯಲ್ಲಿ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಅರಮನೆ ನಗರಿ, ಇದೀಗ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮತ್ತೊಮ್ಮೆ ದೀಪಗಳಿಂದ ಶೃಂಗರಿಸಿಕೊಂಡಿದೆ. ನ.24ರಿಂದ 26ರವರೆಗೆ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಮೈಸೂರಿನ ಪ್ರಮುಖ ವೃತ್ತಗಳನ್ನು, ಪ್ರಮುಖ ರಸ್ತೆಗಳನ್ನು ದೀಪಗಳಿಂದ ಅಲಂಕರಿಸಲು ಅಲಂಕಾರ ಸಮಿತಿ ನಿರ್ಧರಿಸಿದೆ. 27 ವರ್ಷದ ಬಳಿಕ ಸಮ್ಮೇಳನ ಮೈಸೂರಿನಲ್ಲಿ ನಡೆಯುತ್ತಿರುವ ಕಾರಣ ಸಮ್ಮೇಳನವನ್ನು ಅದ್ಧೂರಿಯಾಗಿ ಮಾಡಲು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸಿದೆ. ದೀಪಾಲಂಕಾರದ ಮೂಲಕ ಪಾರಂಪರಿಕ ನಗರಿ ಮೈಸೂರಿನ ಸೌಂದರ್ಯವನ್ನು ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರು ನೋಡಬೇಕು ಎನ್ನುವ ನಿಟ್ಟಿನಲ್ಲಿ ಯತ್ನ ಸಾಗಿದೆ. 

 ದೀಪಾಲಂಕಾರದ ಮೂಲಕ ಸಾಂಸ್ಕೃತಿಕ ನಗರಕ್ಕೆ ಆಗಮಿಸುವ ಪ್ರವಾಸಿಗರು, ಸಾಹಿತ್ಯಾಸಕ್ತರಿಗೆ 3 ದಿನಗಳ ಕಾಲ ಜಗಮಗಿಸುವ  ಕೆ.ಆರ್.ವೃತ್ತ, ಜಯಚಾಮರಾಜ ಒಡೆಯರ್ ವೃತ್ತ, ರೈಲ್ವೆ ವೃತ್ತ, ಜಗನ್ಮೋಹನ ಅರಮನೆ ವೃತ್ತ, ಸಮ್ಮೇಳನ ನಡೆಯುವ ಸ್ಥಳದ ಬಳಿ ಇರುವ ರಾಮಸ್ವಾಮಿ ವೃತ್ತ, ಏಕಲವ್ಯ ವೃತ್ತ ಸೇರಿದಂತೆ ನಗರದ 14 ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವ ಬಗ್ಗೆ ಚಿಂತನೆ ನಡೆದಿದೆ. ದಸರಾ ಪ್ರಮಾಣದಂತೆ ಸಮ್ಮೇಳನದ ಸಂದರ್ಭ ದೀಪಾಲಂಕಾರ ಇಲ್ಲದೆ ಹೋದರೂ ಸಮ್ಮೇಳನದಲ್ಲಿ ಭಾಗವಹಿಸುವ ಸಾಹಿತ್ಯಾಸಕ್ತರಿಗೆ, ಪ್ರವಾಸಿಗರಿಗೆ ವಿದ್ಯುತ್ ಅಲಂಕಾರ ಕಣ್ಣಿಗೆ ಹಬ್ಬ ಉಂಟುಮಾಡುವುದು ಖಂಡಿತ. ಉಳಿದಂತೆ ಸಮ್ಮೇಳನಾಸಕ್ತರು ಬಂದಿಳಿಯುವ ಕೇಂದ್ರೀಯ ಬಸ್ ನಿಲ್ದಾಣದಿಂದ ಸಮ್ಮೇಳನ ನಡೆಯುವ ಮಹಾರಾಜ ಕಾಲೇಜು ಮೈದಾನದ ರಸ್ತೆಗೆ ವಿದ್ಯುತ್ ಅಲಂಕಾರ ಮಾಡಲು ಚಿಂತಿಸಲಾಗಿದೆ.  ಮೈಸೂರನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಸಾಧ್ಯವಾಗಲಿದೆ ಎಂದು ಅಲಂಕಾರ ಸಮಿತಿಯ ಕಾರ್ಯಾಧ್ಯಕ್ಷ ನರಸಿಂಹೇಗೌಡ ತಿಳಿಸಿದ್ದಾರೆ.20 ಲಕ್ಷ ರೂ. ಬಜೆಟ್ ನಲ್ಲಿ ದೀಪಾಲಂಕಾರ, ಮೂರು ದಿನಗಳ ದೀಪಾಲಂಕಾರಕ್ಕೆ ಅಂದಾಜು 20 ಲಕ್ಷ ರೂ ವೆಚ್ಚವಾಗುವ ನಿರೀಕ್ಷೆಯಿದೆ. ಈ ಸಂಬಂಧ ಇನ್ನೂ ಅಲಂಕಾರ ಸಮಿತಿ ಅಂತಿಮ ಯೋಜನೆ ರೂಪಿಸಿಲ್ಲ. ಮೈಸೂರಿನಲ್ಲಿರುವ ಪ್ರಮುಖ 14 ವೃತ್ತಗಳನ್ನು ಅಲಂಕಾರ ಮಾಡಲು ಯೋಜನೆ ರೂಪಿಸಲಾಗಿದೆ.ಇದರ ಜೊತೆಗೆ ರೈಲಿನ ಮೂಲಕ ಸಾಹಿತ್ಯಾಸಕ್ತರು ಆಗಮಿಸುವುದರಿಂದ ರೈಲು ನಿಲ್ದಾಣದ ವೃತ್ತದ ರಸ್ತೆಯಿಂದ ಸಮ್ಮೇಳನದ ಮೈದಾನದ ರಸ್ತೆಯಲ್ಲಿ ದೀಪಾಲಂಕಾರ ಮಾಡಲು ಚಿಂತನೆ ಮಾಡಲಾಗುತ್ತಿದೆ ಎನ್ನುತ್ತಾರೆ.ಒಟ್ಟಾರೆ ಸಾಹಿತ್ಯ ಸಮ್ಮೇಳನದ ಮೆರುಗು ಹೆಚ್ಚಿಸುವಲ್ಲಿ ಹಾಗೂ ಎಲ್ಲರಲ್ಲೂ ಅಚ್ಚಳಿಯದಂತೆ ಮೂಡಿಸುವಲ್ಲಿ ದೀಪಾಲಂಕಾರದ ಸೊಬಗು ಸಾಕ್ಷಿಯಾಗಲಿದೆ. ಈ ಕುರಿತಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ದಿನಾಂಕ ಹತ್ತಿರದಲ್ಲಿದೆ. ಹಾಗಾಗಿ ಎಲ್ಲಾ ಉಪ ಸಮಿತಿಗಳೂ ತಮ್ಮ ಕೆಲಸ ಕಾರ್ಯಗಳನ್ನು ಚುರುಕಿನಿಂದ ಕೈಗೊಳ್ಳಬೇಕು. ಮೂರೂ ದಿನ ಸಂಜೆ 6 ರಿಂದ 10 ಗಂಟೆವರೆಗೆ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಕಲಾವಿದರನ್ನು ಬೇಗ ಅಂತಿಮಗೊಳಿಸಲು ತಿಳಿಸಿದರು. ಸಾಂಸ್ಕೃತಿಕ ಸಮಿತಿ ಅಧ್ಯಕ್ಷರೂ ಆದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಹೆಸರಾಂತ ಗಾಯಕರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಲಕ್ಷಾಂತರ ರೂ. ನೀಡುವ ಬದಲಿಗೆ, ದಸರಾ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡುವುದು ಸೂಕ್ತ. ಮುಖ್ಯಮಂತಿಯವರ ತವರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಕಮದಲ್ಲಿಯೂ ಲೋಪವಾಗಬಾರದು ಎಂದು ಹೇಳಿದರು.ಈ ಸಮ್ಮೇಳನದ ಅಂಗವಾಗಿ ಭುವನೇಶ್ವರಿ ದೇವಿಯನ್ನು ಆನೆ ಮೇಲೆ ಮೆರವಣಿಗೆ ಮಾಡಲಾಗುವುದು. ಹಾಗೂ ಸಮ್ಮೇಳನಾಧ್ಯಕ್ಷರಾದ ಪ್ರೊ.ಚಂದ್ರಶೇಖರ ಪಾಟೀಲ ಅವರನ್ನು ಅಲಂಕೃತ ಸಾರೋಟಿ ನಲ್ಲಿ ಬರಮಾಡಿ ಕೊಳ್ಳಲಾಗುವುದು ಎಂದು ಸಭೆಗೆ ತಿಳಿಸಲಾಯಿತು.

