ದೂರವಾಣಿ : 080-69999676
ಇಮೇಲ್ : Info@Vijayataranga.com


 

33  ಮಧ್ಯಸ್ಥಿಕೆ ವಹಿಸಲು ಪ್ರಧಾನಿ ನಿರಾಕರಿಸಿದ್ದಾರೆ: ಸಿಎಂ
 ಡಿಸೆಂಬರ್-21
ವಿಜಯಪುರ: ಕರ್ನಾಟಕ ಮತ್ತು ಗೋವಾ ನಡುವಿನ ಮಹದಾಯಿ ವಿವಾದ ಬಗೆಹರಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಲು ನಿರಾಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಹೇಳಿದ್ದಾರೆ.
ಇಂದು ಗೋಕಾಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಮಹದಾಯಿ ವಿವಾದ ಬಗೆಹರಿಸುವ ಸಂಬಂಧ ನಾನು ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ, ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದ್ದೆ. ಆದರೆ ಪ್ರಧಾನಿ ಮಧ್ಯಸ್ಥಿಕೆ ವಹಿಸಲು ನಿರಾಕರಿಸಿದರು. ಈಗ ರಾಜ್ಯ ವಿಧಾನಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯುವುದಕ್ಕಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು, ರಾಜ್ಯ ಬಿಜೆಪಿ ನಾಯಕರೊಂದಿಗೆ ಮತ್ತು ಗೋವಾ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದರು.
ಅಮಿತ್ ಶಾ ಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಮಹದಾಯಿ ವಿವಾದದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಮೌನವಾಗಿರುವುದು ಏಕೆ? ಎಂದು ಸಿಎಂ ಪ್ರಶ್ನಿಸಿದ್ದಾರೆ.
ಮಹದಾಯಿ ನದಿ ವಿವಾದ ನ್ಯಾಯಾಧೀಕರಣಕ್ಕೆ ಸಲ್ಲಿಸಲು ನಮಗೆ ಗೋವಾ ಸರ್ಕಾರದಿಂದ ಲಿಖಿತ ಪ್ರತಿಕ್ರಿಯೆ ಮತ್ತು ಲಿಖಿತ ಭರವಸೆ ಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

 

 

     ಬಬಬ    

ಸದ್ಯದಲ್ಲೇ ಬಿಜೆಪಿ ಪಕ್ಷ ಸೇರುವೇ: ಯತ್ನಾಳ

ಡಿಸೆಂಬರ್.14

ವಿಜಯಪುರ: 'ಬಿಜೆಪಿಯವರು ನನ್ನನ್ನು ಗೌರವಯುತವಾಗಿ ಪಕ್ಷಕ್ಕೆ ಕರೆಸಿಕೊಳ್ಳುತ್ತಾರೆಂದು ನೂರಕ್ಕೆ ನೂರರಷ್ಟು ವಿಶ್ವಾಸವಿದೆ. ಡಿ.25ರ ತನಕ ಕಾಯುತ್ತೇನೆ. ಯಾವುದೇ ಕಾರಣಕ್ಕೂ ಜೆಡಿಎಸ್‌ ಅಥವಾ ಕಾಂಗ್ರೆಸ್‌ಗೆ ಹೋಗುವುದಿಲ್ಲ. ನನ್ನ ನೆಚ್ಚಿನ ನಾಯಕ ಅಟಲ್‌ಬಿಹಾರಿ ವಾಜಪೇಯಿ ಜನ್ಮದಂದು ಮುಂದಿನ ರಾಜಕೀಯ ನಡೆ ಏನೆಂದು ಘೋಷಿಸುತ್ತೇನೆ. ನನ್ನ ಶಕ್ತಿ ಏನೆಂದು ತೋರಿಸಿಯೇ ಸಿದ್ಧ' ಹೀಗೆಂದು ಖಡಕ್‌ ಆಗಿ ಹೇಳಿದವರು ಕೇಂದ್ರದ ಮಾಜಿ ಸಚಿವ, ವಿಧಾನಪರಿಷತ್‌ ಸದಸ್ಯ ಬಸನಗೌಡ ಪಾಟೀಲ ಯತ್ನಾಳ.
ನೇರ ಮಾತಿನ ಮೂಲಕವೇ ರಾಜಕೀಯ ಏಳು-ಬೀಳುಗಳನ್ನು ಕಂಡು ಇದೀಗ ಬಿಜೆಪಿಗೆ ಮರಳುವ ಯತ್ನದಲ್ಲಿರುವ ಅವರು ತಮ್ಮ ರಾಜಕೀಯ ಜೀವನ ಹಾಗೂ ಪ್ರಸ್ತುತ ಸ್ಥಿತಿಗತಿಯ ಸಮಗ್ರ ಚಿತ್ರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ನನ್ನ ಶಕ್ತಿ ಏನೆಂಬುದು ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ನಾಯಕರಿಗೆ ಗೊತ್ತಿದೆ. ಅದಕ್ಕಾಗಿಯೇ ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ. ಆದರೆ ನೇರ ನಡೆ- ನುಡಿಯ ನಾನು ಬಿಜೆಪಿಗೆ ಮರಳಿದರೆ ತಮ್ಮದೇನೂ ಆಟ ನಡೆಯದು ಎಂಬ ನೋವಿನಿಂದ ಕೆಲವೇ ಮಂದಿ ಅಡ್ಡಗಾಲಾಗಿದ್ದಾರೆ. ಬಿಜೆಪಿಗೆ ನಾನು ಹಾಗೂ ನನಗೆ ಬಿಜೆಪಿ 'ಅನಿವಾರ್ಯತೆ' ಎದುರಾಗಿದೆ. ಈ ಬಗ್ಗೆ ಸಮೀಕ್ಷೆಯನ್ನೂ ನಡೆಸಿದ್ದಾರೆ. ಅದರಲ್ಲಿ ನನ್ನ ಶಕ್ತಿ ಏನೆಂದು ತಿಳಿದುಬಂದಿದೆ. ಎಲ್ಲಾ ಹಂತದಲ್ಲೂ ಚರ್ಚೆಯಾಗಿದೆ. ಅದಕ್ಕಾಗಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಡಿ.25ರಂದು ಫೈನಲ್‌ ರಿಸಲ್ಟ್‌ ಪ್ರಕಟಗೊಳ್ಳಲಿದೆ ಎಂದು ತಮ್ಮದೇ ಧಾಟಿಯಲ್ಲಿ ತಿಳಿಸಿದರು.

 

 

    456 

ಹೆಗ್ಗರವಳ್ಳಿ ಪ್ರಕರಣದ ಇನ್ನೊರ್ವ ವ್ಯಕ್ತಿಯ ತೀರ್ವ ಹುಡುಕಾಟ

 ಡಿಸೆಂಬರ್-11
ವಿಜಯಪುರ: ಪತ್ರಕರ್ತ ರವಿ ಬೆಳಗೆರೆ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಮತ್ತೊಬ್ಬ ಆರೋಪಿ ವಿಜು ಬಡಿಗೇರ ತಲೆ ಮರೆಸಿಕೊಂಡಿದ್ದ ಆತನ ಶೋಧಕ್ಕಾಗಿ ಸಿಸಿಬಿ ತಂಡ ವಿಜಯಪುರದಲ್ಲಿ ಬೀಡು ಬಿಟ್ಟಿದೆ. ರವಿ ಬೆಳಗೆರೆ ಇಂದ ಸುನಿಲ್ ಹತ್ಯೆಗೆ ಸುಪಾರಿ ಪಡೆದಿದ್ದ ಎನ್ನಲಾದ ಶಾರ್ಪ್ ಶೂಟರ್ ಶಶಿಧರ್ ಮುಂಡೆವಾಡಿಯ ಅಳಿಯ ಈ ವಿಜು ಬಡಿಗೇರ. ಈತ ಶಶಿಧರ್ ಮುಂಡೆವಾಡಿಯ ಜೊತೆಗೆ ಸುನಿಲ್ ಕೊಲೆ ಮಾಡಲು ಅವರ ಅಪಾರ್ಟ್ಮೆಂಟ್ ಗೆ ತೆರಳಿದ್ದ ಎನ್ನಲಾಗಿದೆ. ಇದಲ್ಲದೆ ಯಲಹಂಕದ ಉದ್ಯಮಿ ಮಗನ ಅಪಹರಣ ಪ್ರಯತ್ನದಲ್ಲಿಯೂ ಸಹಾಯ ಮಾಡಿದ್ದ ಎಂದು ಶಶಿಧರ ಮುಂಡೆವಾಡಿ ಸಿಸಿಬಿಗೆ ಹೇಳಿಕೆ ನೀಡಿದ್ದಾನೆ. ವಿಜು ಬಡಿಗೇರ ಸುನಿಲ್ ಹತ್ಯೆ ಪ್ರಯತ್ನ ಪ್ರಕರಣದಲ್ಲಿ 3ನೇ ಪ್ರಮುಖ ಆರೋಪಿಯಾಗಿದ್ದು ಅವನ ಬಂಧನ ರವಿ ಬೆಳಗೆರೆ ಪ್ರಕರಣಕ್ಕೆ ಹೆಚ್ಚಿನ ತೂಕ ಒದಗಿಸಲಿದೆ. ವಿಜಯಪುರದ ಸಿಂಧಗಿ ಪಟ್ಟಣದ ಕಂಟೆಪ್ಪನ ಪ್ಲಾಟ್ ನಲ್ಲಿ ವಿಜು ಬಡಿಗೇರ ಮನೆ ಇದ್ದು, ಆತನ ಮನೆಯ ಮೇಲೆ ಸಿಸಿಬಿ ದಾಳಿ ನಡೆಸಿ ಹುಡುಕಾಟ ನಡೆಸಿತ್ತು. ಆತ ಸಿಂಧಗಿಯಲ್ಲೇ ಅಡಗಿಕೊಂಡಿರಬಹುದು ಎಂದು ಅಂದಾಜಿಸಿರುವ ಸಿಸಿಬಿ ತಂಡ ಇಬ್ಬರು ಸ್ಥಳೀಯ ಮಾಹಿತಿದಾರರ ಸಹಾಯದೊಂದಿಗೆ ವಿಜಯಪುರ ಜಿಲ್ಲೆಯಾದ್ಯಂತ ಹುಡುಕಾಟ ನಡೆಸುತ್ತಿದೆ. ಸಿಂಧಗಿ ಮತ್ತಿತರೆ ಕಡೆ ವಿಜು ಬಡಿಗೇರಯ ಸ್ನೇಹಿತರು, ಸಂಬಂಧಿಗಳ ಮನೆಗಳ ಮೇಲೆಲ್ಲಾ ದಾಳಿ ನಡೆಸಿ ಸಿಸಿಬಿ ತಂಡ ಹುಡುಕಾಟ ನಡೆಸಿದೆ.

