ದೂರವಾಣಿ : 080-69999676
ಇಮೇಲ್ : Info@Vijayataranga.com


 

33  100ನೇ ಹುಟ್ಟುಹಬ್ಬ ಆಚರಿಸಿಕೊಂಡ ಅಜ್ಜಿ
 ಡಿಸೆಂಬರ್-26
ರಾಯಚೂರು: ಈ ಹಿರಿಯ ಜೀವಕ್ಕೆ ನೂರರ ಹರೆಯ. ಅಜ್ಜಿಯ ಜನ್ಮ ದಿನದ ನೆಪದಲ್ಲಿ ಅಲ್ಲಿ ಸಂಭ್ರಮವೇ ಮನೆ ಮಾಡಿತ್ತು. ಅಲ್ಲಿ ಸೇರಿದ್ದ ಕುಟುಂಬ ಸದಸ್ಯರೆಲ್ಲರೂ ಅಜ್ಜಿಯ ಹುಟ್ಟುಹಬ್ಬವನ್ನು ಮನೆ ಹಬ್ಬದಂತೆ ಆಚರಿಸಿ ಸಂಭ್ರಮಿಸಿದರು.
ಇತ್ತಿಚೇಗೆ ವೃದ್ಧ ತಂದೆ-ತಾಯಿಗಳನ್ನು ಆಶ್ರಮಗಳಿಗೆ ಸೇರಿಸುವ ಸಂಪ್ರದಾಯ ಹೆಚ್ಚಾಗುತ್ತಿದೆ. ಆದರೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಡೋಣಿ ಗ್ರಾಮದ ಶತಾಯುಷಿ ಶಾಂತಮ್ಮ ಹಿರೇಮಠ್ ಅವರೆಂದರೆ ಅವರ ಕುಟುಂಬಕ್ಕೆ ಎಲ್ಲಿಲ್ಲದ ಅಕ್ಕರೆ ಹಾಗಾಗಿಯೇ ಅವರ ಹುಟ್ಟುಹಬ್ಬವನ್ನು ಕುಟುಂಬ ಸದಸ್ಯರೆಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸಿದರು.
ಅಜ್ಜಿಯ ಹುಟ್ಟು ಹಬ್ಬಕ್ಕಾಗಿ ಬಂಧು-ಬಳಗ, ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಗಿರಿ ಮೊಮ್ಮಕ್ಕಳು ಕೂಡ ಯರಡೋಣಿಯಲ್ಲಿ ಸೇರಿದ್ದರು. 100ರ ಹರೆಯದ ಶಾಂತಮ್ಮ ಹಿರೇಮಠ್, ಸಸಿಗೆ ನೀರು ಹಾಕಿ-ಕೇಕ್ ಕತ್ತರಿಸಿ ತನ್ನ ಐದನೇ ತಲೆಮಾರಿನ ಜೊತೆ ಜನ್ಮದಿನ ಆಚರಿಸಿಕೊಂಡರು.
ಶಾಂತಮ್ಮ ಹಿರೇಮಠ್ ಅವರ ಹುಟ್ಟಿದ ವರ್ಷ ಅಂದಾಜು 1917. ಏಳು ಮಕ್ಕಳ ಪೈಕಿ ಮೂವರು ಗಂಡು, ನಾಲ್ವರು ಹೆಣ್ಣು. 34 ಮೊಮ್ಮಕ್ಕಳು, 34 ಮರಿಮಕ್ಕಳು, ಇಬ್ಬರು ಗಿರಿ ಮೊಮ್ಮಕ್ಕಳು ಸೇರಿದಂತೆ ಒಟ್ಟು 77 ಜನರ ದೊಡ್ಡ ಕುಟುಂಬ.
ಮಕ್ಕಳು, ಮೊಮ್ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿರುವ ಶತಾಯುಷಿ ಶಾಂತಜ್ಜಿಯ ಪುತ್ರ ವೈದ್ಯವೃತ್ತಿಯಲ್ಲಿದ್ದಾರೆ. ಶಿಕ್ಷಣವೇ ಶಕ್ತಿ ಎಂಬುದನ್ನು ಬಹಳ ಹಿಂದೆಯೇ ಅರಿತಿದ್ದ ಶಾಂತಜ್ಜಿ ತನ್ನ ಎಲ್ಲಾ ಮಕ್ಕಳಿಗೂ ಶಿಕ್ಷಣ ಕೊಡಿಸಿದ್ದಾರೆ, ಮೊಮ್ಮಕ್ಕಳನ್ನೂ ಓದಿಸಲು ನೆರವು ನೀಡಿದ್ದಾಳೆ. ಇದಕ್ಕಾಗಿ ಇಂದು ಇಡೀ ಕುಟುಂಬವೇ ಅಜ್ಜಿಯನ್ನು ಸ್ಮರಿಸುತ್ತದೆ.
ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿದ ಶಾಂತಮ್ಮ, ಭೂತಾಯಿಯ ಜೊತೆಗಿನ ನಂಟಿನಲ್ಲೇ ಜೀವನ ಸಾಗಿಸಿದಾಕೆ. ಅಜ್ಜಿಯ ಆರೋಗ್ಯದ ಗುಟ್ಟಿನ ಬಗ್ಗೆ ಕೇಳಿದರೆ ಕಾಳುಗಳು, ತರಕಾರಿಯ ಸೇವನೆ ಜೊತೆಗೆ ಶ್ರಮದಾನವೇ ಆರೋಗ್ಯದ ಗುಟ್ಟು ಎನ್ನುತ್ತಾಳೆ.
ನೂರರ ಹೊಸ್ತಿಲ್ಲೂ ಆರೋಗ್ಯವಾಗಿರುವ ಶಾಂತಜ್ಜಿಗೆ ಮಕ್ಕಳು-ಮೊಮ್ಮಕ್ಕಳು, ಕುಟುಂಬಸ್ಥರು ಎಂದರೆ ಎಲ್ಲಿಲ್ಲದ ಪ್ರೀತಿ. ನೆನಪಿನ ಶಕ್ತಿ ಮಂಕಾಗಿ ವ್ಯಕ್ತಿಗಳನ್ನು ಗುರುತಿಸುವುದು ಸ್ವಲ್ಪ ಕಷ್ಟವಾದರೂ ಖಡಕ್ ಧ್ವನಿ, ಕಿವಿ, ಕಣ್ಣು ಈಗಲೂ ಸರಿಯಾಗಿಯೇ ಕಾರ್ಯನಿರ್ವಹಿಸುತ್ತಿವೆ. ಅಜ್ಜಿಯ ನೂರನೇ ಹುಟ್ಟುಹಬ್ಬದಲ್ಲಿ 70ಕ್ಕೂ ಹೆಚ್ಚು ಕುಟುಂಬ ಸದಸ್ಯರು ಭಾಗಿಯಾಗಿ ಅಜ್ಜಿಯ ಆಶೀರ್ವಾದ ಪಡೆದರು.