 

22    ಮಕ್ಕಳ ಹುಟ್ಟುಹಬ್ಬಕ್ಕೆ ಕಡ್ಡಾಯ ರಜೆ ಘೋಷಣೆ
 ನವೆಂಬರ್-11
ಮೈಸೂರು: ಮಕ್ಕಳ ಹುಟ್ಟುಹಬ್ಬಕ್ಕೆ ಪೊಲೀಸರಿಗೆ ಕಡ್ಡಾಯ ರಜೆ ನೀಡಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣೇಶ್ವರರಾವ್ ನೂತನ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಎಲ್ಲಾ ಸಂದರ್ಭಗಳಲ್ಲೂ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಮಾನಸಿಕ ಸ್ಥಿತಿ ಅರ್ಥ ಮಾಡಿಕೊಂಡು ಹೊಸ ಸುತ್ತೋಲೆ ಹೊರಡಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಇಲಾಖೆ ಹೇಳಿದೆ. ಈ ಹೊಸ ಸುತ್ತೋಲೆಯಿಂದ ಪೊಲೀಸ್ ಸಿಬ್ಬಂದಿಗಳಿಗೆ ಸಂತೋಷ ಉಂಟು ಮಾಡಿದೆ ಎನ್ನಲಾಗಿದೆ.

 

 

66

 ಬಾರಿನಲ್ಲಿ ಬಯಲಾಯ್ತು ಕೃಷ್ಣನನ್ನು ಕೊಲೆ ಮಾಡಿಸಿದ್ದ ರಾಧೆ ಸ್ಟೋರಿ

 ನವೆಂಬರ್-11
ಮೈಸೂರು: ದಟ್ಟಗಳ್ಳಿಯಲ್ಲಿ ಚಾಣಕ್ಯ ಶಾಲೆಯ ಸಂಸ್ಥಾಪಕ ಕೃಷ್ಣ ಅವರು ವರ್ಷದ ಹಿಂದೆ ಮೃತಪಟ್ಟಿದ್ದರು ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗ ಮಹತ್ವದ ಟ್ವಿಸ್ಟ್ ಸಿಕ್ಕಿದ್ದು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ಕೃಷ್ಣ ಹೆಂಡತಿ ರಾಧ ಕೊಲೆ ಮಾಡಿದ್ದಾರೆ ಎನ್ನುವ ಮಾಹಿತಿಯೊಂದು ಹೊರ ಬಿದಿದ್ದೆ.
ಘಟನೆ ಹಿನ್ನಲೆ : ಮೈಸೂರಿನ ದಟ್ಟಗಳ್ಳಿಯಲ್ಲಿ ಚಾಣಕ್ಯ ಶಾಲೆಯ ಸಂಸ್ಥಾಪಕ ಕೃಷ್ಣ ಅವರು ವರ್ಷದ ಹಿಂದೆ ಮೃತಪಟ್ಟಿದ್ದರು. ಈ ವೇಳೆ ಪತ್ನಿ ರಾಧಾ ಪತಿ ಕೃಷ್ಣ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೋಲಿಸರಿಗೆ ಮಾಹಿತಿ ನೀಡಿದ್ದರು. ಇದೇ ವೇಳೆ ಪ್ರಕರಣವನ್ನು ಅಸಹಜ ಪ್ರಕರಣ ಅಂತ ದಾಖಲಿಸಿಕೊಂಡಿದ್ದರು.
ಇದೇ ವೇಳೆ ಕೃಷ್ಣ ಮೃತದೇಹಕ್ಕೆ ಸಂಬಂಧಿಕರು ಅಗ್ನಿಸ್ಪರ್ಶ ನೆರವೇರಿಸುವ ಮೂಲಕ ಅಂತ್ಯಕ್ರಿಯೆ ನಡೆಸಿದ್ದರು. ತಮ್ಮ ಗಂಡನ ಸಾವಿನ ಬಳಿಕ ಕೃಷ್ಣ ಅವರ ಪತ್ನಿ ಮತ್ತು ಕುಟುಂಬದ ಸದಸ್ಯರು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರುತ್ತಿದ್ದರು. ಕೃಷ್ಣ ಮೃತಪಟ್ಟ ನಂತರ ರಾಧಾ ಅವರು ಚಾಣಕ್ಯ ಶಾಲೆಯ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದರು.
ಕೊಲೆ ಪ್ರಕರಣ ಬಯಲಿಗೆ ಬಂದದ್ದು ಹೀಗೆ ನೋಡಿ! ಕೆಲ ದಿವಸಗಳ ಹಿಂದೆ ಬಾರ್ ವೊಂದರಲ್ಲಿ ಮೂವರು ಯುವಕರು ಸಿಕ್ಕಾಪಟ್ಟೆ ಟೈಟಾಗಿ , ಕೃಷ್ಣರ ಮುಖವನ್ನು ದಿಂಬಿನಿಂದ ಅದುಮಿ ಉಸಿರು ಕಟ್ಟಿಸಿ ಕೊಂದ್ರು ಯಾರಿಗೂ ಗೊತ್ತಾಗಿಲ್ಲ.

ಘಟನೆ ಆಗಿ ಒಂದು ವರ್ಷ ಆದ್ರೂ ಇದೂವರೆಗೂ ಕೊಂದವರು ಯಾರು ಅನ್ನೋದೆ ಗೊತ್ತಾಗಿಲ್ಲ. ಇದಕ್ಕೆ ಧಮ್ ಬೇಕಲೆ ಧಮ್ ಬೇಕು. ನೋಡು ನಮ್ಮ ಹವಾ ಹೆಂಗೆ ಮೇಂಟೆನ್ ಮಾಡಿದ್ವಿ ಅಂತ ಇರೋ ಬರೋ ದಮ್ ಬಿಟ್ಟು ಹೇಳಿ ಬಿಟಿದ್ದಾನೆ. ಅದೇ ವೇಳೆಯಲ್ಲಿ ಆ ಹುಡುಗರ ಹಿಂದಿನ ಟೇಬಲ್ ನಲ್ಲಿ ಕುಂತು ಎಣ್ಣೆ ಹೊಡೆಯುತ್ತಿದ್ದ ಕೃಷ್ಣ ಅವರ ಸಂಬಂಧಿಗೆ ಬಿದಿದ್ದೆ, ಎಣ್ಣೆ ಏಟಿನಲ್ಲೂ ಅಲರ್ಟ್ ಆದ ಕೃಷ್ಣ ಅವರ ಸಂಬಂಧಿ ಹುಡುಗರು ಮಾತನಾಡಿಕೊಳ್ಳುತ್ತಿದ್ದ ಅಷ್ಟು ವಿಷಯವನ್ನು ಕೇಳಿಸಿಕೊಂಡಿದ್ದಾನೆ.
ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಬಾರ್ ನಲ್ಲಿ ಹುಡುಗರ ಮಾತು ಕೇಳಿಸಿಕೊಂಡು ಬಂದ ಮೃತ ಕೃಷ್ಟ ಸಂಬಂಧಿ ರಾಧ ಅವರ ಬಳಿ ಮಾತನಾಡಿದ್ದಾರೆ.