 

    456 

ಸಿದ್ದಗಂಗಾ ಸ್ವಾಮೀಜಿ ಹೆಸರಿನಲ್ಲಿ ನಕಲಿ ಭಿತ್ತಿಪತ್ರ ಹರಿಬಿಟ್ಟ ದುಷ್ಕರ್ಮಿಗಳು

ಡಿಸೆಂಬರ್-9

ವಿಜಯಪುರ: ನಗರದಲ್ಲಿ ಡಿಸೆಂಬರ್ 10 ರಂದು ನಡೆಯಲಿರುವ ಲಿಂಗಾಯತ ಪ್ರತ್ಯೇಕತೆ ಜಾಗೃತಿ ಸಮಾವೇಶಕ್ಕೆ ತಡೆಯೊಡ್ಡಲು ಕಿಡಿಗೇಡಿಗಳು ಪ್ರಯತ್ನಿಸಿದ್ದಾರೆ. ಅಷ್ಟೇ ಅಲ್ಲದೆ ಸಿದ್ದಗಂಗಾಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೆಸರನ್ನು ದುರ್ಬಳಕೆ ಮಾಡಿದ್ದಾರೆ. ಸ್ವಾಮೀಜಿಗಳ ಹೆಸರಿನಲ್ಲಿ ವೀರಶೈವ ಲಿಂಗಾಯತ ಒಂದೇ, ಪ್ರತ್ಯೇಕ ಲಿಂಗಾಯತ ಧರ್ಮ ಸಮಾವೇಶ ಬಹಿಷ್ಕರಿಸಿ ಎಂಬ ತಪ್ಪು ಸಂದೇಶವಿರುವ ಭಿತ್ತಿಪತ್ರ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.ಭಿತ್ತಿಪತ್ರದಲ್ಲಿ ಸಮಸ್ತ ವೀರಶೈವ ಲಿಂಗಾಯತ ಪ್ರಕಟಣೆ ನಗರ, ಪಟ್ಟಣದಲ್ಲಿ ವಾಸಿಸುವ ವಿದ್ಯಾವಂತರು ವೀರಶೈವ ಪದ ಮತ್ತು ಹಳ್ಳಿಗಳಲ್ಲಿ ವಾಸಿಸುವವರು ಲಿಂಗಾಯತ ಪದ ಬಳಸುತ್ತಾರೆ. ಇವುಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ.ಎರಡೂ ಒಂದೇ, ವೀರಶೈವ ಲಿಂಗಾಯತಕ್ಕೆ ಅರ್ಥ ಕಲ್ಪಿಸುವ ಬೇರೆ ಬೇರೆ ಶಬ್ದಗಳಿಲ್ಲ. ವೀರಶೈವ ಲಿಂಗಾಯತ ಸಮಾಜವನ್ನು ಇಬ್ಭಾಗ ಮಾಡುವ ಹುನ್ನಾರ ಸರಿಯಲ್ಲ ಎಂಬ ಸಂದೇಶವಿರುವ ಭಿತ್ತಿಪತ್ರ ವಾಟ್ಸ್ ಆಪ್, ಫೇಸ್ ಬುಕ್ ಗಳಲ್ಲಿ ಹರಿದಾಡುತ್ತಿದೆ.

 

 

 

 

456  ಬಿಇಓ ಲಂಚದ ಕಿರುಕುಳಕ್ಕೆ : ಗುತ್ತಿಗೆ ನೌಕರ ಆತ್ಮಹತ್ಯೆಗೆ ಯತ್ನ
 ಡಿಸೆಂಬರ್-8
ವಿಜಯಪುರ : ಲಂಚ ನೀಡುವಂತೆ ಬಿಇಓ ನಿರಂತರ ಕಿರುಕುಳ ಇದರಿಂದ ಬೇಸತ್ತು ಕಂಪ್ಯೂಟರ್ ಆಪರೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗುತ್ತಿಗೆ ನೌಕರ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನಲ್ಲಿ ನಡೆದಿದೆ.
ಸಿಂದಗಿ ತಾಲ್ಲೂಕಿನ ಓತಿಹಾನ ಗ್ರಾಮದ ನಿವಾಸಿ ಬಸವರಾಜ ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆ ನೌಕರ, ಸಿಂದಗಿ ಬಿಇಓ ಆರಿಫ್ ಬಿರಾದಾರ ನೀಡಿದ ಕಿರುಕುಳದಿಂದ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ.
ಬಿಇಓ ಲಂಚ ನೀಡುವಮತೆ ಕುರುಕುಳ ನೀಡುತ್ತಿದ್ದ ಎಂದು ಆರೋಪಿಸಿ ವಾಟ್ಸಾಪ್ ನಲ್ಲಿ ಡೆತ್ ನೋಟ್ ಬರೆದು ಬಿಇಓ ಕಚೇರಿ ಸಿಬ್ಬಂದಿ ಬಸವರಾಜ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಬಿಇಓ ಕಚೇರಿಯಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್ ಅಗಿರುವ ಬಸವರಾಜ್ ರಿಜಾಯಿನ್ ಮಾಡಿಕೊಳ್ಳು ಬಿಇಓ ಅವರು ಲಂಚ ಕೇಳಿದ್ದಾರೆ. ಒಂದು ತಿಂಗಳ ಸಂಬಳ 09 ಸಾವಿರ ರೂ. ನೀಡುವಂತೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

 

                                                 

ಔರಾದ್ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಭಿನ್ನಮತ ಸ್ಫೋಟ

ಡಿಸೆಂಬರ್-7 

ವಿಜಯಪುರ: ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ಭಿನ್ನಮತ ಸ್ಫೋಟ?! ಗುರುವಾರ ಔರಾದ್ ನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ವೇಳೆ ಬಿ.ಎಸ್ ಯಡಿಯೂರಪ್ಪ ಮುಂದೆ ಶಕ್ತಿ ಪ್ರದರ್ಶನ ತೋರಿಸಿ ಮುಂದಿನ ವಿಧಾನಸಭಾ ಚುನಾವಣೆಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ಹಾಲಿ ಶಾಸಕ ಪ್ರಭು ಚೌಹಾಣ್ ಹಾಗೂ ಟಿಕೆಟ್ ಆಕಾಂಕ್ಷಿ ತಾನಾಜಿ ಜಾದವ್ ಬೆಂಬಲಿಗರ ಮಧ್ಯೆ ವಾಗ್ವಾದ ನಡೆದಿದೆ.
ಚೌಹಾಣ್ ಹಾಗೂ ತಾನಾಜಿ ಜಾದವ್ ಇಬ್ಬರು ಪ್ರತ್ಯೇಕ ಟೆಂಟ್ ಹಾಕಿ ಬಿಎಸ್ವೈ ಮುಂದೆ ಶಕ್ತಿ ಪ್ರದರ್ಶನಕ್ಕೆ ಅಣಿಯಾಗಿದ್ದರು. ಈ ವೇಳೆ ಇಬ್ಬರು ಬೆಂಬಲಿಗರ ಮಧ್ಯೆ ಮಾರಾಮಾರಿ ನಡೆದಿದೆ. ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ: ಬಿಎಸ್ ವೈ ತಾನಾಜಿ ಜಾದವ್ ಕಳೆದ ಚುನಾವಣೆಯಲ್ಲಿ ಕೆಜಿಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಸಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಹಿನ್ನಲೆಯಲ್ಲಿ ಪ್ರಭು ಚೌಹಾಣ್ ಹಾಗೂ ತಾನಾಜಿ ಜಾದವ್ ಮಧ್ಯೆ ಭಿನ್ನಮತ ಸ್ಪೋಟಗೊಂಡಿದೆ. ಇದರಿಂದ ಮುಂಬರುವ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುವುದು ಬಿಎಸ್ ವೈಗೆ ತಿಳಿಯದಂತಾಗಿದೆ.