 

 

44   ಮಂತ್ರಾಲಯಕ್ಕೆ ಮಾಜಿ ಸಚಿವ ರೆಡ್ಡಿ ಭೇಟಿ
 ಡಿಸೆಂಬರ್-21
ರಾಯಚೂರು: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಪತ್ನಿ ಅರುಣಾ ಜೊತೆ ಆಗಮಿಸಿದ ಜನಾರ್ಧನ ರೆಡ್ಡಿ ಶ್ರೀ ಮಂಚಾಲಮ್ಮ, ಆಂಜನೇಯ ಹಾಗೂ ರಾಘವೇಂದ್ರ ಸ್ವಾಮಿಯ ಆಶೀರ್ವಾದ ಪಡೆದರು. ಬಳಿಕ ಮಠದ ಪ್ರಾಂಗಣದಲ್ಲಿ ಪತ್ನಿಯ ಜೊತೆ ಕುಳಿತು ಭಕ್ತಿ ಗೀತೆಗಳನ್ನು ಕೇಳಿದರು. ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥರ ಜೊತೆ ಚರ್ಚಿಸಿದ ಬಳಿಕ ಪ್ರಸಾದ ಸೇವಿಸಿದರು.

 

 

   ಗಗಗ            ಹಿಟ್ ಆಂಡ್ ರನ್ ಕೇಸ್ ಇಲ್ಲ: ಸಿದ್ದು
ಡಿಸೆಂಬರ್.15
ರಾಯಚೂರು: ಮಾಜಿ ಸಿಎಂ ಕುಮಾರಸ್ವಾಮಿ ಅವರದು ಹಿಟ್ ಆ್ಯಂಡ್ ರನ್. ಕಾಂಗ್ರೆಸ್ ಸರಕಾರದಲ್ಲಿ ಯಾವುದೇ ಹಗರಣ ನಡೆದಿಲ್ಲ. ದಾಖಲೆಗಳೂ ಅವರ ಬಳಿಯಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮಾನ್ವಿಯಲ್ಲಿ ಮಾತನಾಡಿದ ಅವರು, ಕೆಇವಿಎಂಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕೇಂದ್ರ ಸರಕಾರ ಬಳಸಿಕೊಳ್ಳಲು ಯಂತ್ರದಲ್ಲಿ ಅವಕಾಶವಿದೆ. ಕೇಂದ್ರ ಚುನಾವಣೆ ಆಯೋಗವು ಕೇಂದ್ರ ಸರಕಾರದ ನಿಯಂತ್ರಣದಲ್ಲಿದೆ. ಕೇಂದ್ರದಲ್ಲಿ ಬಿಜೆಪಿ ತೊಲಗಿದ ನಂತರವೇ ಜನತೆಗೆ ಅಚ್ಛೆ ದಿನ್ ಬರುತ್ತದೆ ಎಂದರು.
ಪರಿವರ್ತನಾ ಯಾತ್ರೆಯಲ್ಲಿ ತಮ್ಮ ವಿರುದ್ಧ ಯಡಿಯೂರಪ್ಪ ಅಸಂವಿಧಾನಿಕ ಪದ ಬಳಕೆಗೆ ಸಿಎಂ ಆಕ್ಷೇಪ ವ್ಯಕ್ತಪಡಿಸಿದರು. 'ನಾನು ಹಳ್ಳಿ ಮೂಲದವನು. ನಾನೂ ಕೆಟ್ಟ ಪದ ಬಳಸಬಹುದು. ಆದರೆ ಹಾಗೆ ಮಾಡುವುದಿಲ್ಲ. ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯ ಎಕ್ಸಿಟ್ ಪೋಲ್ ಅಂತಿಮವಲ್ಲ. ಅನೇಕ ಬಾರಿ ಅಂಥ ಸಮೀಕ್ಷೆ ಸುಳ್ಳಾಗಿವೆ. ಅಲ್ಲಿನ ಚುನಾವಣೆ ಫಲಿತಾಂಶ ರಾಜ್ಯದ ಚುನಾವಣೆಯ ದಿಕ್ಸೂಚಿಯಲ್ಲ ಎಂದರು.