ಆದರೆ ರಾಧ ಅವರ ಮಾತಿಗೆ ಮರು ಉತ್ತರ ನೀಡುತ್ತ ಇಲ್ಲ ಅವರು ಹಾಗೇ ಸತ್ತಿಲ್ಲ. ಅವರು ಸತ್ತಿರುವುದು ಹೃದಯಘಾತದಿಂದ ಅಂತ ವಾದ ಮಾಡಿದ್ದಾಳೆ.
ಕೂಡಲೇ ಕೃಷ್ಣ ಅವರ ಸಂಬಂಧಿಗಳು ಬಾರ್ ನಲ್ಲಿ ನಡೆದ ಯುವಕನ ಮಾತುಕತೆಯ ಆಧಾರದಲ್ಲಿ ಕುವೆಂಪುನಗರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು. ಪ್ರಕರಣದ ಗಂಭೀರತೆಯನ್ನು ಅರಿತ ನಗರ ಪೊಲೀಸ್ ಆಯುಕ್ತ ಡಾ.ಎ. ಸುಬ್ರಹ್ಮಣೇಶ್ವರರಾವ್ ಅವರು ತನಿಖೆ ನಡೆಸುವಂತೆ ಸಿಸಿಬಿಗೆ ಆದೇಶಿಸಿದರು.
ಸಿಸಿಬಿ ಪೊಲೀಸರು ಶಂಕಿತ ಮಂಜುನಾಥ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

ಗಾಢ ನಿದ್ರೆಯಲ್ಲಿದ್ದ ಕೃಷ್ಣ ಅವರನ್ನು ಅವರ ಮನೆಯಲ್ಲೇ ಹತ್ಯೆಮಾಡಿದ್ದೇವೆ ಅಂತ ಫೋಲಿಸರ ಟ್ರೀಟ್ ಮೆಂಟ್ ಗೆ ಹೆದರಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ.
ಚಾಣಕ್ಯ ಶಾಲೆಗೆ ಮಂಜುನಾಥ್ ಕುಡಿಯುವ ನೀರಿನ ಕ್ಯಾನ್ ಪೂರೈಕೆ ಮಾಡುತ್ತಿದ್ದ. ಈ ವೇಳೆ ರಾಧಾ ಮತ್ತು ಮಂಜುನಾಥ್ ನಡುವೆ ಪರಿಚಯವಾಗಿತ್ತು. ಈಗ ನಾಪತ್ತೆಯಾಗಿರುವ ಪತ್ನಿ ರಾಧಾ ಮತ್ತು ಉಳಿದ ಇಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಆರೋಪಿ ಮಂಜುನಾಥ್ ಹಾಗೂ ರಾಧಳ ನಡುವೆ ಅನೈತಿಕ ಸಂಬಂಧ ಕೂಡ ಇತ್ತು ಹೇಳಲಾಗುತ್ತಿದೆ.

  

     

ಸರ್ಕಾರಕ್ಕೆ ನಾನೇ ಸಲಹೆ ಸೂಚಿಸಿದ್ದು: ವಾಟಾಳ್

ನವೆಂಬರ್-9
ಮೈಸೂರು: ಟಿಪ್ಪು ಸುಲ್ತಾನ್ ಹುಟ್ಟುಹಬ್ಬ ಆಚರಿಸುವಂತೆ ಸರ್ಕಾರಕ್ಕೆ ನಾನೇ ಸಲಹೆ ನೀಡಿದ್ದು. ಆತ ಈ ದೇಶದ ಮಹಾನ್ ವೀರ. ಆತ ಬೆಂಗಳೂರಿನ ದೇವನಹಳ್ಳಿಯ ಹುಡುಗ, ದೆಹಲಿಯ ಪಾರ್ಲಿಮೆಂಟ್ ಭವನದ ಬಳಿ ಟಿಪ್ಪು ಸುಲ್ತಾನ್ ಪ್ರತಿಮೆ ಅನಾವರಣ ಮಾಡಬೇಕು ಎಂದು ಕನ್ನಡ ಚಳುವಳಿಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದರು.ಇಂದು ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಚಾಪೆ ಹಾಸಿಕೊಂಡು ಏಕಾಂಗಿ ಮಲಗುವ ಮೂಲಕ ಏಕಾಂಗಿಯಾಗಿ ವಿನೂತನವಾಗಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ರಾಜ್ಯದ ಸಂಸದರು ಸಂಸತ್ ನಲ್ಲಿ ರಾಜ್ಯದ ಕಳಸ ಬಂಡೂರಿ ಹಾಗೂ ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಡ ತರುವಲ್ಲಿ ವಿಫಲರಾಗಿದ್ದಾರೆ. ಒಂದು ದಿನವೂ ಸಂಸತ್ ನಲ್ಲಿ ಪ್ರತಿಭಟನೆ ನಡೆಸಿಲ್ಲ. ರಾಜ್ಯ ಸರ್ಕಾರ ನಾಲ್ಕು ತಿಂಗಳಲ್ಲಿ ಬರುವ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿದೆ. ರಾಜ್ಯ ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಏಕಾಂಗಿಯಾಗಿ ಚಾಪೆ ಹಾಸಿ ಮಲಗುವ ಮೂಲಕ ವಿನೂತ ಪ್ರತಿಭಟನೆ ನಡೆಸಿದರು.ಕರ್ನಾಟಕ ಲೋಕಸಭಾ ಸದಸ್ಯರಿಗೆ ರಾಜ್ಯದ ಬಗ್ಗೆ ಕಾಳಜಿ ಇಲ್ಲ, ಇವರು ಎಲ್ಲಿ ಇದ್ದಾರೆ ಅಂತಾ ಗೊತ್ತಾಗುತ್ತಿಲ್ಲ. ನರೇಂದ್ರ ಮೋದಿ ತಮಿಳುನಾಡಿಗೆ ಎದ್ದು ಬಿದ್ದು ಬರುತ್ತಾರೆ. ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದ ಮೇಕೆದಾಟು ಯೋಜನೆ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.ಮೈಸೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೆಳಕ್ಕೆ ಸಿದ್ದತೆ ಸಾಲದು, ಇಡಿ ವರ್ಷದಲ್ಲಿ ಒಂದು ತಿಂಗಳು ಮಾತ್ರ ಸಾಹಿತ್ಯ ಪರಿಷತ್ ನವರು ಸಂಭ್ರಮ ಮಾಡುತ್ತಾರೆ. ಇನ್ನುಳಿದ ಹನ್ನೊಂದು ತಿಂಗಳು ನಿದ್ರೆ ಮಾಡುತ್ತಾರೆ ಎಂದು ಕನ್ನಡ ಸಾಹಿತ್ಯ ಸಮ್ಮೇಳದ ಬಗ್ಗೆ ವ್ಯಂಗ್ಯವಾಡಿದರು.ಇನ್ನೂ ರಾಜ್ಯ ಸರ್ಕಾರ ಕನ್ನಡ ಭಾವುಟ ಬದಲಾವಣೆ ಮಾಡಲು ಹೊರಟಿದೆ. ಹಳದಿ ಕೆಂಪು ಬಣ್ಣದಲ್ಲಿ ರಾಜ್ಯದ ಆರು ಕೋಟಿ ಕನ್ನಡಿಗರ ಪ್ರತೀಕವಾಗಿದ್ದು. ಈ ಬಾವುಟವನ್ನೇ ಒಪ್ಪಬೇಕು. ರಾಜ್ಯದ ಬಾವುಟದಲ್ಲಿ ಒಂದೇ ಒಂದು ಗೆರೆ ಬದಲಾವಣೆಯಾದರೇ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.