 

     

ಹೆರಿಗೆ ಮಾಡಿಸಿದ ಆಂಬುಲೆನ್ಸ್ ಸಿಬ್ಬಂದಿ

 ಡಿಸೆಂಬರ್-6

 ವಿಜಯಪುರ: ಆಂಬುಲೆನ್ಸ್ ಸಿಬ್ಬಂದಿಯೇ ಪ್ರಸೂತಿ ತಜ್ಞರಾಗಿ ಗರ್ಭಿಣಿಯೋರ್ವರಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿರುವ ಘಟನೆ ವಿಜಯಪುರದ ಮುದ್ದೆ ಬಿಹಾಳದಲ್ಲಿ ನಡೆದಿದೆ. ಕೋಳೂರು ಗ್ರಾಮದ ಗರ್ಭಿಣಿ ಮಹಿಳೆ ಸವಿತಾ ನಾಗರಾಳ ಅವರು ಆಸ್ಪತ್ರೆಗೆ ಹೋಗಲೆಂದು ತಾಳಿಕೋಟೆಯಿಂದ ಮುದ್ದೆಬಿಹಾಳಕ್ಕೆ ಬಸ್ಸಿನಲ್ಲಿ ತೆರಳುತ್ತಿದ್ದರು ಅದೇ ಸಮಯದಲ್ಲಿ ಅವರಿಗೆ ಹೆರಿಗೆ ವೇದನೆ ಕಾಣಿಸಿಕೊಂಡಿದೆ. ಕೂಡಲೆ ಬಸ್ಸಿನ ನಿರ್ವಾಹಕ 108 ಗೆ ಕರೆ ಮಾಡಿ ಆಂಬುಲೆನ್ಸ್ ಗೆ ಬರ ಹೇಳಿದ್ದಾನೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಆಂಬುಲೆನ್ಸ್ ಸವಿತಾ ಅವರನ್ನು ಕರೆದುಕೊಂಡು ಮುದ್ದೆಬಿಹಾಳದ ಕಡೆ ಪ್ರಯಾಣ ಬೆಳೆಸಿದೆ. ಆದರೆ ಆಸ್ಪತ್ರೆ ಮಾರ್ಗಮಧ್ಯದಲ್ಲಿ ಸವಿತಾ ಅವರಿಗೆ ತೀರ್ವ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಮಾರ್ಗ ಮಧ್ಯದಲ್ಲಿ ಆಂಬುಲೆನ್ಸ್ ಸಿಬ್ಬಂದಿಯೇ ಸವಿತಾ ಅವರಿಗೆ ಸಾಮಾನ್ಯ ಹೆರಿಗೆ ಮಾಡಿಸಿದ್ದಾರೆ. ಸವಿತಾ ಅವರಿಗೆ ಗಂಡು ಮಗು ಜನಿಸಿದೆ.ತಾಯಿ ಮಗುವನ್ನು ಆಂಬುಲೆನ್ಸ್ ಸಿಬ್ಬಂದಿ ಮುದ್ದೆಬಿಹಾಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವಶ್ಯ ಚಿಕಿತ್ಸೆ ನೀಡಿರುವ ಆಸ್ಪತ್ರೆ ವೈದ್ಯರು ತಾಯಿ, ಮಗು ಕ್ಷೇಮವಾಗಿರುವುದಾಗಿ ತಿಳಿಸಿದ್ದಾರೆ.

 

    45

ಪಿಎಸ್ ಐ ಮಹಿಳೆಯೊಂದಿಗಿನ ವಾಟ್ಸಪ್ ಚಾಟ್ ಬಟಾಬಯಲು

 ಡಿಸೆಂಬರ್-6

 ವಿಜಯಪುರ: 'ಐ ಲೈಕ್ ಯು ಡಿಯರ್, ಯು ಆರ್ ಸೋ ಬ್ಯೂಟಿಫುಲ್ ಡಿಯರ್, ಯು ಲುಕ್ ಲೈಕ್ ಮಾಡೆಲ್'   ಹೀಗೆ ನಾನಾ ಶಬ್ಧಗಳಿಂದ ವರ್ಣಿಸಿ ಯುವತಿಯನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಪೊಲೀಸ್ ಇನ್ಸ್ ಪೆಕ್ಟರ್ ಆಡಿದ ಬಣ್ಣದ ಮಾತುಗಳು ಇವು.ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಪೊಲೀಸ್ ಠಾಣೆಯ ಪಿಎಸ್ ಐ ಪ್ರಕಾಶ್ ರಾಠೋಡ್ ಎನ್ನುವರು ರಾತ್ರಿಯಾದರೆ ಸಾಕು ವಾಟ್ಸಪ್ ಮೂಲಕ ಮಹಿಳೆಯೊಬ್ಬರ ವಾಟ್ಸಪ್ ಗೆ ಸಂದೇಶಗಳ ಸುರಿಮಳೆ ಸುರಿಸುತ್ತಾರೆ. ಪೊಲೀಸಪ್ಪನ ಅಸಭ್ಯ ಸಂದೇಶಗಳಿಂದ ನೊಂದ ಮಹಿಳೆ ಇದೀಗ ಪೊಲೀಸ್ ವರಿಷ್ಠಾಧಿಕಾರಿಯ ಮೊರೆ ಹೋಗಿದ್ದಾರೆ.ಪ್ರಕಾಶ್ ರಾಠೋಡ್ ಈ ಹಿಂದೆ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮಹಿಳೆ ವಾಟ್ಸಪ್ ಗೆ ಅಸಭ್ಯವಾಗಿ ಸಂದೇಶಗಳನ್ನು ಕಳುಹಿಸಿದ್ದಾರೆ. ಈ ಬಗ್ಗೆ ಮಹಿಳೆ ಪ್ರಕಾಶ ರಾಠೋಡ್ ವಿರುದ್ಧ ಬಾಗಲಕೋಟೆ ಎಸ್ಪಿಗೆ ದೂರು ನೀಡಿದ್ದಾರೆ.ಆದರೆ, ಪಿಎಸ್ ಐ ಪ್ರಕಾಶ್ ರಾಠೋಡ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. 'ಇದು ನನ್ನ ವಿರುದ್ದ ನಡೆದ ಷಡ್ಯಂತ್ರ. ಬೇರೆಯವರೇ ನನ್ನ ಹೆಸರಿನಲ್ಲಿ ಚಾಟ್ ಮಾಡಿದ್ದಾರೆ. ನಾನು ಯುವತಿಯೊಂದಿಗೆ ಚಾಟ್ ಮಾಡಿಲ್ಲ. ಯುವತಿ ಬಾಗಲಕೋಟೆ ಎಸ್ಪಿ ಅವರಿಗೆ ದೂರು ನೀಡಿದ್ದು ಗೊತ್ತಿಲ್ಲ ನಕಲಿ ವಾಟ್ಸಪ್ ಐಡಿ ಸೃಷ್ಟಿಸಿ ಚಾಟ್ ಮಾಡಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.ಈ ಪ್ರಕರಣದ ಬಗ್ಗೆ ಪೊಲೀಸ್ ಉನ್ನತಾಧಿಕಾರಿಗಳು ತನಿಖೆ ನಡೆಸಿದರೆ ಮಾತ್ರ ಸತ್ಯಾಸತ್ಯತೆ ಏನು ಎಂಬುವುದು ಹೊರ ಬರಲಿದೆ.

 

44  ಯಡಿಯೂರಪ್ಪನ ಹಗರಣಗಳನ್ನು ಬಯಲು ಮಾಡ್ತೀನಿ: ಪಾಟೀಲ್
 ಡಿಸೆಂಬರ್-5
 ವಿಜಯಪುರ: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು  ತೀವ್ರಗೊಳ್ಳುತ್ತಿವೆ.ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರ ಹಗರಣಗಳನ್ನು ಬಯಲು ಮಾಡುತ್ತೇನೆ ಎಂದು ಬಿಜೆಪಿ  ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆ ನೀಡಿದ್ದ ಬೆನ್ನಲ್ಲೆ ತಿರುಗೇಟು ನೀಡಿರುವ ಎಂ.ಬಿ.ಪಾಟೀಲ್, ನಾನು ಯಡಿಯೂರಪ್ಪನ  ರೀತಿ ಟಾಂ ಟಾಂ ಹೊಡೆಯುವುದಿಲ್ಲ. ಫೆಬ್ರವರಿಯಲ್ಲಿ ಬಿಎಸ್ವೈ ಹಗರಣಗಳನ್ನು ಬಯಲಿಗೆಳೆಯುತ್ತೇನೆ ಎಂದು ಸವಾಲು  ಹಾಕಿದ್ದಾರೆ.
 ಯಡಿಯೂರಪ್ಪ ಅವರು ವಿಜಯಪುರ ಜಿಲ್ಲೆಯಲ್ಲಿ ನಡೆಸಿದ ಪರಿವರ್ತನಾ ರ್ಯಾಲಿಯುದ್ದಕ್ಕೂ ನನ್ನ ವಿರುದ್ಧ ಹಗರಣಗಳನ್ನು  ಬಿಡುಗಡೆ ಮಾಡುತ್ತೇನೆ ಎಂದು ಅರಿವೆಯಲ್ಲಿ ಹಾವು ಬಿಟ್ಟರು ಎಂದು ವ್ಯಂಗ್ಯವಾಡಿದ್ದಾರೆ.
 ಆದರೆ, ನಾನು ಫೆಬ್ರವರಿಯಲ್ಲಿ ಅವರ ಹಗರಣಗಳನ್ನು ಹೊರಹಾಕುತ್ತೇನೆ. ಈ ಬಗ್ಗೆ ನಾನು ಮುಂಚೆಯೇ ಹೇಳಿದ್ದೇನೆ ಎಂದು  ತಿಳಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಸಂಪನ್ಮೂಲ ಇಲಾಖೆ ಕಾಮಗಾರಿಗಳ ಬಗ್ಗೆ  ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಬಂದು ಪರಿಶೀಲನೆ ಮಾಡುತ್ತಾರಂತೆ. ಕಳಪೆ ಕಾಮಗಾರಿಯಾದರೆ ಅದಕ್ಕೆ  ಸಂಬಂಧಪಟ್ಟ ಗುತ್ತಿಗೆದಾರರು ಹೊಣೆಯಾಗುತ್ತಾರೆ. ಸಚಿವನಾದ ನನಗೆ ಯಾವ ಸಂಬಂಧವೂ ಇಲ್ಲ. ಯಡಿಯೂರಪ್ಪನಿಗೆ ಈ  ಬಗ್ಗೆ ತಿಳುವಳಿಕೆ ಇಲ್ಲ ಎಂದು ಹರಿಹಾಯ್ದಿದ್ದಾರೆ.