ನಮ್ಮ ಸರಕಾರ ಈಗ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಎರಡು ತಿಂಗಳಾಯಿತು. ದೇವರಾಜ್ ಅರಸರ ನಂತರ ನಾನೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿದ್ದೇನೆ. ನನಗೆ ತೊಡರಗಾಲು ಹಾಕಲು ಪ್ರತಿಪಕ್ಷಗಳು ಯತ್ನಿಸಿದವು, ಅವರ ಆಟ ನಡೆಯಲಿಲ್ಲ. ಬಸವಣ್ಣ, ಕನಕದಾಸರಂಥವರ ಆದರ್ಶಗಳನ್ನು ಅಳವಡಿಸಿಕೊಂಡು ಅಧಿಕಾರ ನಡೆಸುತ್ತಿದ್ದೇನೆ. ಯಡಿಯೂರಪ್ಪ ತಮಟೆ ಹೊಡೆದುಕೊಂಡು ಪರಿವರ್ತನಾ ಯಾತ್ರೆಲಿ ಹೊರಟಿದ್ದಾರೆ. ಎಲ್ಲಾ ಕಡೆ ಸಿಎಂ ಹಗರಣಗಳನ್ನು ಒಂದೊಂದೇ ಬಿಚ್ಚಿಡುತ್ತೇನೆ ಎಂದಿದ್ದವರು ಕೇವಲ ಪುಂಗಿ ಊದುತ್ತಿದ್ದಾರೆ. ಜೈಲಿಗೆ ಹೋಗಿದ್ದವರಿಗೆ ನನ್ನ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇದೆಯೇ ಎಂದು ಸಿಎಂ ಪ್ರಶ್ನಿಸಿದರು.
ಬಿಜೆಪಿ ಸಚಿವರು ಶಾಸಕರು ಬೀಗತನ ಮಾಡಲು ಜೈಲಿಗೆ ಹೋಗಿದ್ದೇ, ಇಂಥವರಿಗೆ ಮತ್ತೆ ಮತ ಹಾಕಬೇಕಾ ಎಂದು ಸಿದ್ದರಾಮಯ್ಯ ಕೇಳಿದರು.

 

444  ಕೆಜೆಪಿ ಪಕ್ಷ ಬಿಜೆಪಿಯೊಂದಿಗೆ ವಿಲೀನವಾಗಿಲ್ಲ : ಪ್ರಸನ್ನ
 ನವೆಂಬರ್-29
 ರಾಯಚೂರು : ಕೆಜೆಪಿ ಪಕ್ಷ ಬಿಜೆಪಿಯಲ್ಲಿ ವಿಲೀನ ಆಗಿಲ್ಲ ಎಂದು ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್  ತಿಳಿಸಿದ್ದಾರೆ.
 ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಜೆಪಿ ಬಿಜೆಪಿಯಲ್ಲಿ ವಿಲೀನವಾಗಿದೆ ಎಂದು ಬಿಜೆಪಿ ನಾಯಕರು  ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಕೆಜೆಪಿ ರಾಜ್ಯಾಧ್ಯಣಕ್ಷ ಪದ್ಮನಾಭ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
 ಕೆಜೆಪಿ ಪಕ್ಷದ ತೆಂಗಿನಕಾಯಿ ಚಿನ್ಹೆ ನಮ್ಮಲ್ಲೇ ಇದೆ. ಶಾಸಕರಾದ ಬಿ.ಆರ್. ಪಾಟೇಲ್, ಗುರು ಪಾಟೇಲ್ ಕೆಜೆಪಿ ಪಕ್ಷದಲ್ಲಿಯೇ  ಇದ್ದಾರೆ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಯುವಕರು, ಮಹಿಳೆಯರಿಗೆ ಆದ್ಯತೆ  ನೀಡುವುದಾಗಿ ಅವರು ಹೇಳಿದ್ದಾರೆ.

 

 

 

     