 

    

ಕಿರುಕುಳ ತಾಳಲಾರದೆ ಹಸುಗುಸಿನೊಂದಿಗೆ ತಾಯಿ ಆತ್ಮಹತ್ಯೆ

ನವೆಂಬರ್-9
ಮೈಸೂರು: ಕೌಟುಂಬಿಕ ಕಲಹದಿಂದ ಮನನೊಂದ ಶಾಲಾ ಶಿಕ್ಷಕಿ 14 ತಿಂಗಳ ಹೆಣ್ಣುಮಗವನ್ನು ನೇಣು ಹಾಕಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಹುಣಸೂರು ತಾಲೂಕಿನ ಮುದಗನೂರು ಗ್ರಾಮದಲ್ಲಿ ನಡೆದಿದೆ.ಹೀಗೆ ನೇಣಿಗೆ ಶರಣಾದ ಖಾಸಗಿ ಶಾಲಾ ಶಿಕ್ಷಕಿ ಮಹಾಲಕ್ಷ್ಮೀ(30). ಈಕೆ ತನ್ನ 14 ತಿಂಗಳ ಹೆಣ್ಣು ಮಗುವನ್ನು ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮುದಗನೂರಿನ ಪ್ರಶಾಂತ ಎಂಬವರನ್ನು ಮದುವೆಯಾಗಿದ್ದು, ಆತನಿಗೆ ಯಾವುದೇ ಕೆಲಸವಿರಲಿಲ್ಲ. ಇದರಿಂದ ತಾನೇ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು.ಈ ಮಧ್ಯೆ ಹೆಣ್ಣು ಮಗುವಾಗಿದೆ ಎಂದು ಕಿರುಕುಳ ನೀಡುತ್ತಿದ್ದ ಗಂಡ ಪ್ರಶಾಂತ್ ವ್ಯಾಪಾರ ಮಾಡಲು ತವರು ಮನೆಯಿಂದ ಹಣ ತರುವಂತೆ ಪೀಡುಸುತ್ತಿದ್ದ ಎನ್ನಲಾಗಿದ್ದು, ಇದರಿಂದ ಮನನೊಂದ ಶಿಕ್ಷಕಿ ಮಹಾಲಕ್ಷ್ಮೀ ತನ್ನ 14 ತಿಂಗಳ ಮಗು ಪಿಂಕುವನ್ನು ನೇಣು ಹಾಕಿ ಸಾಯಿಸಿ ನಂತರ ತಾನು ನೇಣಿಗೆ ಶರಣಾಗಿದ್ದಾಳೆ.ಈ ಸಂಬಂಧ ಹುನಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

  

33  ಪಿಕ್ ಪಾಕೆಟ್ ಕಳ್ಳನಿಗೆ ಸಾರ್ವಜನಿಕ ರಿಂದ ಗೂಸ
 ನವೆಂಬರ್-8
ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ಕಳ್ಳನೊಬ್ಬ ತನ್ನ ಕೈ ಚಳಕ ತೋರಿಸಲು ಹೋಗಿ, ಸಾರ್ವಜನಿಕರಿಗೆ ಸಿಕ್ಕಿ ಬಿದ್ದು, ಸಖತ್ ಗೂಸಾ ತಿಂದ ಘಟನೆ ನಡೆದಿದೆ. ನಗರದ ಮೈಸೂರಿನ ಗ್ರಾಮಾಂತರ ಪ್ರದೇಶದ ಬಸ್ ನಿಲ್ದಾಣದಲ್ಲಿ ಮಂಗಳವಾರ ತಡರಾತ್ರಿ ಪಿಕ್ ಪಾಕೆಟ್ ಕಳ್ಳನಿಗೆ ಸಾರ್ವಜನಿಕರು ಸಖತ್ ಗೂಸ ನೀಡಿದ್ದಾರೆ.ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ರಾತ್ರಿ, ಅಲ್ಪ ಸ್ವಲ್ಪ ಜನರು, ತಮ್ಮ ತಮ್ಮ ಮನೆ, ಊರಿಗೆ ತೆರಳುವ ದಾವಂತದಲ್ಲಿದ್ದರು. ಈ ವೇಳೆ ಬಸ್ ನಿಲ್ದಾಣದಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬ ಕಳ್ಳತನಕ್ಕೆ ಯತ್ನಿಸಿದ್ದಾನೆ. ಕಳ್ಳತನ ಮಾಡುವ ವೇಳೆ ಸಾರ್ವಜನಿಕರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಹೀಗೆ ಸಿಕ್ಕಿಬಿದ್ದ ಕಳ್ಳನಿಗೆ ಸಾರ್ವಜನಿಕರು ಗೂಸ ನೀಡಿದರು.
ಈ ಘಟನಾ ಸ್ಥಳಕ್ಕೆ ತಕ್ಷಣ ಆಗಮಿಸಿದ ಪೊಲೀಸರು ಕಳ್ಳನನ್ನು ಬಂಧಿಸಲು ಮುಂದಾಗಿದ್ದಾರೆ.
ಆದ್ರೆ ಈ ವೇಳೆ ಅಪರಿಚಿತ ಕಳ್ಳ ಕೂಗಾಡಿ ರಂಪಾಟ ಮಾಡಿದ್ದಾನೆ. ಕೊನೆಗೂ ಕಳ್ಳನನ್ನು ದೇವರಾಜ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದರು.

  

 

   

   

 