 

454  ಲಿಂಗಾಯತರಿಗೂ ಮಾನ್ಯತೆ ಸಿಗಲಿ : ಪಾಟೀಲ್
 ಡಿಸೆಂಬರ್-5
 ವಿಜಯಪುರ : ಜೈನರಿಗೆ ಮಾನ್ಯತೆ ಸಿಕ್ಕಂತೆ ಲಿಂಗಾಯತರಿಗೂ ಸಿಗಲಿ ಎಂದುಉ ಜಲ  ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
 ಸುದ್ದಿಗಾರರೊಂದಿಗೆ ಮಾತನಾಡಿ ಅವರು, ನಮ್ಮದು ಯಾರ ವಿರುದ್ಧವೂ  ಹೋರಾಟವಲ್ಲ, ನಮ್ಮದು ಸ್ವತಂತ್ರ ಧರ್ಮಕ್ಕಾಗಿ ಹೋರಾಟ, ಪ್ರತ್ಯೇಕ ಲಿಂಗಾಯತ  ಧರ್ಮದ ಹೋರಾಟವನ್ನು ನಾವು ಹುಟ್ಟು ಹಾಕಿದ್ದಲ್ಲ, 1938-1940 ರಲ್ಲಿ ಹೋರಾಟ  ಹುಟ್ಟುಹಾಕಲಾಗಿತ್ತು ಎಂದು ಹೇಳಿದರು.
 ಧರ್ಮದ ವಿಷಯದಲ್ಲಿ ನಾವು ನೇರವಾಗಿ ಸುಪ್ರೀಂಕೋರ್ಟ್ ಗೆ ಹೋಗಲಾಗಲಿಲ್ಲ.  ಹೀಗಾಗಿ ಹಂತ ಹಂತವಾಗಿ ಸಮಾವೇಶದ ಜೊತೆ ಕಾನೂನು ಹೋರಾಟ  ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

 

444  ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು
 ನವೆಂಬರ್- 30
 ವಿಜಯಪುರ: ರಕ್ತ ಸಿಕ್ತ ಚರಿತ್ರೆ ಹೊತ್ತ ಭೀಮಾತೀರ ಇತ್ತೀಚಿನ ದಿನಗಳಲ್ಲಿ ಪೊಲೀಸರ ದೆಸೆಯಿಂದಾಗಿ ಸ್ವಲ್ಪ   ಶಾಂತವಾಗಿತ್ತು. ಆದರೆ ಈಗ ಮತ್ತೆ ಅಲ್ಲಿ ಗುಂಡಿನ ಸದ್ದು ಕೇಳಿದೆ.
 ಜಿಲ್ಲೆಯ ಇಂಡಿಯಲ್ಲಿ ರೌಡಿ ಶೀಟರ್ ಒಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ, ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು   ಪೊಲೀಸ್ ಮೂಲಗಳು ತಿಳಿಸಿವೆ.
 ಇತ್ತೀಚೆಗೆ ಪೊಲೀಸರ ಗುಂಡಿನಿಂದ ಬಲಿಯಾದ ರೌಡಿ ಧರ್ಮರಾಜ್ ಚಡಚಣನ ಬಲಗೈ ಭಂಟ ಸೈಪನ್ ಐರಸಂಗ   ಎಂಬುವನು ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ.
 ಇಂಡಿ ಗ್ರಾಮದಲ್ಲಿ ಜಾತ್ರೆ ಇದ್ದ ಕಾರಣ ಜಾತ್ರೆ ನೋಡಲು ಸೈಪನ್ ಗ್ರಾಮಕ್ಕೆ ಆಗಮಿಸಿದ್ದ. ಕುಡಿದ ಅಮಲಿನಲ್ಲಿದ್ದ ಸೈಪನ್   ಬೇಕೆಂದೆ ಕೆಲವರೊಂದಿಗೆ ಜಗಳ ತೆಗೆದಿದ್ದ, ಸಿದ್ದ ಪರಚಂಡಿ ಎಂಬುವರು ಜಗಳ ಬಿಡಿಸಲು ಮುಂದಾದಾಗ ಅಲ್ಲಿದ್ದವರನ್ನು   ಹೆದರಿಸಲು ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ. ಈ ಬಗ್ಗೆ ಸಿದ್ದು ಪರಚಂಡಿ ಇಂಡಿ ಠಾಣೆಯಲ್ಲಿ ಪ್ರಕರಣ   ದಾಖಲಿಸಿದ್ದಾರೆ.
 ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆಯೇ ಸೈಪನ್ ಪರಾರಿ ಆಗಿದ್ದಾನೆ. ಗಾಳಿಯಲ್ಲಿ ಗುಂಡು ಹಾರಿದ್ದನ್ನು ಪೊಲೀಸರು   ಖಚಿತ  ಪಡಿಸಿದ್ದಾರೆ.
 ಇಂಡಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುವ ಸೈಪನ್ ಐರಸಂಗ, ಪೊಲೀಸರ ಎನ್ಕೌಂಟರ್ ಗೆ ಬಲಿಯಾದ   ಧರ್ಮರಾಜ್ ಚಡಚಣ ಜತೆಗೆ ಓಡಾಡಿಕೊಂಡಿದ್ದ.

  

222   ಯಡಿಯೂರಪ್ಪ ವಿರುದ್ಧ ಪ್ರತಿಭಟನೆ
 ನವೆಂಬರ್- 30
 ವಿಜಯಪುರ: ಬಿಜೆಪಿಯಿಂದ ಉಚ್ಛಾಟಿತಗೊಂಡಿರುವ ವಿಧಾನ ಪರಿಷತ್ ಸದಸ್ಯ ಬಸವನಗೌಡ ಪಾಟೀಲ ಯತ್ನಾಳ್   ಅವರನ್ನು ಮರಳಿ ಪಕ್ಷಕ್ಕೆ ಸೇರಿಕೊಳ್ಳಬೇಕು ಎಂದು ಒತ್ತಾಯಿಸಿ ಯತ್ನಾಳ್ ಅಭಿಮಾನಿಗಳು ಯಡಿಯೂರಪ್ಪ ಮುಂದೆಯೇ   ಪ್ರತಿಭಟನೆ ಮಾಡಿದರು.
 ವಿಜಯಪುರದ ಮುದ್ದೆಬಿಹಾಳದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ ಅವರು   ಯಾತ್ನಾಳ್ ಅಭಿಮಾನಿಗಳ ಪ್ರತಿಭಟನೆ ಎದುರಿಸಬೇಕಾಯಿತು.
 ವೇದಿಕೆ ಮುಂಭಾಗವೇ ಬಾರಿ ಸಂಖ್ಯೆಯಲ್ಲಿ ಯತ್ನಾಳ್ ಅಭಿಮಾನಿಗಳು, ಯತ್ನಾಳ್ ಭಾವ ಚಿತ್ರ ಮತ್ತು ಹುಲಿಯ   ಚಿತ್ರಗಳನ್ನು  ಕೈಯಲ್ಲಿ ಹಿಡಿದು ಪ್ರತಿಭಟನೆ ಮಾಡಿದರು.
 ಪ್ರತಿಭಟನಾಕಾರರನ್ನು ಸುಮ್ಮನಾಗಿಸಲು ಹೋದಾಗ ಯತ್ನಾಳ ಅಭಿಮಾನಿಗಳ ಜೊತೆಗೆ ಬಿಜೆಪಿಯ ಅರವಿಂದ ಲಿಂಬಾವಳಿ   ನಡುವೆ ಮಾತಿನ ಚಕಮಕಿ ನಡೆಯಿತು, ಜೋರು ಘೋಷಣೆಗಳನ್ನು ಕೂಗುತ್ತಿದ್ದ ಯತ್ನಾಳ ಅಭಿಮಾನಿಗಳನ್ನು   ನಿಯಂತ್ರಿಸುವಲು ಪೊಲೀಸರೂ ಹರ ಸಾಹಸ ಪಟ್ಟರು.
 ಈ ಮುಂಚೆ ವಿಜಯಪುರದಲ್ಲಿಯೇ ಯಡಿಯೂರಪ್ಪ ಹಾಗೂ ಬಸವನಗೌಡ ಪಾಟೀಲ ಯತ್ನಾಳ್ ಮಾತುಕತೆ ನಡೆಸಿದ್ದರು.   ಯತ್ನಾಳ್ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಲೆಂದೇ ಈ ಮಾತುಕತೆ ನಡೆಸಲಾಗಿದೆ ಎಂದೇ ಎಲ್ಲರು ಭಾವಿಸಿದ್ದರು.
 ಆದರೆ ಈಗ ಯತ್ನಾಳ್ ಅಭಿಮಾನಿಗಳು ಪ್ರತಿಭಟಿಸುತ್ತಿರುವುದು ನೋಡಿದರೆ ಮಾತುಕತೆ ವಿಫಲವಾದಂತೆ ಕಾಣುತ್ತಿದೆ.   ಹಾಗಾಗಿಯೇ ಯತ್ನಾಳ್ ಅವರು ಒತ್ತಡ ಹೇರುವ ತಂತ್ರದ ಮೊರೆ ಹೋಗಿದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ.