ಬಿಕಾಂ ಪ್ರಶ್ನೆ ಪ್ರತಿಕೆ ಸೋರಿಕೆ: ಗುಲ್ಬರ್ಗಾ ವಿ ವಿವಿ ಯಡವಟ್ಟು

ನವೆಂಬರ್-9
ರಾಯಚೂರು: ಗುಲ್ಬರ್ಗಾ ವಿ ವಿವಿಯ ಪದವಿ ಪರೀಕ್ಷೆಗಳು ನಡೀಯುತ್ತಿವೆ, ಈ ನಡುವೆ ಎರಡು ದಿನಗಳ ಹಿಂದೆಯಷ್ಟೇ ಬಿ.ಕಾಂ 3ನೇ ಸೇಮಿಸ್ಟರ್ ನ ಸಂಖ್ಯಾಶಾಸ್ತ್ರ ಪತ್ರಿಕೆ ಪರೀಕ್ಷೆಗೆ ನಡಯುವ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈಗ ಪುನಃ ಬಿ.ಕಾಂ. ಮೂರನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ ಬಹಿರಂಗವಾಗಿದ್ದು ವಿದ್ಯಾರ್ಥಿಗಳು ಆತಂಕಕ್ಕೆ ಕಾರಣವಾಗುತ್ತಿದೆಇಂದು ಮಧ್ಯಾಹ್ನ 2 ಗಂಟೆಗೆ ನಡೆಯಬೇಕಾಗಿದ್ದ `ಸ್ಮಾಲ್ ಬಿಸಿನೆಸ್ ಮ್ಯಾನೇಜ್ಮೆಂಟ್' ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಸೋರಿಕೆಯಾದ ಪ್ರಶ್ನೆ ಪತ್ರಿಕೆ ರಾಯಚೂರು ಸೇರಿದಂತೆ ವಿವಿ ವಿದ್ಯಾರ್ಥಿಗಳ ವಾಟ್ಸಪ್ನಲ್ಲಿ ಹರಿದಾಡುತ್ತಿದೆ. ಇದೇ ವೇಳೆ ವಿವಿ ಈ ಹಿಂದೆ ಸ್ಟಾಟಿಸ್ಟಿಕ್ಸ್ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿತ್ತು.ಇನ್ನು ಇಂದು ನಡೆಯಬೇಕಾಗಿದ್ದ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಆಗಿದ್ದರಿಂದ ಸ್ಮಾಲ್ ಬಿಸಿನೆಸ್ ಮ್ಯಾನೇಜ್ಮೆಂಟ್ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಗುಲ್ಬರ್ಗಾ ವಿವಿ ಕುಲಪತಿ ಎಸ್.ನಿರಂಜನ್ ಆದೇಶ ಹೊರಡಿಸಿದ್ದಾರೆ.

 

00  ಮೊಬೈಲ್ ಅಂಗಡಿ ಶಟರ್ ಮುರಿದು ಕಳ್ಳತನ
 ನವೆಂಬರ್-4
ರಾಯಚೂರು : ಮೊಬೈಲ್ ಅಂಗಡಿ ಶಟರ್ ಮುರಿದು 20 ಸಾವಿರ ರೂ. ಹಾಗೂ ಲಕ್ಷಾಂತರ ರೂ. ಮೌಲ್ಯದ ಮೊಬೈಲ್ ಕಳ್ಳತನ ಮಾಡಲಾಗಿದ್ದು, ಕಳ್ಳನ ಕೈಚಳಕ ಸಿಸಿಟಿಯಲ್ಲಿ ಸೆರೆಯಾಗಿದೆ.
ರಾಯಚೂರು ಚಿಲ್ಲೆ ಲಿಂಗಸುಗೂರು ತಾಲ್ಲೂಕಿನ ನಾಗರಾಳ ಗ್ರಾಮದಲ್ಲಿನ ಅನುಷಾ ಮೊಬೈಲ್ ಸೆಂಟರ್ ಗೆ ಕಳ್ಳರು ದಾಳಿ ನಡೆಸಿದ್ದಾರೆ. ರಾತ್ರಿ ಅಂಗಡಿ ಶೆಟರ್ ಮುರಿದು ಒಳಗೆ ಹೋಗಿರುವ ಕಳ್ಳ, ಡ್ರಾದಲ್ಲಿದ್ದ ಹಣ, ಬೆಲೆ ಬಾಳುವ ಮೊಬೈಲ್ ಗಳನ್ನು ಕದ್ದು ಪರಾರಿಯಾಗಿದ್ದಾನೆ.
ಮುದಗಲ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸಿಸಿ ಟಿವಿ ಆಧಾರದ ಮೇಲೆ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

 

 

 

33  ರಾಜಕೀಯ ಬಗ್ಗೆ ನಟಿ ಪೂಜಾಗಾಂಧಿ ಹೇಳಿದ್ದೇನು
 ನವೆಂಬರ್-3
ರಾಯಚೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ಹಿನ್ನಲೆಯಲ್ಲಿ ನಟಿ ಪೂಜಾ ಗಾಂಧಿ ರಾಯಚೂರಿನ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನಗರದ 2ನೇ ಜೆಎಂಎಫ್ ನ್ಯಾಯಾಲಯದಲ್ಲಿ ಗುರುವಾರ ಮಧ್ಯಾಹ್ನ ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಧೀಶರು ನವೆಂಬರ್ 10ಕ್ಕೆ ವಿಚಾರಣೆಯನ್ನ ಮುಂದೂಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಎಸ್ಆರ್ ಪಕ್ಷದಿಂದ ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪೂಜಾ ಅವರು ಚುನಾವಣಾ ಪ್ರಚಾರಕ್ಕೆ ಪರವಾನಿಗೆ ಇಲ್ಲದ ವಾಹನ ಬಳಸಿದ್ದಕ್ಕೆ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನ್ಯಾಯಲಯಕ್ಕೆ ಹಾಜರಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ಪೂಜಾಗಾಂಧಿ, ನ್ಯಾಯಾಲಯದ ಬಗ್ಗೆ ನನಗೆ ಗೌರವವಿದೆ.
ಎಲೆಕ್ಷನ್ ಟೈಂನಲ್ಲಿ ನನ್ನ ವಿರುದ್ದ ಯಾರೋ ಪಿತೂರಿ ಮಾಡಿ ಪ್ರಕರಣ ದಾಖಲಿಸಿದ್ದಾರೆ ಎಂದರು. ಇನ್ನು ಮತ್ತೆ ರಾಜಕೀಯ ಪ್ರವೇಶ ಮಾಡುತ್ತೀರೋ ಅನ್ನೋ ಪ್ರಶ್ನೆಗೆ ಉತ್ತರಿಸಿದ ಮಳೆ ಹುಡುಗಿ, ಸದ್ಯ ರಾಜಕೀಯಕ್ಕಿಂತ ಸಿನಿಮಾಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ. ಶೀಘ್ರದಲ್ಲಿ ದಂಡುಪಾಳ್ಯ 3 ಸಿನಿಮಾ ಬಿಡುಗಡೆಯಾಗಲಿದ್ದು, ತಾಯಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ ಎಂದು ಹೇಳುವ ಮೂಲಕ ರಾಜಕೀಯಕ್ಕಿಂತ, ಸಿನಿಮಾವೇ ವಾಸಿ ಎಂದು ಹೇಳಿದರು