 ಸಿದ್ದರಾಮಯ್ಯ ಸೋಲಿಸಲು ರಾಜ್ಯದ ಜನರು ಸಾಕು : ಕುಮಾರಸ್ವಾಮಿ

ನವೆಂಬರ್-7

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚುನಾವಣೆ ನಡೆಸಲಿ. ಕರ್ನಾಟಕ ಯಾವ ಪಕ್ಷಗಳೂ ಒಂದಾಗುವುದು ಬೇಡ, ರಾಜ್ಯದ ಜನರು ಅವರನ್ನು ಸೋಲಿಸುತ್ತಾರೆ' ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಲಿಂಗದೇವರಕೊಪ್ಪ ಮೈದಾನದಲ್ಲಿ 'ಕುಮಾರಪರ್ವ 2018' ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ ಅವರು ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ಸಮಾವೇಶದಲ್ಲಿ ಕುಮಾರಸ್ವಾಮಿ ಹೇಳಿದ್ದೇನು?
ನಾಡ ದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ರಾಜ್ಯ ಪ್ರವಾಸ ಆರಂಭಿಸಿದ್ದೇವೆ. ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವುದು ನಮ್ಮ ರಾಜ್ಯ ಪ್ರವಾಸದ ಉದ್ದೇಶ. ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತೇನೆ. ಕಾರ್ಯಕರ್ತರಿಗೆ ಶಕ್ತಿ ತುಂಬುತ್ತೇನೆ. ಎಲ್ಲರೂ ಒಟ್ಟಾಗಿ ಚುನಾವಣೆಯನ್ನು ಎದುರಿಸೋಣ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ನಗಣ್ಯ. ಸಿದ್ದರಾಮಯ್ಯ ಅವರ ಮುಂದೆ ಶಕ್ತಿ ಪ್ರದರ್ಶನ ಮಾಡಲು ಚಾಮುಂಡೇಶ್ರಿ ಕ್ಷೇತ್ರದಲ್ಲಿ ಸಮಾವೇಶ ನಡೆಸಿ, ಪ್ರಚಾರ ಆರಂಭಮಾಡುತ್ತಿಲ್ಲ. ನಮ್ಮ ಮೇಲೆ ಜನರು ಇಟ್ಟ ನಂಬಿಕೆ ಮೇಲೆ ಇಲ್ಲಿ ಸಮಾವೇಶ ಮಾಡುತ್ತಿದ್ದೇವೆ.
ಎರಡೂ ರಾಷ್ಟ್ರೀಯ ಪಕ್ಷಗಳಿಗೆ ರಾಜ್ಯದ ಜನರು ಅವಕಾಶ ಕೊಟ್ಟು ನೋಡಿದ್ದಾರೆ. ಆದರೆ, ಯಾರೂ ರಾಜ್ಯದ ಜನರ ಹಿತ ಕಾಪಾಡಿಲ್ಲ. ರೈತರ ನೆರವಿಗೆ ಧಾವಿಸಿಲ್ಲ. ಆದ್ದರಿಂದ, ಈ ಬಾರಿ ಜೆಡಿಎಸ್ ಪಕ್ಷಕ್ಕೆ ಜನರು ಬೆಂಬಲ ನೀಡಲಿದ್ದಾರೆ.
ಮಾತನಾಡಿದರೆ ನಾನು ರೈತರ ಮಗ, ಕುರಿ ಕಾದಿದ್ದೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ರೈತರ ಆತ್ಮಹತ್ಯೆ ತಡೆಯಲು ಮುಂದಾಗುತ್ತಿಲ್ಲ. ರೈತರ ಸಾಲ ಮನ್ನಾ ಮಾಡುತ್ತಿಲ್ಲ. ಸಾಲ ಮನ್ನಾ ಮಾಡಿ ಎಂದರೆ ಬಿಜೆಪಿ ನಾಯಕರ ಕಡೆ ಕೈ ತೋರಿಸಿ, ಕೇಂದ್ರ ಸರ್ಕಾರಕ್ಕೆ ಹೇಳಿ ಎನ್ನುತ್ತಾರೆ.
ಈ ವೇದಿಕೆ ಮೇಲಿನಿಂದ ರಾಜ್ಯದ ಜನರಿಗೆ ಮನವಿ ಮಾಡುತ್ತೇನೆ. ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ 5 ವರ್ಷ ಅವಕಾಶ ನೀಡಿದ್ದೀರಿ. ನಿಮ್ಮ ಒಳತಿಗಾಗಿ ನಮಗೆ ಒಂದು ಬಾರಿ ಅವಕಾಶ ಕೊಡಿ ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.
ಮುಖ್ಯಮಂತ್ರಿಯಾಗಿ ನನ್ನ 20 ತಿಂಗಳ ಆಡಳಿತ ಕೇಲವ ಟ್ರೈಲರ್. ಸಿನಿಮಾ ಬಿಡುಗಡೆಗೂ ಮುನ್ನ ಬರುವ ಟ್ರೈಲರ್. ನಮಗೆ ಒಂದು ಬಾರಿ ಅವಕಾಶ ನೀಡಿ. ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದರು.

 

  

99  ಹೆಲ್ಮೆಟ್ ಗಳನ್ನು ಕುಟ್ಟಿ ಪುಡಿ ಮಾಡಿದ ಪೊಲೀಸರು
 ನವೆಂಬರ್- 3
ಮೈಸೂರು : ಕಳೆದ ಕೆಲವು ದಿನಗಳ ಹಿಂದೆ ಮೈಸೂರಿನ ಪ್ರಮುಖ ಬೀದಿ ಬದಿಗಳಲ್ಲಿ ಮಾರಾಟ ಮಾಡಲಾಗುತ್ತಿದ್ದ ರಾಸಾಯನಿಕಯುಕ್ತ ಹೆಲ್ಮೆಟ್ ಗಳಿಗೆ ಟ್ರಾಫಿಕ್ ಪೊಲೀಸರು ಮುಕ್ತಿ ನೀಡಿದರು.
ಕಳೆದ ಕೆಲವು ದಿನಗಳ ಹಿಂದೆ ನಗರದ ಪ್ರಮುಖ ರಸ್ತೆಯ ಬದಿಗಳಲ್ಲಿ ಹೆಲ್ಮೆಟ್ ಮಾರಾಟ ಮಾಡುತ್ತಿದ್ದುದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಅವುಗಳನ್ನು ವಶಪಡಿಸಿಕೊಂಡು ಪರಿಶೀಲಿಸಲಾಗಿ ಅವು ರಾಸಾಯನಿಕಗಳಿಂದ ಕೂಡಿದೆ ಎನ್ನುವುದು ತಿಳಿದು ಬಂದಿತ್ತಲ್ಲದೇ ಅವು ಧರಿಸಲು ಯೋಗ್ಯವಲ್ಲದ್ದು ಎಂಬುದು ಸಾಬೀತಾಗಿತ್ತು. ಶುಕ್ರವಾರ ರಾಜಕಮಲ್ ರಸ್ತೆಯಲ್ಲಿರುವ ಕಚೇರಿಯ ಹೊರಗೆ ಈ ಹೆಲ್ಮೆಟ್ ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದರು.
ಬಳಿಕ ಮಾತನಾಡಿದ ಎಸಿಪಿ ಮಾದಯ್ಯ ಟ್ರಾಫಿಕ್ ಪೊಲೀಸರು ದಂಡ ಹಾಕುತ್ತಾರೆಂಬ ಭಯಕ್ಕೆ ದ್ವಿಚಕ್ರ ವಾಹನ ಸವಾರರು ಸಿಕ್ಕ ಸಿಕ್ಕ ಹೆಲ್ಮೆಟ್ ಗಳನ್ನು ಖರೀದಿಸಿ ವಾಹನ ಚಲಾಯಿಸುತ್ತಾರೆ. ಇದನ್ನು ಧರಿಸಿದರೂ ಒಂದೇ ಧರಿಸದಿದ್ದರೂ ಒಂದೇ. ವಾಹನ ಸವಾರರನ್ನು ಭಯ ಪಡಿಸಬೇಕು ಎಂದು ನಾವು ಕ್ರಮ ಕೈಗೊಂಡಿಲ್ಲ. ತಲೆಗೆ ಏಟು ಬಿದ್ದು ಅಪಘಾತ ಸಂಭವಿಸದಿರಲಿ ಎಂಬ ಉದ್ದೇಶದಿಂದ ಕ್ರಮ ಕೈಗೊಂಡಿದ್ದೇವೆ. ಆದರೆ ಐಎಸ್ ಐ ಗುರುತಿಲ್ಲದ ಇಂಥಹ ಹೆಲ್ಮೆಟ್ ಗಳಿಂದ ಅಪಾಯವೇ ಜಾಸ್ತಿ ಆದ್ದರಿಂದ ಸೂಕ್ತ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಎಂದು ಹೇಳಿದರು.
ಟ್ರಾಫಿಕ್ ಸಿಬ್ಬಂದಿ ಸೇರಿ ವಶಪಡಿಸಿಕೊಳ್ಳಲಾದ ಹೆಲ್ಮೆಟ್ ನ್ನು ಒಡೆದು ಅವುಗಳಿಗೆ ಮುಕ್ತಿ ನೀಡಿದರು.