  

666  ನಿಧಿ ಆಸೆಗೆ ಭೂಮಿ ಅಗೆದ ಕಿಡಿಗೇಡಿಗಳು
 ನವೆಂಬರ್-28
 ವಿಜಯಪುರ: ನಿಧಿ ಆಸೆಗೆ ಭೂಮಿ ಅಗೆದು ಅಲ್ಲಿದ್ದ ಬಸವಣ್ಣನ ಮೂರ್ತಿಯನ್ನು ಕಿಡಿಗೇಡಿಗಳು ತೆಗೆದು ಬಿಸಾಡಿರುವ  ಘಟನೆ ನಗರದ ಗೋಳಗುಮ್ಮಟ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ  ತಡರಾತ್ರಿ ಈ ಘಟನೆ ನಡೆದಿದ್ದು, ಜನರು ಆತಂಕಗೊಂಡಿದ್ದಾರೆ. ಎಸ್.ವಿ.ಪಾಟೀಲ್ ಎಂಬುವರಿಗೆ ಸೇರಿದ ಜಾಗದಲ್ಲಿ  ದುಷ್ಕರ್ಮಿಗಳು ಸುಮಾರು 8 ಅಡಿ ಅಗೆದಿದ್ದಾರೆ. ಭೂಮಿ ಅಗೆಯುವಾಗ ಚಿಕ್ಕದಾದ ಬಸವಣ್ಣನ ಮೂರ್ತಿ ಸಿಕ್ಕಿದ್ದು,  ಅದನ್ನು ಅಲ್ಲೇ ಬಿಸಾಡಿ ಹೋಗಿದ್ದಾರೆ. ಬೆಳಗ್ಗೆ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಗೋಳಗುಮ್ಮಟ ಠಾಣೆ  ಪೊಲೀಸರು ಸ್ಥಳಕ್ಕಾಗಮಿಸಿ ಬಸವಣ್ಣನ ಮೂರ್ತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳಿಗೆ ಬಲೆ  ಬೀಸಿದ್ದಾರೆ.

 

   gg ಶಿವಸೇನೆ ಬಾಗಿಲು ತಟ್ಟಲಿರುವ ಬಸನಗೌಡ ಪಾಟೀಲ್
ನವೆಂಬರ್.24
ವಿಜಯಪುರ: ಬಿಜೆಪಿಯಿಂದ ಒಂದಲ್ಲ, ಎರಡು ಬಾರಿಗೆ ಉಚ್ಚಾಟಿಸಲ್ಪಟ್ಟು, ಜೆಡಿಎಸ್ ಸೇರ್ಪಡೆಯಾಗಿ ಅಲ್ಲಿಂದ ಹೊರಬರುವ ಮೂಲಕ ಮತ್ತೆ ಮಾತೃಪಕ್ಷ ಬಿಜೆಪಿ ಸೇರ್ಪಡೆಯಾಗಬೇಕೆಂಬ ಕೇಂದ್ರ ಮಾಜಿ ಸಚಿವ ಬಸನಗೌಡ ಪಾಟೀಲ ಅವರ ಕನಸು ಕನಸಾಗಿಯೇ ಉಳಿದಿದೆ. ಇದೀಗ ಮಹಾರಾಷ್ಟ್ರ ಮೂಲದ ಶಿವಸೇನೆ ಪಕ್ಷದ ಬಾಗಿಲು ತಟ್ಟಿದ್ದು, ಜಿಲ್ಲೆ ಹಾಗೂ ರಾಜ್ಯ ರಾಜಕಾರಣದಲ್ಲಿ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ.
ಕರ್ನಾಟಕದಲ್ಲಿ ಶಿವಸೇನೆಯ ರಾಜ್ಯಾಧ್ಯಕ್ಷ ಪಟ್ಟ ಅಲಂಕರಿಸುವ ಮೂಲಕ ಯತ್ನಾಳ ಹೊಸ ರಾಜಕೀಯ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಬಿಸಿ-ಬಿಸಿ ಚರ್ಚೆ ಜಿಲ್ಲೆಯ ರಾಜಕೀಯದಲ್ಲಿ ನಡೆದಿದೆ. ಇನ್ನೊಂದೆಡೆ ಪ್ರಖರ ಹಿಂದೂತ್ವವಾದಿ ಆಗಿರುವ ಯತ್ನಾಳ ಅವರನ್ನು ಶಿವಸೇನೆ ವರಿಷ್ಠರು ಪಕ್ಷದ ಮನೆ ತುಂಬಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗಿದೆ.
ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದ ಹಾಲಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಅವರು ಅಧಿವೇಶನಕ್ಕಾಗಿ ಬೆಳಗಾವಿಯಲ್ಲಿ ತಂಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಪ್ರಬಲವಾಗಿರುವ ಶಿವಸೇನೆ ನಾಯಕರು ಯತ್ನಾಳ ಅವರನ್ನು ಸಂಪರ್ಕಿಸಿ ಪಕ್ಷಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಯತ್ನಾಳ ಸಹಮತ ವ್ಯಕ್ತಪಡಿಸಿದ್ದನ್ನು ನೋಡಿದರೆ, ಯತ್ನಾಳ ಶಿವಸೇನೆ ಬಾಗಿಲು ಪ್ರವೇಶಿಸಬಹುದು ಎಂಬ ಮಾತುಗಳು ಕೇಳಿಬಂದಿವೆ.

 

00  ಟ್ರ್ಯಾಕ್ಟರ್ ಪಲ್ಟಿ ಸ್ಥಳದಲ್ಲಿಯೇ ಇಬ್ಬರ ದುರ್ಮರಣ
 ನವೆಂಬರ್-8
ವಿಜಯಪುರ : ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದು, ಆರು ಜನರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯಪುರ ತಾಲೂಕಿನ ಸಾರವಾಡ ಗ್ರಾಮದ ಬಳಿ ನಡೆದಿದೆ.
ಮೂಲತಃ ಹೈದರಾಬಾದ್ ನಿವಾಸಿಗಳಾದ ಬೇಗಂ ತೆಗ್ಗೆಳ್ಳಿ (28) ಹಾಗೂ ಮಹಾನಂದಾ ಹಡಪದ (30) ಮೃತ ದುರ್ದೈವಿಗಳು. ಗಾಯಾಳುಗಳನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಟ್ರ್ಯಾಕ್ಟರ್ನಲ್ಲಿದ್ದ ಎಲ್ಲರೂ ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಹೈದ್ರಾ ನಿವಾಸಿಗಳು ಎಂದು ತಿಳಿದು ಬಂದಿದೆ. ಮಹಾರಾಷ್ಟ್ರದಿಂದ ಕಬ್ಬು ಕಟಾವು ಕೆಲಸಕ್ಕಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣಕ್ಕೆ ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಸುಮಾರು ಬೆಳಗ್ಗೆ 6 ಗಂಟೆಗೆ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಅಪಘಾತ ನಡೆದ ಸ್ಥಳಕ್ಕೆ ಬಬಲೇಶ್ವರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  

00   ಸಿಲಿಂಡರ್ ಸ್ಫೋಟಕ್ಕೆ ಮನೆ ಜಖಂ
 ನವೆಂಬರ್-2
ವಿಜಯಪುರ : ಅಡುಗೆ ಮಾಡುತ್ತಿದ್ದ ವೇಳೆ ಸಿಲಿಂಡರ್ ಸ್ಪೋಟಗೊಡು ಮನೆ ಜಖಂಗೊಂಡರೂ ಮನೆಯವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಪಡಗಾನೂರ ಗ್ರಾಮದಲ್ಲಿ ಮಧ್ಯಾಹ್ನ ನಡೆದಿದೆ. ಗ್ರಾಮದ ಮೆಹಬೂಬ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ವೃದ್ಧೆಯೊಬ್ಬರೇ ಇದ್ದರು. ಅಡುಗೆ ಮಾಡುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಆಕೆ ಮನೆಯಿಂದ ಹೊರಗೆ ಓಡಿಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಲಿಡರ್ ಸ್ಫೋಟಕ್ಕೆ ತಗಡಿನ ಮನೆ ಜಖಂಗೊಂಡಿದೆ. ಮನೆಯಲ್ಲಿದ್ದ ದವಸ, ಧಾನ್ಯ, ಬಟ್ಟೆ, ಗೃಹೋಪಯೋಗಿ ವಸ್ತುಗಳು ನಾಶವಾಗಿವೆ. ದೇವರ ಹಿಪ್ಪರಗಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 

   ಎಂ.ಬಿ.ಪಾಟೀಲ್ ಸಿಎಂ ಆಗುವ ಕನಸು ನಸಾಗುತ್ತಾ?

ನವೆಂಬರ್.1

ವಿಜಯಪುರ: ಸಿಎಂ ಆಗುವ ಆಸೆ ನನಗೂ ಇದೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ. ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆ. ನಂತರ ನಾನು ಸಿಎಂ ಅಗುವ ಸರದಿ ಬರುತ್ತದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

                                                                                                        

   