  

 

  

ಭ್ರಷ್ಟಾಚಾರಮುಕ್ತ ಆಡಳಿತ- ಸರಕಾರ ಬದ್ಧ

ನವೆಂಬರ್-2

ರಾಯಚೂರು: ಭ್ರಷ್ಟಾಚಾರ ಮುಕ್ತ ಪಾರದರ್ಶಕ ಮತ್ತು ಜನರಿಗೆ ಉತ್ತರದಾಯಿಯಾದ ಆಡಳಿತವನ್ನು ರಾಜ್ಯ ಸರಕಾರ ನೀಡಲು ಬದ್ಧವಾಗಿದ್ದು, ಸರ್ವರನ್ನೂ ಒಳಗೊಂಡ ಉತ್ತಮ ಸಮಾಜ ನಿರ್ಮಾಣವೇ ಸರಕಾರದ ಗುರಿಯಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದರು.
ಅವರು ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಬುಧವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಗೌರವ ಸ್ವೀಕರಿಸಿ ಮಾತನಾಡಿ, ರಾಜ್ಯದ ಸಮಗ್ರ ಪ್ರಗತಿಗೆ ಸರಕಾರ ನಾನಾ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುತ್ತಿದೆ. ಜನರಿಗೆ ಉತ್ತಮ ಆಡಳಿತ ನೀಡುವ ಮೂಲಕ ಸಕಲರ ಏಳಿಗೆಗೆ ಮುಂದಾಗಿದೆ ಎಂದು ಹೇಳಿದರು.
                                                                                                                                  

 

 

 

  

                ಟಿಯುಸಿಐನಿಂದ ಪುರಸಭೆ ಮುಂದೆ ಧರಣಿ

ಅಕ್ಟೋಬರ್.31

ಮಸ್ಕಿ: ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 65 ಸಿಬ್ಬಂದಿಗೆ 4 ತಿಂಗಳ ವೇತನ ಹಾಗೂ 8 ತಿಂಗಳ ಹಿಂಬಾಕಿ ವೇತನ ಪಾವತಿಸುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಟಿಯುಸಿಐನಿಂದ ಪುರಸಭೆ ಕಾರ್ಯಾಲಯದ ಮುಂದೆ ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು.
ಧರಣಿ ನಿರತರನ್ನು ಉದ್ದೇಶಿಸಿ ಟಿಯುಸಿಐ ರಾಜ್ಯ ಉಪಾಧ್ಯಕ್ಷ ಚಿನ್ನಪ್ಪ ಕೊಟ್ರಿಕಿ ಮಾತನಾಡಿ, ಪುರಸಭೆ ಮುಖ್ಯಾಧಿಕಾರಿಗಳಿಗೆ ಸಿಬ್ಬಂದಿಗಳ 4 ತಿಂಗಳ ವೇತನ ಹಾಗೂ 8 ತಿಂಗಳ ಹಿಂಬಾಕಿ ವೇತನ ಪಾವತಿಸದಿದ್ದರೆ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದು 5 ಬಾರಿ ಪತ್ರ ಬರೆಯಲಾಗಿದ್ದರೂ, ಯಾವುದೇ ರೀತಿಯ ಪ್ರತಿಕ್ರಿಯೆ ಬರದ ಕಾರಣ ಅನಿವಾರ್ಯವಾಗಿ ಹೋರಾಟ ನಡೆಸಲಾಗುತ್ತಿದೆ. ಕಳೆದ ಆಗಸ್ಟ್ನಲ್ಲಿ ವೇತನ ಹಾಗೂ ಹಿಂಬಾಕಿ ಪಾವತಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಮುಷ್ಕರ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿಗಳು 2ಹಂತದಲ್ಲಿ ವೇತನ ಹಾಗೂ ಹಿಂಬಾಕಿ ಪಾವತಿಸಲಾಗುತ್ತದೆ ಎಂದು ಪತ್ರ ಬರೆದಿದ್ದರಿಂದ ಮುಷ್ಕರವನ್ನು ಕೈ ಬಿಡಲಾಗಿತ್ತು. ಆದರೆ ವೇತನ ಪಾವತಿಗೆ ನೀಡಿದ್ದ ಗಡುವು ಮುಗಿದಿದೆ. ಪೌರ ಕಾರ್ಮಿಕರಿಕೆ 4 ತಿಂಗಳ ವೇತನ ಪಾವತಿಸಲು ಪುರಸಭೆಯಲ್ಲಿ ಅನುದಾನವಿಲ್ಲವೆಂದು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
                                                                                                                       