  

00  ಸೊಸೆ ಸಾವಿನ ಸುದ್ದಿ ಕೇಳಿ ವಿಷ ಸೇವಿಸಿದ ಮಾವ
 ನವೆಂಬರ್-2
ಮೈಸೂರು: ನಾಪತ್ತೆಯಾಗಿದ್ದ ನವ ವಿವಾಹಿತೆ ನಾಲೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಈ ವಿಚಾರ ತಿಳಿದ ಮಾವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಏನಿದು ಘಟನೆ: ನವವಿವಾಹಿತೆ ರುಕ್ಮಿಣಿ (24) ಎಂಬುವಳು ನಾಲೆಯಲ್ಲಿ ಶವವಾಗಿ ಸಿಕ್ಕ ಮಹಿಳೆ. ನಗರದ ಹೊರವಲಯದ ಶಾದನಹಳ್ಳಿ ಗ್ರಾಮದ ರುಕ್ಮಿಣಿಯನ್ನು ಕಳೆದ 3 ತಿಂಗಳ ಹಿಂದೆಯಷ್ಟೇ ಶ್ರೀರಂಗಪಪಟ್ಟಣ ತಾಲೂಕಿನ ಪಾಲಹಳ್ಳಿಯ ಪುನೀತ್ ಜೊತೆ ವಿವಾಹ ಮಾಡಿಕೊಡಲಾಗಿತ್ತು.
ಮದುವೆಯಾದ ದಿನದಿಂದ ಗಂಡ ಪುನೀತ್ ಜೊತೆ ಜಗಳವಾಡುತ್ತಿದ್ದ ಈಕೆ ಕಳೆದ ತಿಂಗಳು 27ರಂದು ನಾಪತ್ತೆಯಾಗಿದ್ದಳು. ಈ ಸಂಬಂಧ ಗಂಡ ಪುನೀತ್ 28ರಂದು ನಗರದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ. ಆದರೆ, ನಿನ್ನೆ ಸಂಜೆ ವರುಣಾ ನಾಲೆಯಲ್ಲಿ ರುಕ್ಮಿಣಿಯ ಶವ ಪತ್ತೆಯಾಗಿದ್ದು, ಗ್ರಾಮಾಂತರ ಠಾಣೆ ಪೊಲೀಸರು ಶವವನ್ನ ನೀರಿನಿಂದ ಹೊರತೆಗೆದಿದ್ದಾರೆ.
ಮಾವ ಆತ್ಮಹತ್ಯೆ: ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ಮಗನ ಜೀವನ ಹಾಳಾಯಿತಲ್ಲವೆಂದು ಮರ್ಯಾದೆಗೆ ಅಂಜಿದ ಮಾವ ರಮೇಶ್ ಪಾಲಹಳ್ಳಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮತ್ತೊಂದೆಡೆ ರುಕ್ಮಿಣಿ ಸಹೋದರ ಪ್ರತಾಪ್ ತನ್ನ ಅಕ್ಕನ ಸಾವಿನ ಬಗ್ಗೆ ಅನುಮಾನವಿದೆ ಎಂದು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

 

                                                                                                                                                                                                                        

ಹೆಚ್ ಡಿ ಕೋಟೆ ಶಾಸಕ ಚಿಕ್ಕಮಾದು ಎಸ್ ಇನ್ನಿಲ್ಲ

ನವೆಂಬರ್.1
ಮೈಸೂರು: ಹೆಚ್ ಡಿ ಕೋಟೆ ಶಾಸಕ ಚಿಕ್ಕಮಾದು ಎಸ್ (68) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಒಂದು ವರ್ಷದಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು.
ಚಿಕ್ಕಮಾದು ಅವರ ಪತ್ನಿ ಜಯಮ್ಮ, ನಾಗಮ್ಮ ಮತ್ತು ನಾಲ್ವರು ಮಕ್ಕಳಿದ್ದಾರೆ. ಕೆ ಆರ್ ನಗರ ತಾಲೂಕಿನ ಹೊಸೂರು ಕಲ್ಲಲ್ಲಿ ಗ್ರಾಮದ ಚಿಕ್ಕಮಾದು ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿ ವಾಸವಿದ್ದರು. 1974ರಲ್ಲಿ ರಾಜಕೀಯಕ್ಕೆ ಧುಮುಕಿದ ಚಿಕ್ಕಮಾದು ದೇವರಾಜು ಅರಸು ನೇತೃತ್ವದಲ್ಲಿ ಬಿಳಿಕೆರೆ ಕ್ಷೇತ್ರದ ಜಿ.ಪಂ ಸದಸ್ಯರಾಗಿ ಆಯ್ಕೆಯಾಗಿದ್ದರು. 1991ರಲ್ಲಿ ಕಾಂಗ್ರೆಸ್ ನಿಂದ ಹುಣಸೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಬಳಿಕ ಜಿಟಿಡಿ ನೇತೃತ್ವದಲ್ಲಿ 2007-08 ರಲ್ಲಿ ಜೆಡಿಎಸ್ ಎಂಎಲ್ಸಿಯಾಗಿ, 2013ರಲ್ಲಿ ಹೆಚ್ ಡಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

  

11  ಕಾಂಗ್ರೆಸ್'ನ ಕೈಪಿಡಿ ಹಂಚಲು ಮಕ್ಕಳದ್ದೇ ಆಟ
 ಅಕ್ಟೋಬರ್ -30
ಮೈಸೂರು : ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿರುವ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಕಾಟಾಚಾರಕ್ಕೆ ಎಂಬಂತೆ ನಡೆಯುತ್ತಿದೆ. ಕೆಲವೆಡೆ ಕೈಪಿಡಿ ಹಂಚಲು ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ.
ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ಸಿಎಂ ತವರಲ್ಲಿ ಕಾಂಗ್ರೆಸ್ ಬಾವುಟವನ್ನು ಹಾರಿಸಲೇ ಬೇಕೆಂಬ ಹಠಕ್ಕೆ ಬಿದ್ದಿದ್ದು, ಇದೀಗ ಗ್ರಾಪಂ ಸದಸ್ಯರಿಂದ ಹಿಡಿದು ಶಾಸಕರ ತನಕ ಹಳ್ಳಿಗೆ ತೆರಳಿ ಸರ್ಕಾರದ ಸಾಧನೆಗಳ ಕೈಪಿಡಿಯನ್ನು ಮನೆಮನೆಗೆ ತಲುಪಿಸುತ್ತಿದ್ದಾರೆ. ಕೆಲವು ಹಳ್ಳಿಗಳ ಮನೆಮನೆಗೆ ತೆರಳುತ್ತಿರುವ ಕೆಲವರು ನಾಯಕರು ಒಂದಷ್ಟು ಕೈಪಿಡಿಯನ್ನು ವಿತರಿಸಿ ಬರುತ್ತಿದ್ದಾರೆ. ಹೆಚ್ಚಿನ ಕೈಪಿಡಿಗಳು ಮಕ್ಕಳ ಕೈಸೇರುತ್ತಿದ್ದು, ಅವರು ಅದನ್ನು ಹಿಡಿದು ಫೋಟೋಗಳಿಗೆ ಫೋಸ್ ನೀಡುತ್ತಿರುವುದು ಅಚ್ಚರಿ ಮೂಡಿಸುತ್ತಿದೆ.
ಮುಖ್ಯಮಂತ್ರಿಗಳ ಕ್ಷೇತ್ರ ವರುಣಾದಲ್ಲಿ ಕಾಂಗ್ರೆಸ್ನ ವತಿಯಿಂದ ಮನೆಮನೆಗೆ ಭೇಟಿ ಕಾರ್ಯಕ್ರಮ ಬಿರುಸಿನಿಂದ ಸಾಗುತ್ತಿದ್ದು, ಸರ್ಕಾರದ ಸಾಧನೆಗಳ ಕೈಪಿಡಿ ಮನೆಮನೆಗೆ ತಲುಪುತ್ತಿದೆ. ನಂಜನಗೂಡು ತಾಲೂಕು ವರುಣಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಎಪಿಎಂಸಿ ಸದಸ್ಯೆ ಲಕ್ಷ್ಮಮ್ಮರವರು ಚಾಲನೆ ನೀಡಿದ್ದು, ಸರ್ಕಾರದ ಸಾಧನೆಯ ಕೈಪಿಡಿಯನ್ನು ಜನರಿಗೆ ಹಂಚುವ ಮೂಲಕ ಕಾಂಗ್ರೆಸ್ನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡರು.
ಆದರೆ ಈ ಕಾರ್ಯಕ್ರಮದಲ್ಲಿ ವಯಸ್ಕರಿಗಿಂತ ಮಕ್ಕಳೇ ಇದ್ದದ್ದು ಅಚ್ಚರಿ ಮೂಡಿಸಿದೆ. ಮಕ್ಕಳೆಲ್ಲ ಕೈಪಿಡಿಯನ್ನು ಹಿಡಿದುಕೊಂಡು ಕೇಕೆ ಹಾಕುತ್ತಿದ್ದದ್ದು ಕಂಡು ಬಂದಿದೆ. ಇಷ್ಟಕ್ಕೂ ಮಕ್ಕಳಿಗೆ ಕೈಪಿಡಿಕೊಟ್ಟು ಫೋಟೋ ತೆಗೆಸಿಕೊಳ್ಳುವ ದರ್ದು ಮುಖಂಡರಿಗೇಕೆ ಬಂತು? ಎಂಬುದೇ ಅಚ್ಚರಿಯ ಪ್ರಶ್ನೆಯಾಗಿದೆ.