44

  ಭೀಮಾತೀರದ ಪಾತಕ ಧರ್ಮರಾಜ ಗುಂಡಿಗೆ ಬಲಿ

 ಅಕ್ಟೋಬರ್-30
ವಿಜಯಪುರ : ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ.ಇಂಡಿ ತಾಲೂಕಿನ ಚಡಚಣ ಹತ್ತಿರದ ಕೊಂಕಣಗಾಂವ್ ಗ್ರಾಮದ ಬಳಿ ಇಂದು ಬೆಳಿಗ್ಗೆ ಚಡಚಣ ಪೊಲೀಸರು ಮತ್ತು ಭೀಮಾತೀರದ ಪಾತಕ ಧರ್ಮರಾಜ ಚಡಚಣ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಧರ್ಮರಾಜ ಚಡಚಣ ಸಾವಿಗೀಡಾಗಿದ್ದಾನೆ.
ಘಟನೆಯಲ್ಲಿ ಚಡಚಣ ಪಿಎಸ್ಸೈ ಗೋಪಾಲ ಹಳ್ಳೂರ ಗಾಯಗೊಂಡಿದ್ದಾರೆ. ಧರ್ಮರಾಜ ಬಲಗೈ ಬಂಟ ಶಿವಾನಂದ ಬಿರಾದಾರಎಂಬಾತನಿಗೆ ಪೊಲೀಸರ ಗುಂಡು ತಗುಲಿದೆ.
ಇಂಡಿ ತಾಲೂಕಿನ ಕೊಂಕಣಗಾಂವ್ ಬಳಿ ನಡೆದ ಈ ಶೂಟೌಟ್ ಪ್ರಕರಣ ಜನತೆಯನ್ನು ಬೆಚ್ಚಿ ಬೀಳಿಸಿದೆ. ಭೀಮಾತೀರದ ಹಂತಕ ಧರ್ಮರಾಜ ಚಡಚಣ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಇವೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಬೆಳಿಗ್ಗೆ 6.30 ರ ಸುಮಾರಿಗೆ ಪಿಎಸ್ಸೈ ಗೋಪಾಲ ಹಳ್ಳೂರ ಮತ್ತು ಸಿಬ್ಬಂದಿಯವರು ಧರ್ಮರಾಜ ಮನೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿಗೆ ಬಂದ ಪಿಎಸ್ಐ ಗೋಪಾಲ ಅವರನ್ನು ನೋಡಿದ ತಕ್ಷಣ ತಪ್ಪಿಸಿ ಕೊಳ್ಳಲು ಯತ್ನಿಸಿದ ರೌಡಿ ಧರ್ಮರಾಜ ಪಿಸ್ತೂಲಿನಿಂದ ಒಂದು ಸುತ್ತು ಗುಂಡು ಹಾರಿಸಿದ್ದಾನೆ.ಗುಂಡೇಟು ತಗುಲಿ ಗಾಯಗೊಂಡರೂ ಎದೆಗುಂದದೇ ಪ್ರತಿಯಾಗಿ ಗೋಪಾಲ ಅವರು ಎರಡು ಸುತ್ತು ಗುಂಡು ಹಾರಿಸಿದ್ದು,ಗುಂಡು ತಗುಲಿದ ಧರ್ಮರಾಜ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವನನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಬಿಎಲ್ಡಿಇ ಆಸ್ಪತ್ರೆಗೆ ಸೇರಿಸಲಾಯಿತು. ಆಸ್ಪತ್ರೆಯಲ್ಲಿ ಧರ್ಮರಾಜ ಚಡಚಣ ಮೃತಪಟ್ಟನೆಂದು ವಿಜಯಪುರ ಎಸ್ಪಿ ಕುಲದೀಪ ಕುಮಾರ ಜೈನ್ ತಿಳಿಸಿದ್ದಾರೆ.ಧರ್ಮರಾಜ ಮನೆಯ ಮೇಲೆ ದಾಳಿ ನಡೆಸಿದಾಗ 2 ಲಾಂಗ್ ರೆಂಜ್ ಬಂದೂಕು, 5 ಕಂಟ್ರಿ ಪಿಸ್ತೂಲು,1 ಸರ್ವಿಸ್ ಪಿಸ್ತೂಲು ಪತ್ತೆಯಾಗಿವೆ.
ಘಟನೆಯಲ್ಲಿ ಗಾಯಗೊಂಡ ಪಿಎಸ್ಸೈ ಗೋಪಾಲ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಧರ್ಮರಾಜನ ಸಹಚರ ಶಿವಾನಂದ ಬಿರಾದಾರನಿಗೆ ಚಡಚಣದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ಎಸ್ಪಿ ಭೇಟಿ:
ಘಟನಾ ಸ್ಥಳಕ್ಕೆ ಎಸ್ಪಿ ಕುಲದೀಪ ಕುಮಾರ್ ಜೈನ್ ಹೆಚ್ಚುವರಿ ಎಸ್ಪಿ ಶಿವಕುಮಾರ ಗುಣಾರೆ ಆಗಮಿಸಿ ಪರಿಶೀಲಿಸಿದರು.ಘಟನೆಯಿಂದಾಗಿ ಕೊಂಕಣಗಾಂವ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಅಪರಾಧ ಹಿನ್ನೆಲೆ:
ಪಾತಕಿ ಧರ್ಮರಾಜನು 2008 ಮೇ 15 ರಲ್ಲಿ ಉಮರಾಣಿ ಗ್ರಾಮದ ಪುತ್ರಪ್ಪ ಸಾಹುಕಾರ ಮೇಲೆ ಗುಂಡಿನ ದಾಳಿ ನಡೆಸಿದ್ದ.ಲೋಣಿ ಬಿಕೆ ಗ್ರಾಮದ ದಾಳಿಗೂ ಕಾರಣನಾಗಿದ್ದ, 2014 ರ ನವೆಂಬರ್ 7 ರಂದು ವಿಜಯಪುರ ನಗರದಲ್ಲಿ ಪಾಲಿಕೆಯ ಅಂದಿನ ಮೇಯರ್ ಸಜ್ಜಾದೆ ಪೀರಾ ಮುಶ್ರೀಫ್ ಸಹೋದರ ಪುತ್ರ ಫಯಾಜ್ ಮುಶ್ರೀಫ್ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ,ಇವೆಲ್ಲ ಆರೋಪ ಸೇರಿದಂತೆ ಹಫ್ತಾ ವಸೂಲಿ,ಮರುಳು ಮಾಫಿಯಾ ಸುಫಾರಿ ಪಡೆದು ಕೊಲೆ ಮೊದಲಾದ ಗಂಭೀರ ಅಪರಾಧ ಪ್ರಕರಣಗಳಲ್ಲಿ ಇವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿತ್ತು. ಪುತ್ರಪ್ಪ ಸಾಹುಕಾರ ಭೈರಗೊಂಡ ಮತ್ತು ಫಯಾಜ್ ಮುಶ್ರೀಫ್ ಕೊಲೆಯ ಆರೋಪಿಯಾಗಿ ಜೈಲು ಸೇರಿದ್ದ ಧರ್ಮರಾಜ ಕೆಲವು ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರಬಂದು ಮಾರಕಾಸ್ತ್ರ ಸಂಗ್ರಹಿಸಿ ಮತ್ತೊಂದು ಕೊಲೆಗೆ ಸಜ್ಜಾಗುತ್ತಿದ್ದ ಎಂದು ತಿಳಿದುಬಂದಿದೆ.
ಪೊಲೀಸರಿಗಿಲ್ಲ ರಕ್ಷಣೆ:
ಪೊಲೀಸ್ ಅಧಿಕಾರಿಗಳ ರಕ್ಷಣೆ ಇಲ್ಲದಂತಾಗಿದೆ. ಅಧಿಕಾರಿಗಳ ಮೇಲೆ ಹೀಗೆ ದಾಳಿಯಾದರೆ ಹೇಗೆ ? ರಾಜ್ಯ ಸರಕಾರ ಮೊದಲು ರೌಡಿಶೀಟರುಗಳನ್ನು ಮಟ್ಟ ಹಾಕುವ ಕೆಲಸ ಮಾಡಬೆಕು ಎಂದು ಪಿ ಎಸ್ ಐ ಗೋಪಾಲ ಹಳ್ಳೂರ ಅವರ ಸಂಬಂಧಿ ಬಸಪ್ಪ ಹೊನವಾಡ ಪ್ರತಿಕ್ರಿಯೆ ನೀಡಿದ್ದಾರೆ

  

44  ಭೀಮಾ ತೀರದ ಹಂತಕನಿಂದ ಪಿಎಸ್ಐ ಮೇಲೆ ಗುಂಡಿನ ದಾಳಿ
 ಅಕ್ಟೋಬರ್-30
ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದ್ದು, ಭೀಮಾ ತೀರದ ಹಂತಕ ಚಡಚಣ ಪಿಎಸ್ಐ ಮೇಲೆ ಗುಂಡು ಹಾರಿಸಿದ ಘಟನೆ ಜಲ್ಲೆಯ ಇಂಡಿ ತಾಲೂಕಿನ ಕೊಂಕಣಗಾಂವ್ ಗ್ರಾಮದ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ.
ಪಿಎಸ್ಐ ಗೋಪಾಲ್ ಹಳ್ಳೂರ್ ಎಂಬುವವರು ಗಾಯಗೊಂಡವರು, ಬೆಳಗ್ಗೆ ಕೊಂಕಣಗಾಂವ್ ಗ್ರಾಮದ ಬಳಿ ಭೀಮಾ ತೀರದ ಹಂತಕ ಧರ್ಮರಾಜ್ನ ವಿಚಾರಣೆಗೆ ತೆರಳಿದ್ದ ಸಂದರ್ಭದಲ್ಲಿ ಪೊಲೀಸರು ಹಾಗೂ ಧರ್ಮರಾಜ್ ಮಧ್ಯೆ ಗುಂಡಿನ ಚಕಮಕಿ ನಡೆದಿತ್ತು. ಧರ್ಮರಾಜ್ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಸಹ ಧರ್ಮರಾಜ್ ಮೇಲೆ ಗುಂಡು ಹಾರಿಸಿದ್ದಾರೆ, ಪಿಎಸ್ಐ ಹಳ್ಳೂರ್ ಮತ್ತು ಆರೋಪಿಗೆ ಎರಡೆರಡು ಗುಂಡು ತಗುಲಿವೆ ಎನ್ನಲಾಗಿದೆ. ಪಿಎಸ್ಐ ಹಳ್ಳೂರ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಎಸ್ಪಿ ಕುಲದೀಪ್ ಕುಮಾರ್ ಜೈನ್, ಹೆಚ್ಚುವರಿ ಎಸ್ಪಿ ಶಿವಕುಮಾರ್ ಗುಣಾರೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