 

 

 

 

 

 

 

                                                                                                                                                             

ನೋಟ್ಬ್ಯಾನ್ ನಿಷೇಧ ಅಲ್ಲ: ಮೇಧಾ ಪಾಟ್ಕರ್

ಅಕ್ಟೋಬರ್.30

ರಾಯಚೂರು: ಬಡವರು, ದಲಿತರು, ರೈತರು ಮದ್ಯ ನಿಷೇಧ ಬಯಸಿದ್ದರೆ, ನೋಟು ಅಮಾನ್ಯೀಕರಣವನ್ನಲ್ಲ. ಬಡವರ ಶೋಷಣೆ ಮೂಲಕ ಸರಕಾರಗಳು ಗಳಿಸುವ ಆದಾಯದಿಂದ ದೇಶದ ಅಭಿವೃದ್ಧಿ ಎಂದಿಗೂ ಅಸಾಧ್ಯ ಎಂದು ನಶಾ ಮುಕ್ತ ಭಾರತ್ ಸಂಘಟನೆಯ ಮುಖ್ಯಸ್ಥೆ ಮೇಧಾ ಪಾಟ್ಕರ್ ಎಚ್ಚರಿಸಿದರು.

ನಗರದಲ್ಲಿ ಭಾನುವಾರ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ಮದ್ಯ ಮಾರಾಟ ನಿಷೇಧಕ್ಕೆ ಆಗ್ರಹಿಸಿ ರಾಜ್ಯಮಟ್ಟದ ಸಮಾವೇಶಕ್ಕೆ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜಕೀಯ ನಾಯಕರು, ಅಧಿಕಾರಿಗಳು, ಕಾನೂನು ರೂಪಿಸುವವರು ಸೇರಿ ಎಲ್ಲರೂ ಮದ್ಯ ಮತ್ತು ಭೂಮಾಫಿಯಾ ಹಿಡಿತದಲ್ಲಿದ್ದಾರೆ. ಇವರೆಲ್ಲರೂ ಬಡವರ ಆದಾಯದ ಮೇಲೆಯೇ ಕಣ್ಣಿಟ್ಟಿದ್ದಾರೆ. ಶೋಷಣೆಯ ಮೂಲಕ ಆದಾಯ ಗಳಿಸುವ ತಂತ್ರ ನಡೆಸುತ್ತಿದ್ದಾರೆಂದು ಟೀಕಿಸಿದರು. ಮದ್ಯ ಮಾರಾಟದ ಆದಾಯದ ಮೇಲೆಯೇ ಎಲ್ಲ ಸರಕಾರಗಳು ನಿರ್ಭರವಾಗುವುದು ಸಮಾಜದ ಸ್ವಾಸ್ಥ್ಯ ಹಾಳು ಮಾಡುವತ್ತ ಸಾಗಲು ದಾರಿಯಾಗುತ್ತಿದೆ ಎಂದರು.

 

                                                                  

ತರಕಾರಿ ದುಬಾರಿ: ವ್ಯಾಪಾರದ ಚಿಂತೆ

ಅಕ್ಟೋಬರ್.28

ಸಿಂಧನೂರು: ಬೆಳೆದ್ರು ಕಷ್ಟ, ಮಾರಾಟಕ್ಕೂ ಕಷ್ಟ. ಹೋಟೆಲ್ ಮಾಡಿ, ಗಿರಾಕಿಗಳಿಗೆ ಕಾಯುವುದೂ ಸಂಕಷ್ಟ. ಬೆಳೆ ಬೆಳೆವ ರೈತರ ಗೋಳು ಒಂದಾದರೆ, ದಿನೇದಿನೇ ಏರುಗತಿಯಲ್ಲಿ ಸಾಗುತ್ತಿರುವ ತರಕಾರಿ ಬೆಲೆಯಿಂದಾಗಿ ಗ್ರಾಹಕರು ಖರೀದಿಗೆ ಹಿಂದೇಟು ಹಾಕಿದರೆ, ಹೋಟೆಲ್, ಖಾನಾವಳಿ ಮಾಲೀಕರಿಗೆ ವ್ಯಾಪಾರದ ಚಿಂತೆ ಎದುರಾಗಿದೆ.
ಕಳೆದ 15 ದಿನಗಳ ಅವಧಿಯಲ್ಲಿ ತರಕಾರಿ, ಸೊಪ್ಪಿನ ದರ ಏರುಗತಿಯಲ್ಲಿ ಇರುವುದು ಎಲ್ಲರನ್ನು ಕಂಗೆಡಿಸಿದೆ. ಸತತ ಮಳೆಯಿಂದಾಗಿ ಬೆಳೆ ಹಾನಿಯಾಗಿರುವುದು ದರ ಹೆಚ್ಚಳಕ್ಕೆ ಕಾರಣ ಎಂಬುದು ವ್ಯಾಪಾರಿಗಳ ಅಂಬೋಣ. ಆದರೆ ದುಬಾರಿ ದರದ ತರಕಾರಿ ಖರೀದಿಸಿದರೆ ಜೇಬಿಗೆ ಸಂಪೂರ್ಣ ಕತ್ತರಿ ಬೀಳುವುದು ದಿಟ. 10ರಿಂದ 20 ರೂಪಾಯಿಗಳ ಆಸುಪಾಸಿನಲ್ಲಿ ಇರುತ್ತಿದ್ದ ದರವೀಗ ಡಬಲ್ ಆಗಿರುವುದು ಸಮಸ್ಯೆಗೆ ಮೂಲ ಕಾರಣ.