  

rr  ಕಾಂಗ್ರೆಸ್ ಟೀಕಿಸಿದ ಮೋದಿ ವಿರುದ್ದ ಸಿಎಂ ವಾಗ್ದಾಳಿ
 ಅಕ್ಟೋಬರ್-30
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಮೂರೂವರೆ ವರ್ಷದಲ್ಲಿ ಜನರಿಗೆ ಉಪಯೋಗವಾಗಬಲ್ಲ ಒಂದೇ ಒಂದು ಕಾರ್ಯಕ್ರಮ ಜಾರಿಗೆ ತಂದಿಲ್ಲ ಎಂದು ಆರೋಪಿಸಿದ್ದಾರೆ.
ಅಭಿವೃದ್ಧಿ ಪರ ಇರುವವರು ಯಾರು ಮತ್ತು ಅಭಿವೃದ್ಧಿಯ ವಿರೋಧಿಗಳು ಯಾರು ಎಂಬುದು ಕರ್ನಾಟಕದ ಜನರಿಗೆ ತಿಳಿದಿದೆ ಕಾಂಗ್ರೆಸ್ ಪಕ್ಷಕ್ಕೆ ದುರಹಂಕಾರ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಅಧಿಕಾರ ಮುಖ್ಯವಾಗಿದೆಯೇ ಹೊರತು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಜಾತ್ಯತೀತ ತತ್ವಗಳ ಮೇಲೆ ನಂಬಿಕೆ ಇಲ್ಲ ಎಂದು ತಿರುಗೇಟು ನೀಡಿದರು.
ರೈತರ ಸಾಲಮನ್ನಾ ಮಾಡುವಲ್ಲಿ ಎನ್ ಡಿಎ ಸರ್ಕಾರ ವಿಫಲವಾಗಿದೆ.ರಾಜ್ಯ ಸರ್ಕಾರ ಜನರಿಗಾಗಿ ಅನ್ನ ಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಅನೇಕ ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದಿದೆ, ಆದರೆ ಬಿಜೆಪಿ ಯಾವ ಅಭಿವೃದ್ಧಿ ಕಾರ್ಯ ಮಾಡಿದೆ ಎಂದು ಪ್ರಶ್ನಿಸಿದ್ದಾರೆ.

 

                                                                                                   

ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆ

ಅಕ್ಟೋಬರ್ -28

ಮೈಸೂರು: ಮೈಸೂರಿನಲ್ಲಿ ನ.24ರಿಂದ 26ರವರೆಗೆ ನಡೆಯುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಒಳಗೊಂಡ 13 ಸಮಿತಿಗಳನ್ನು ರಚನೆ ಮಾಡಲಾಗಿದೆ.
ಸರಕಾರಿ ಅತಿಥಿ ಗೃಹದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಸಮಿತಿಗಳನ್ನು ಪ್ರಕಟಿಸಲಾಯಿತು.
''ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿ ಸಮ್ಮೇಳನದ ಯಶಸ್ಸಿಗೆ ಯತ್ನಿಸಲಿದೆ. ಇದರ ಜತೆಗೆ ಸಮ್ಮೇಳನದಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಕಸಾಪ ಅಧ್ಯಕ್ಷರ ಹೆಸರಿನಲ್ಲಿ ಜಂಟಿ ಖಾತೆ ತೆಗೆಯಲಾಗುವುದು. ಇದರ ಜತೆಗೆ ಆಡಿಟ್ ಸಮಿತಿಯನ್ನೂ ರಚಿಸಲಾಗುವುದು,'' ಎಂದು ಜಿಲ್ಲಾಧಿಕಾರಿ ಡಿ ರಂದೀಪ್ ಹೇಳಿದರು.
''ಈ ಹಿಂದೆ ಸಮ್ಮೇಳನಕ್ಕಾಗಿ 5 ಕೋಟಿ ರೂ. ಅನುದಾನವನ್ನು ಕೋರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸರಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಸಮ್ಮೇಳನಕ್ಕೆ ಹೆಚ್ಚಿನ ಅನುದಾನ ಬೇಕಾಗುವ ಕಾರಣದಿಂದ 10 ಕೋಟಿ ರೂ.ಗಳ ಅನುದಾನವನ್ನು ಕೋರಿ ಸರಕಾರಕ್ಕೆ ಪತ್ರ ಬರೆಯಲಾಗುವುದು,'' ಎಂದು ಜಿಲ್ಲಾಧಿಕಾರಿ ತಿಳಿಸಿದರು.

  