  

gg    14ನೇ ರಾಷ್ಟ್ರೀಯ ಯುವ ಸಂಸತ್ ಸ್ಪರ್ಧೆ
ಅಕ್ಟೋಬರ್.28
ವಿಜಯಪುರ: ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿವಿ ಹಾಗೂ ಭಾರತ ಸರಕಾರದ ಸಂಸದೀಯ ವ್ಯವಹಾರ ಸಚಿವಾಲಯದ ಸಹಯೋಗದಲ್ಲಿ 14ನೇ ರಾಷ್ಟ್ರೀಯ ಯುವ ಸಂಸತ್ ಸ್ಪರ್ಧೆ ಅ.31ರಂದು ಬೆಳಗ್ಗೆ 11 ಕ್ಕೆ ವಿವಿಯ ಡಾ. ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ನಡೆಯಲಿದೆ.
ಈ ಸಂಸತ್ ಸ್ಪರ್ಧೆಯಲ್ಲಿ ವಿವಿ ಕ್ಯಾಂಪಸ್ನ 58 ವಿದ್ಯಾರ್ಥಿನಿಯರು ಪಾಲ್ಗೊಳ್ಳಲಿದ್ದಾರೆ. ಸಂಸತ್ನಲ್ಲಿ ನಡೆಯುವ ಮಾದರಿಯಲ್ಲೇ ಆರಂಭದಲ್ಲಿ ಅಗಲಿದ ನಾಯಕರಿಗೆ ಶ್ರದ್ಧಾಂಜಲಿ, ಪ್ರಶ್ನೋತ್ತರ ಅವಧಿ, ಗಮನಸೆಳೆಯುವ ಸೂಚನೆ, ಅವಿಶ್ವಾಸ ಗೊತ್ತುವಳಿ ಮಂಡನೆ, ಬಿಲ್ ಪ್ರಜಂಟೇಶನ್ ಮತ್ತಿತರೆ ಕಾರ್ಯಕ್ರಮ ನಡೆಯಲಿವೆ. ಇದಕ್ಕೂ ಮುನ್ನ ಮಾಜಿ ಸಚಿವ ಅಜಯಕುಮಾರ್ ಸರನಾಯಕ, ಕಲಬುರಗಿ ಕೇಂದ್ರೀಯ ವಿವಿ ಕುಲಸಚಿವ ಪ್ರೊ. ಚಂದ್ರಕಾಂತ ಯಾತನೂರ, ಶಿವಾಜಿ ವಿವಿಯ ಡಾ. ಪ್ರಲ್ಹಾದ್ ಮಾನೆ, ಸಂಸತ್ ಸದಸ್ಯರನ್ನುದ್ದೇಶಿಸಿ ಮಾತನಾಡುವರು. ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಅಧ್ಯಕ್ಷತೆ ವಹಿಸುವರು ಎಂದು ವಿವಿ ಪ್ರಕಟಣೆ ತಿಳಿಸಿದೆ.

 

                                                                                                                                                            ಟಿಕೆಟ್ ಗಾಗಿ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಸಿಲ್ಲ'
 ಅಕ್ಟೋಬರ್ -23
ವಿಜಯಪುರ: 'ಪ್ರಜ್ವಲ್ ರೇವಣ್ಣ ಯಾವ ಕ್ಷೇತ್ರದಲ್ಲಿ ಸ್ಫರ್ಧಿಸುತ್ತಾರೆ ಎಂಬುದು ನಿಗದಿಯಾಗಿಲ್ಲ. ಟಿಕೆಟ್ ಗಾಗಿ ಪ್ರಜ್ವಲ ರೇವಣ್ಣ ಇದುವರೆಗೆ ಅರ್ಜಿ ಸಲ್ಲಿಸಿಲ್ಲ' ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪುರ ಹೇಳಿದ್ದಾರೆ.
'ಪ್ರಜ್ವಲ್ ಅವರು ಅರ್ಜಿ ಸಲ್ಲಿಸಿದರೆ ಆ ಬಗ್ಗೆ ಜೆಡಿಎಸ್ ಸಂಸದಿಯ ಮಂಡಳಿಯಲ್ಲಿ ಚರ್ಚೆ ನಡೆಸಲಾಗುವುದು, ಆ ಬಳಿಕ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡುವ ಬಗ್ಗೆ ವರಿಷ್ಠರಾದ ಎಚ್ ಡಿ ದೇವೇಗೌಡ ಅವರು ನಿರ್ಧರಿಸುತ್ತಾರೆ' ಎಂದು ಬಂಡೆಪ್ಪ ಕಾಶಂಪುರ ಹೇಳಿದರು. ಜ್ಯದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು : ಮಹಾದಾಯಿ, ಕಾವೇರಿ ವಿಚಾರದಲ್ಲಿ ದೇವೇಗೌಡರು ನಿರಂತರ ಹೋರಾಟ ಮಾಡಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನಮ್ಮ ಆದ್ಯತೆ ಬಡತನ ನಿವಾರಣೆ, 5 ಲಕ್ಷ ಉದ್ಯೋಗ ಸೃಷ್ಟಿ ಮಾಡುವುದಾಗಿ ಎಂದರು.
ಕುಮಾರಸ್ವಾಮಿ ಇಸ್ರೇಲ್ನಲ್ಲಿ ಕೃಷಿ ಬಗ್ಗೆ ಅಧ್ಯಯನ ಮಾಡಿದ್ದಾರೆ. ಜೆಡಿಎಸ್ ಅಧಿಕಾರಿಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ 25 ಸಾವಿರ ಮನ್ನಾ ಮಾಡಿದ್ದರು. ಆತ್ಮಹತ್ಯೆ ಮಾಡಿಕೊಂಡ ರೈತರಿಗಾಗಿ ಈಗಿನ ಸರ್ಕಾರ ಯಾವುದೇ ಕಾರ್ಯಕ್ರಮವನ್ನ ಜಾರಿಗೆ ತಂದಿಲ್ಲ ಎಂದರು.
ರಾಜ್ಯ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ನೀರಾವರಿ ಸಚಿವ ಎಂಬಿ ಪಾಟೀಲ್ ಕೇವಲ ತಮ್ಮ ಜಿಲ್ಲೆಗೆ ಮಾತ್ರ ಸೀಮಿತರಾಗಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಎಂಬಿ ಪಾಟೀಲ್ ಒಂದೇ ಒಂದು ಕೆರೆ ತುಂಬಿಸಿಲ್ಲ ಎಂದು ಆರೋಪಿಸಿದರು.
ಕರ್ನಾಟದಲ್ಲಿ ಮೊದಲ ಬಾರಿಗೆ ಜೆಡಿಎಸ್ ಟಿಪ್ಪು ಜಯಂತಿಯನ್ನು ಆಚರಣೆ ಮಾಡಿದೆ. ಜೆಡಿಎಸ್ ಕಚೇರಿಯಲ್ಲಿ ಬಹಳ ವರ್ಷಗಳಿಂದ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ ಎಂದು ಹೇಳಿದರು.ಈ ಹಿಂದೆ ಬಿಎಸ್ವೈ ಕೆಜೆಪಿ ಕಟ್ಟಿದಾಗ ಟಿಪ್ಪು ಜಯಂತಿ ಆಚರಿಸಿದ್ದರು, ಈಗ ಅವರೇ ವಿರೋಧಿಸುತ್ತಿರುವುದು ವಿಪರ್ಯಾಸ.

 

    

ವರ್ಷಗಳೇ ಕಳೆದರೂ ಉದ್ಘಾಟನೆ ಯಾಗದ ಶೌಚಾಲಯ
ಅಕ್ಟೋಬರ್.23
ವಿಜಯಪುರ: ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯ ಕಟ್ಟಿಸಿ ವರ್ಷಗಳೇ ಕಳೆದರೂ ಉದ್ಘಾಟನೆ ಮಾತ್ರ ಆಗಿಲ್ಲ.
ಜಿಲ್ಲೆಯ ಕನಮಡಿ ಗ್ರಾಮದಲ್ಲಿ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ ಮೂರುಗಳೇ ಆಗುತ್ತ ಬಂತು ಆದರೆ, ಇನ್ನೂ ಕೂಡ ಅದರ ಉದ್ಘಾಟನೆಯ ಮುಹೂರ್ತ ಕೂಡಿ ಬಂದಿಲ್ಲ.
ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ಮಹಿಳೆಯರು ರಸ್ತೆಯ ಮೇಲೆ ಶೌಚಕ್ಕೆ ಹೋಗುವ ಪರಿಸ್ಥಿತಿ ಇದೆ. ಪುರುಷರು ತಿರುಗಾಡುವಂತ ಸ್ಥಳದಲ್ಲಿಯೇ ಮಹಿಳೆಯರು ಶೌಚಕ್ಕೆ ಹೋಗಬೇಕು.
ರಾತ್ರಿ ಅಥವಾ ನಸುಕಿನ ವೇಳೆ ಹೇಗೋ ಬಯಲು ಶೌಚಕ್ಕೆ ಹೋಗಬಹುದು. ಆದರೆ, ಮಧ್ಯಾಹ್ನದ ಸಮಯದಲ್ಲಿ ಮಹಿಳೆಯರು ಏನು ಮಾಡಬೇಕು. ರಸ್ತೆ ಮೇಲೆ ಕೂತಾಗ ಗಂಡು ಮಕ್ಕಳು ಬೇಕಂತಲೇ ಆ ಸ್ಥಳದಿಂದಲೇ ಸಚರಿಸುತ್ತಾರೆ. ಆಗ ಮಹಿಳೆಯರಿಗೆ ಮುಜುಗರವಾದರು ಸಹ, ಸುಮ್ಮನೆ ಸಹಿಸಿಕೊಳ್ಳಬೇಕು. ಪುಂಡ, ಪೋಕರಿಗಳು ಶೌಚಕ್ಕೆ ಕುಳಿತಿರುವ ಮಹಿಳೆಯರನ್ನು ಚೇಡಿಸುತ್ತಾರೆ.
ಈ ಶೌಚಾಲಯದ ಕಾರಣಕ್ಕೆ ಊರಲ್ಲಿ ಮಹಿಳೆಯರು ಒಂದು ದಿನ ರಸ್ತೆಗೆ ಮುಳ್ಳು ಹಾಕಿ ಪ್ರತಿಭಟನೆ ಮಾಡಿದ್ದರು. ಆದರೂ ಅಧಿಕಾರಿಗಳು ಸುಮ್ಮನೆ ಕುಳಿತಿದ್ದರು. ಕಡೆಗೆ ರಾತ್ರಿ ವೇಳೆಯಾದರು ಸುಮ್ಮನಾಗದ ಮಹಿಳೆಯರ ಗಟ್ಟಿತನಕ್ಕೆ ಮಣಿದು ತಾತ್ಕಾಲಿಕವಾದ ಶೌಚಾಲಯ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಇಲ್ಲಿವರೆಗೂ ಯಾವ ಬದಲಾವಣೆಯೂ ಆಗಿಲ್ಲ.
ಶೌಚಾಲಯ ನಿರ್ಮಾಣ ಕಾರ್ಯ ಮುಗಿದೆ ಮೂರು ವರ್ಷಗಳಾಯಿತು. ಶೌಚಾಲಯಕ್ಕೆ ಬಳಸಲು ನೀರು ಇಲ್ಲ ಎಂಬ ಕ್ಷುಲಕ ಕಾರಣಕ್ಕಾಗಿ ಇನ್ನೂ ಕೂಡ ಉದ್ಘಾಟಿಸಿಲ್ಲ. ಅಲ್ಲದೇ ಕಟ್ಟಡಕ್ಕೆ ಮುಳ್ಳು ಕಂಟಿಯಿಂದ ಬೇಲಿ ಹಾಕಿದ್ದಾರೆ.
ಪಂಚಾಯಿತಿ ಅಧಿಕಾರಿಗಳು ಇದರ ಬಗ್ಗೆ ಯೋಚಿಸದೇ ಕೈ ಕಟ್ಟಿಕೊಂಡು ಕುಳಿತಿದ್ದಾರೆ.