 

 

 

                                                                                                                                                                                                                                                                                                           

ಸದಾಶಿವ ಆಯೋಗದ ವರದಿ ಜಾರಿಗೆ ಪ್ರತಿಭಟನೆ

ಅಕ್ಟೋಬರ್.21

ಮಾನ್ವಿ: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮಾದಿಗ ದಂಡೋರಾ ತಾಲೂಕು ಸಮಿತಿ ಶಾಸಕರ ಭವನದ ಮುಂದೆ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಿತು.
ಮೀಸಲಾತಿ ಪಾಲನ್ನು ಜನಸಂಖ್ಯೆಗೆ ಅನುಗುಣವಾಗಿ ಅವಕಾಶ ವಂಚಿತ ತಳಸಮುದಾಯಗಳಾದ ಮಾದಿಗ ಸಂಬಂಧಿತ 33 ಉಪ ಜಾತಿಗಳಿಗೆ ಶೇ.6, ಛಲವಾದಿ ಸಂಬಂಧಿತ 28 ಉಪಜಾತಿಗಳಿಗೆ ಶೇ.5, ಸ್ಪೃಶ್ಯ ಜಾತಿಯ ನಾಲ್ಕು ಪಂಗಡಗಳಿಗೆ ಶೇ.3, ಅಸ್ಪೃಶ್ಯ ಅಲೆಮಾರಿ ಸಂಬಂಧಿತ 16 ಉಪಜಾತಿಗಳಿಗೆ ಶೇ.1ರಷ್ಟು ಮೀಸಲಾತಿ ಕಲ್ಪಿಸುವಂತೆ ಹಲವು ವರ್ಷಗಳಿಂದ ಶಾಂತಿಯುತ ಹೋರಾಟ ಮಾಡಿಕೊಂಡು ಬರಲಾಗುತ್ತಿದ್ದರು. ಸರಕಾ ನಮ್ಮ ಹೋರಾಟವನ್ನು ನಿರ್ಲಕ್ಷ ್ಯದಿಂದ ನೋಡುತ್ತಿದೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

 

 

ಕಳ್ಳರಿಬ್ಬರ ಬಂಧನ

ಅಕ್ಟೋಬರ್.18

ರಾಯಚೂರು: ತಾಲೂಕಿನ ಯಾಪಲದಿನ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ಕಳ್ಳತನ ನಡೆಸಿದ ಅಂತಾರಾಜ್ಯ ಕಳ್ಳರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ತೆಲಂಗಾಣದ ಗದ್ವಾಲ್ ಮೂಲದ ದೊಡ್ಡನರಸಿಂಹಲು ಹಾಗೂ ಸಣ್ಣ ನರಸಿಂಹಲು ಬಂಧಿತರು. ಅವರಿಂದ 4ಲಕ್ಷ 4ಸಾವಿರದ 500 ರೂ. ಮೊತ್ತದ ಆಸ್ತಿ ವಶಪಡಿಸಿಕೊಳ್ಳಲಾಗಿದೆ. ಈ ಕಳ್ಳರು ಯಾಪಲದಿನ್ನಿ, ನಾಗನದೊಡ್ಡಿ, ರಾಳ್ಳದೊಡ್ಡಿ, ಕಲವಲದೊಡ್ಡಿ, ಸರ್ಜಾಪುರ ಸೇರಿ ಇತರ ಗ್ರಾಮಗಳ ಮನೆಗಳಲ್ಲಿ ಕಳ್ಳತನ ಮಾಡಿದ್ದರು. ನಂತರ ತೆಲಂಗಾಣದಲ್ಲಿ ತಲೆಮರೆಸಿಕೊಂಡಿದ್ದರು. ಗದ್ವಾಲ್ನಲ್ಲಿ ಕಳೆದ ಮೂರು ದಿನಗಳ ಹಿಂದೆ ಕಳ್ಳರನ್ನು ಬಂಧಿಸಿದ ಪೊಲೀಸರು, ಮಂಗಳವಾರ ರಾಯಚೂರಿಗೆ ಕರೆತಂದಿದ್ದಾರೆ. ಯಾಪಲದಿನ್ನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