66   ಮೈಸೂರು ಮೃಗಾಲಯಕ್ಕೆ ನುಗ್ಗಿದ ಚಿರತೆ
 ಅಕ್ಟೋಬರ್ -26
ಮೈಸೂರು : ಮೈಸೂರು ಮೃಗಾಲಯದಿಂದ ಯಾವುದೇ ಚಿರತೆ ತಪ್ಪಿಸಿಕೊಂಡಿಲ್ಲ. ಬೇರೆ ಕಡೆಯಿಂದ ಬಂದ ಚಿರತೆ ಮೃಗಾಲಯಕ್ಕೆ ನುಗ್ಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಚಾಮುಂಡಿ ಬೆಟ್ಟದಿಂದ ಬಂದ ಚಿರತೆ ಮೃಗಾಲಯಕ್ಕೆ ನುಗ್ಗಿ ಮರವೇರಿ ಕುಳಿತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅರವಳಿಕೆ ಮದ್ದು ನೀಡಿ ಚಿರತೆ ಸೆರೆ ಹಿಡಿಯಲಯ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಹಿಂದಿನ ಸುದ್ದಿ : ಮೈಸೂರು ಮೃಗಾಲಯ ದಿಂದ ಚಿರತೆ ತಪ್ಪಿಸಿಕೊಂಡಿದ್ದು, ಆತಂಕ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಮೃಗಾಲಯದ ಸಿಬ್ಬಂದಿ ಚಿರತೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ.
ಗುರುವಾರ ಬೆಳಗ್ಗೆ ಮೃಗಾಲಯದ ಬೋನಿನಿಂದ ಚಿರತೆ ತಪ್ಪಿಸಿಕೊಂಡು ಹೊರ ಬಂದಿದ್ದು, ಮೃಗಾಲಯದ ಆವರಣದಲ್ಲಿನ ಮರವೇರಿ ಕುಳಿತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೃಗಾಲಯಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ.
ಶ್ರೀ ಚಾಮರಾಜೇಂದ್ರ ಮೃಗಾಲಯ ಮೈಸೂರು ಮೃಗಾಲಯ ಎಂದೇ ಪ್ರಸಿದ್ಧಿ ಪಡೆದಿದೆ. ನೂರಾರು ಪ್ರವಾಸಿಗರು ಪ್ರತಿದಿನ ಮೃಗಾಲಯಕ್ಕೆ ಭೇಟಿ ನೀಡುತ್ತಾರೆ. ಗುರುವಾರ ಬೆಳಗ್ಗೆ ಚಿರತೆ ಬೋನಿನಿಂದ ತಪ್ಪಿಸಿಕೊಳ್ಳುವಾಗ ಕೆಲವು ಪ್ರವಾಸಿಗರು ಮೃಗಾಲಯದ ಒಳಗಿದ್ದರು ಎಂದು ತಿಳಿದುಬಂದಿದೆ.

  

uu    ಮನೆ ಛಾವಣಿ ಕುಸಿದು ವ್ಯಕ್ತಿ ಸಾವು
 ಅಕ್ಟೋಬರ್-24
ಮೈಸೂರು: ಮನೆಯ ಛಾವಣಿ ಕುಸಿದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟು ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ಮಂಡಿಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೊಪ್ಪಿನ ಬೀದಿಯ ನಿವಾಸಿ ನಾಗೇಶ್ (45) ಮೃತಪಟ್ಟ ದುರ್ದೈವಿ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ನಾಗೇಶ್ ಅವರ ಮನೆ ಶಿಥಿಲಗೊಂಡಿತ್ತು. ಇಂದು ಮುಂಜಾನೆ ಮನೆಯವರೆಲ್ಲಾ ಮಲಗಿದ್ದ ವೇಳೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದ್ದೇ ಛಾವಣಿ ಬಿದ್ದ ಶಬ್ದಕ್ಕೆ ಅಕ್ಕಪಕ್ಕದ ಮನೆಯವರು ಬಂದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಅಗ್ನಿಶಾಮಕದಳದವರು ಮತ್ತು ಮಹಾನಗರ ಪಾಲಿಕೆಯ ಅಭಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಅವಶೇಷಗಳಡಿ ಸಿಲುಕಿದೆ. ನಾಲ್ವರು ಮಕ್ಕಳನ್ನು ರಕ್ಷಿಸಿದ್ದು, ನಾಗೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮಂಡಿ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  

hh

 


ಕುಡಿದ ಅಮಲಿನಲ್ಲಿ ಸ್ನೇಹಿತನ ಹತ್ಯೆ

ಅಕ್ಟೋಬರ್ 23
ಮೈಸೂರು : ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಯುವಕನ ಹತ್ಯೆ ನಡೆದಿರುವ ಘಟನೆ ಹುಣಸೂರಿನಲ್ಲಿ ನಡೆದಿದೆ. ತಾಲೂಕಿನ ಚಲ್ಲಹಳ್ಳಿ ಗ್ರಾಮದ ಯೋಗೇಶ್ (28) ಕೊಲೆಯಾದ ಯುವಕ. ನಿನ್ನೆ ರಾತ್ರಿ ಕುಡಿದು ವಾಪಸ್ ಬರುವ ಸಂದರ್ಭದಲ್ಲಿ ಸ್ನೇಹಿತರು ಜಗಳ ತೆಗೆದಿದ್ದಾರೆ. ಈ ವೇಳೆ ಯೋಗೇಶನ ಕೈ, ಕಾಲುಗಳನ್ನು ಕಟ್ಟಿ ಕತ್ತನ್ನು ತಿರುಗಿಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಗ ರಾತ್ರಿಯಾದರೂ ಮನೆಗೆ ಬಾರದ್ದರಿಂದ ಗಾಬರಿಗೊಂಡ ತಂದೆ ಹುಡುಕಲು ಆರಂಭಿಸಿದಾಗ ಕೊಲೆಯಾಗಿರುವ ವಿಷಯ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಳಿಕೆರೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
 

  

22

 5 ನೇ ಮದುವೆಯಾಗುವಾಗ ಸಿಕ್ಕಿಬಿದ್ದ ಸೈನಿಕ
 ಅಕ್ಟೋಬರ್-23
ಮೈಸೂರು: ಒಂದಲ್ಲ, ಎರಡಲ್ಲ ನಾಲ್ವರನ್ನು ಮದುವೆಯಾಗಿದ್ದ ಸೈನಿಕನೊಬ್ಬ 5 ನೇ ಮದುವೆಯಾಗುವ ಸಂದರ್ಭದಲ್ಲಿ ಸಿಕ್ಕಿಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ. ಮದುವೆ ಮಂಟಪಕ್ಕೆ ಬಂದ ಮೊದಲ ಪತ್ನಿ ಆತನ ಬಣ್ಣ ಬಯಲು ಮಾಡಿದ್ದಾರೆ. ಜಮ್ಮುವಿನಲ್ಲಿ ಸೇವೆಯಲ್ಲಿರುವ ಸಾಲಿಗ್ರಾಮ ಸಮೀಪದ ಲಕ್ಕಿಕೊಪ್ಪ ಗ್ರಾಮದ ಯೋಧ 2007 ರಲ್ಲಿ ಮೊದಲ ಮದುವೆಯಾಗಿದ್ದು 9 ವರ್ಷದ ಮಗಳಿದ್ದಾಳೆ.
ಮೊದಲ ಮದುವೆಯಾಗಿದ್ದನ್ನು ಮುಚ್ಚಿಟ್ಟಿದ್ದ ಈತ ಬಳಿಕ ತಾನು ಲೆಕ್ಚರರ್, ಪೊಲೀಸ್ ಇನ್ಸ್ ಪೆಕ್ಟರ್, ಲಾಯರ್ ಎಂದು ಹೇಳಿಕೊಂಡು 3 ಮದುವೆಯಾಗಿದ್ದಾನೆ.ನಾಲ್ವರನ್ನು ಮದುವೆಯಾಗಿದ್ದ ಭೂಪ ಇಂದು ಬೆಳಿಗ್ಗೆ ಮೈಸೂರಿನ ದೇವಾಲಯದಲ್ಲಿ ಮತ್ತೊಂದು ಮದುವೆಯಾಗುವಾಗ, ಮೊದಲ ಪತ್ನಿ ಆಗಮಿಸಿದ್ದಾರೆ. ತನ್ನ ಪತಿಯ ಬಣ್ಣವನ್ನು ಬಯಲು ಮಾಡಿದ್ದಾರೆ. ತನಗೆ ಡೈವೋರ್ಸ್ ಕೊಡದೇ ಮತ್ತೊಂದು ಮದುವೆಯಾಗಿದ್ದಾನೆ ಎಂದು ದೂರಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೈನಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

 

 

Ads
;