  

33

 ಜನರ ಸಮಸ್ಯೆಗೆ ಓಗೊಡಿ : ಡಾ. ವೀರಸೋಮೇಶ್ವರ

 ಅಕ್ಟೋಬರ್.21
ಹೊರ್ತಿ (ವಿಜಯಪುರ): ಬಸವಣ್ಣನವರ ಹೆಸರಿನಲ್ಲಿ ಸುಳ್ಳು ಹೇಳುತ್ತ ಹೊರಟ ಕೆಲ ರಾಜಕಾರಣಿಗಳ ಕಾರ್ಯ ಸಮಂಜಸವಾದುದ್ದಲ್ಲ. ರಾಜಕಾರಣಿಗಳು ಧರ್ಮ ಪ್ರವೇಶಿಸದೇ ನೀರಾವರಿ ಸೇರಿದಂತೆ ರೈತರ, ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶ್ರೀ ಹೇಳಿದರು.
ಹೊರ್ತಿ ಗ್ರಾಮದಲ್ಲಿ ಧರ್ಮ ಸಭೆ ಉದ್ಘಾಟಿಸಿ ಮಾತನಾಡಿ, ''ಸ್ವತಂತ್ರ ಧರ್ಮದ ವಿಚಾರ ಅಷ್ಟು ಸುಲಭವಲ್ಲ. ಇದೇ ರೀತಿ ಧರ್ಮ ಒಡೆಯುವ ಕಾರ್ಯ ಮುಂದುವರಿದರೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ,'' ಎಂದರು.

 

     

ಡೆಂಗೆ ರೋಗಿಗಳ ಸಂಖ್ಯೆ ಹೆಚ್ಚಳ

ಅಕ್ಟೋಬರ್.21

ವಿಜಯಪುರ: ದಿನೇ ದಿನೆ ಹೆಚ್ಚುತ್ತಿರುವ ಡೆಂಗೆ, ಚಿಕೂನ್‌ಗುನ್ಯಾ ಹಾಗೂ ತೀವ್ರ ಜ್ವರದ ಹಾವಳಿಗೆ ಇಲ್ಲಿನ ಜನರು ಕಂಗಾಲಾಗಿದ್ದಾರೆ.

ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಜಾಗೃತಿ ಕೊರತೆ, ಪಾಲಿಕೆ ನಿರ್ಲಕ್ಷ್ಯದಿಂದ ಮಾರಕ ಸಾಂಕ್ರಾಮಿಕ ರೋಗಗಳಾದ ಡೆಂಗೆ, ಚಿಕೂನ್‌ಗುನ್ಯಾ, ಮಲೇರಿಯಾ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿವೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಕೂಡ ಸೂಕ್ತ ಕ್ರಮ ಕೈಗೊಂಡಿಲ್ಲ.

ದಿನದಿಂದ ದಿನಕ್ಕೆ ದೆಂಗು ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಜನರಲ್ಲಿ ಆತಂಕ ಸೃಷ್ಟಿಸಿದೆ.

  

      ಕಿತ್ತೂರು ರಾಣಿ ಚನ್ನಮ್ಮ ಕತ್ತಿ ಮರಳಿ ತನ್ನಿ: ಮೃತ್ಯುಂಜಯ ಸ್ವಾಮೀಜಿ
ಅಕ್ಟೋಬರ್.18
ವಿಜಯಪುರ: ಲಂಡನ್ನಿನ ಗ್ರಂಥಾಲಯದರಲ್ಲಿ ಇರುವ ಕಿತ್ತೂರ ಚನ್ನಮ್ಮನ ಖಡ್ಗವನ್ನು ಒಂದು ವರ್ಷದೊಳಗಾಗಿ ಮರಳಿ ನಾಡಿಗೆ ತರಬೇಕು ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮಂಗಳವಾರ ಇಲ್ಲಿ ಆಗ್ರಹಿಸಿದರು.
ಸಮಾಜದ ಜನರಿಂದಲೇ ದೇಣಿಗೆ ಸಂಗ್ರಹಿಸಿ ಖಡ್ಗ ವಾಪಸ್ ತರಲು ಯತ್ನಿಸಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದೇ 23ರಂದು ವಿಧಾನಸೌಧದ ಆವರಣದಲ್ಲಿ ನಡೆಯಲಿರುವ, ಚನ್ನಮ್ಮನವರ 239ನೇ ಜಯಂತ್ಯುತ್ಸವದ ಸಂದರ್ಭ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಗ್ಗೆ ಮನವಿ ನೀಡಲಾಗುವುದು ಎಂದರು.
ವಿದೇಶಾಂಗ ಸಚಿವರೂ ಮಹಿಳೆಯೇ ಆಗಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ವೀರ ರಾಣಿಯ ಖಡ್ಗವನ್ನು ವಾಪಸ್ ತರುವ ಕೆಲಸ ಮಾಡಬೇಕಿದೆ. ಟಿಪ್ಪುಸುಲ್ತಾನ್ ಖಡ್ಗ ಖಾಸಗಿ ವ್ಯಕ್ತಿಯ ಪಾಲಾದಂತೆ, ಚನ್ನಮ್ಮನವರ ಖಡ್ಗವೂ ಖಾಸಗಿಯವರ ಪಾಲಾಗದಂತೆ ಕೇಂದ್ರ– ರಾಜ್ಯ ಸರ್ಕಾರಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.
ಚನ್ನಮ್ಮನವರ ಖಡ್ಗದ ಜತೆ ಸಂಗೊಳ್ಳಿ ರಾಯಣ್ಣನವರ ಖಡ್ಗವೂ ಇದೆ ಎಂದು ಹೇಳಲಾಗುತ್ತಿದೆ. ಸಮರ್ಪಕ ಅಧ್ಯಯನ ನಡೆಸಿ ಸ್ವಾತಂತ್ರ್ಯ ಹೋರಾಟಗಾರರಿಬ್ಬರ ಖಡ್ಗವನ್ನು ತಾಯ್ನಾಡಿಗೆ ಮರಳಿ ತರಬೇಕು ಎಂದು ಅವರು ಒತ್ತಾಯಿಸಿದರು.

 

 

        

ಮರಣ ಗುಂಡಿಗಳನ್ನು ಮುಚ್ಚಿ

ಅಕ್ಟೋಬರ್.17

ವಿಜಯಪುರ: ಮರಣ ಗುಂಡಿಗಳಂತೆ ಎಲ್ಲೆಡೆ ಕಾಣುವ ತಗ್ಗು-ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ವತಿಯಿಂದ ಮಹಾನಗರ ಪಾಲಿಕೆಗೆ ಮನವಿ ಪತ್ರ ಸಲ್ಲಿಸಲಾಯಿತು.

ಜಿಲ್ಲಾ ಸಂಚಾಲಕ ರೋಹನ್‌ ಐನಾಪೂರ, ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನೆಲೆಯಲ್ಲಿ ಗೋಡೆ, ಚಾವಣಿ ಕುಸಿತದಿಂದ ಅನೇಕರು ಪ್ರಾಣ ಕಳೆದುಕೊಂಡಿದ್ದು, ನಗರದ ಗೋಳಗುಮ್ಮಟ ಹಿಂದಿನ ರಸ್ತೆಯಲ್ಲಿ ಅನೇಕ ವರ್ಷಗಳಿಂದ ಅಪಾಯಕಾರಿ ಗುಂಡಿಗಳಿವೆ. ಅಲ್ಲಿ ಸಣ್ಣ ವ್ಯಾಪಾರಿಗಳು, ಅಟೋ ಚಾಲಕರು, ಕೂಲಿಕಾರ್ಮಿಕರು ಅಲ್ಲಿನ ತಗ್ಗು ಗುಂಡಿಗಳನ್ನು ದಾಟಲು ಹರಸಾಹಸ ಪಡುತ್ತಿದ್ದಾರೆ. ಅನಾಹುತ ಸಂಭವಿಸುವ ಮೊದಲೇ ಜಿಲ್ಲಾಡಳಿತ, ಮಹಾನಗರ ಪಾಲಿಕೆ ನಗರದಲ್ಲಿ ತಗ್ಗು ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಬೇಕು. ಕ್ರಮ ಕೈಗೊಳ್ಳದೇ ಹೋದಲ್ಲಿ ಜಿಲ್ಲಾದ್ಯಂತ ಹೋರಾಟ ಮಾಡಲಾಗುತ್ತದೆ ಎಂದು ತಿಳಿಸಿದರು.

Ads
;