ವಾಚಿಕೆಯನ್ನು ನಾಲ್ಕು ಭಾಷೆಗಳಲ್ಲಿ ಅನುವಾದ ಮಾಡುವ ಮಹತ್ವದ ಯೋಜನೆ

ಅಕ್ಟೋಬರ್.17

ರಾಯಚೂರು: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ವಾಚಿಕೆಯನ್ನು ನಾಲ್ಕು ಭಾಷೆಗಳಲ್ಲಿ ಅನುವಾದ ಮಾಡುವ ಮಹತ್ವದ ಯೋಜನೆ ಹಾಕಿಕೊಂಡಿದ್ದು, ಗುಲ್ಬರ್ಗಾ ವಿವಿ ಉನ್ನತ ಕಾರ್ಯ ಸಲ್ಲಿಸುತ್ತಿದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗ ಮಾಡುತ್ತಿದೆ ಎಂದು ಗುಲ್ಬರ್ಗಾ ವಿವಿ ಪ್ರಸಾರಾಂಗ ನಿರ್ದೇಶಕ ಎಚ್.ಟಿ.ಪೋತೆ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುಲ್ಬರ್ಗಾ ವಿವಿ ಪ್ರಸಾರಾಂಗ, ಐಕ್ಯೂಎಸಿ ಕನ್ನಡ ವಿಭಾಗದ ವತಿಯಿಂದ ಏರ್ಪಡಿಸಿದ್ದ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಪ್ರಚಾರ
ಉಪನ್ಯಾಸ ಮಾಲೆ ಕಾರ್ಯಕ್ರಮ ಹೆಚ್ಚೆಚ್ಚು ಹಮ್ಮಿಕೊಳ್ಳುವ ಮುಖಾಂತರ ಯುವ ಬರಹಗಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.
ಪ್ರಾಧ್ಯಾಪಕ ಪ್ರಾಣೇಶ ಕುಲಕರ್ಣಿ ಉಪನ್ಯಾಸ ನೀಡಿ, ಎಲ್ಲಿಯವರೆಗೂ ಕಾರ್ಮಿಕರ, ರೈತರ ಉತ್ಪನ್ನ, ಆರ್ಥಿಕತೆ ಬಗ್ಗೆ ಚಿಂತನೆ ಮಾಡುವುದಿಲ್ಲವೋ ಅಲ್ಲಿಯವರೆಗೂ ರೈತರ ಕೃಷಿ ಪದ್ಧತಿ ಸುಧಾರಿಸುವುದಿಲ್ಲ. ದೇಶದಲ್ಲಿ 1 ಎಕರೆಗಿಂತಲೂ ಕಡಿಮೆ ಭೂಮಿ ಹೊಂದಿದವರು ಹೆಚ್ಚಾಗಿದ್ದಾರೆ. 5 ಎಕರೆ ಪ್ರದೇಶಕ್ಕಿಂತ ಹೆಚ್ಚಿನ ಭೂಮಿ ಹೊಂದಿದ ದೊಡ್ಡ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೃಷಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಭತ್ತ ಅತಿ ಹೆಚ್ಚಾಗಿ ಬೆಳೆಯುತ್ತಿದ್ದು, ಅಕ್ಕಿ ಮೇಲಿನ ಸಂಶೋಧನಾ ಕೇಂದ್ರಗಳ ಸ್ಥಾಪನೆ ಅವಶ್ಯಕತೆಯಿದೆ. ದೇಶದಲ್ಲಿ 463ದಶಲಕ್ಷ ಟನ್ ಆಹಾರೋತ್ಪಾದನೆಯ ಅಗತ್ಯವಿದ್ದು, 268ದಶಲಕ್ಷ ಟನ್ ಆಹಾರೋತ್ಪಾದನೆ ಮಾಡಲಾಗುತ್ತಿದೆ ಎಂದರು.
ಉಪನ್ಯಾಸಕ ಡಾ.ರಮೇಶ ಯತಗಲ್ ಮಾತನಾಡಿ, ರಾಯಚೂರು ಜಿಲ್ಲೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಜಿಲ್ಲೆಯ ಮುದಗಲ್ನ ಪಿಕಲಿಹಾಳ ಕುರಿತು ಅಧ್ಯಯನ ನಡೆಸಿ 1200 ಪುಟಗಳ ವರದಿಯನ್ನು ಕೆಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಕಳಿಸಲಾಗಿತ್ತು ಎಂದು ಜಿಲ್ಲೆಯ ಇತಿಹಾಸ ವಿವರಿಸಿದರು.
ಉಪನ್ಯಾಸಕರಾದ ಜೆ.ಎಲ್.ಈರಣ್ಣ, ಜಿ.ಪವನಕುಮಾರ, ಆರಿಫ್ರಾಜಾ, ಡಾ.ಶಿವಯ್ಯ ಹಿರೇಮಠ, ಮಹಾಂತೇಶ ನವಲಕಲ್ ನಾನಾ ವಿಷಯಗಳ ಮೇಲೆ ಉಪನ್ಯಾಸ ನೀಡಿದರು. ವೇದಿಕೆ ಮೇಲೆ ಗುಲ್ಬರ್ಗಾ ವಿವಿ ಸಿಂಡಿಕೇಟ್ ಸದಸ್ಯ ವಿಜಯಭಾಸ್ಕರ ಇಟಗಿ, ವಿದ್ಯಾವಿಷಯಕ ಪರಿಷತ್ ಸದಸ್ಯ ವೆಂಕಟೇಶ ಪಟೇಲ ಉಪಸ್ಥಿತರಿದ್ದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

Ads
;